ಸಂಸದರ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಭೇಟಿಯ ಭರವಸೆ ನೀಡಿದರು
ಹುಳಿಯಾರು: ೩೫ದಿನಗಳ ತರವಾಯ ಕೊಬ್ಬರಿ ಹೋರಾಟಗಾರರ ಕೂಗು ಆಲಿಸಿಕೊಂಡ ಶಾಸಕ ಸಿ.ಬಿ.ಸುರೇಶ್ ಬಾಬು ಕಡೆಗೂ ಧರಣಿ ಸ್ಥಳಕ್ಕಾಗಮಿಸಿ ಗಂಟೆಗಳ ಕಾಲ ಪ್ರತಿಭಟನಕಾರರ ಆಕ್ರೋಷ,ನೋವುಗಳನ್ನು ಶಾಂತಚಿತ್ತರಾಗಿ ಆಲಿಸಿ,ಜಿಲ್ಲೆಯ ಕೊಬ್ಬರಿ ಬೆಳೆಯುವ ಎಲ್ಲಾ ತಾಲ್ಲೂಕಗಳ ಶಾಸಕರೊಂದಿಗೆ ಸಂಸದರ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ರೈತರ ಸಮಸ್ಯೆ ಖುದ್ದಾಗಿ ಅವರಿಗೆ ಮನವರಿಕೆ ಮಾಡಿಕೊಡುವ ಮೂಲಕ ಪರಿಹಾರಕ್ಕೆ ದಾರಿಮಾಡಿಕೊಡುವುದಾಗಿ ಭರವಸೆಯಿತ್ತರು.
ಹುಳಿಯಾರಿನ ಕೃಷಿ ಉತ್ಪನ್ನಮಾರುಕಟ್ಟೆಯ ಆವರಣದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಧರಣಿನಿರತರನ್ನು ಉದ್ದೇಶಿಸಿ ಶಾಸಕ ಸಿ.ಬಿ.ಸುರೇಶ್‌ಬಾಬು ಮಾತನಾಡಿದರು. |
ಹುಳಿಯಾರು ಎಪಿಎಂಸಿ ಮುಂದೆ ನಡೆಯುತ್ತಿರುವ ಧರಣಿ ಸ್ಥಳಕ್ಕೆ ೩೫ ನೇ ದಿನವಾದ ಗುರುವಾರದಂದು ಭೇಟಿಯತ್ತ ಅವರನ್ನು ರೈತರು ಮೌನವಹಿಸುವ ಮೂಲಕ ಸ್ವಾಗತಿಸಿದರು.
ತಾಲ್ಲೂಕ್ ಯಜಮಾನರಾದ ತಾವೇ ಈ ರೀತಿ ವರ್ತಿಸಿದರೆ ನಮ್ಮ ಅಳಲನ್ನು ಕೇಳುವರ್ಯಾರು,ಸಂಸದರು,ಮಾಜಿ ಮುಖ್ಯಮಂತ್ರಿಗಳು,ಜಿಲ್ಲಾಧಿಕಾರಿಗಳು ಹೀಗೆ ಎಲ್ಲರು ಬಂದುಹೋದರೂ ಸಹ ಶಾಸಕರಾಗಿ ತಾವು ಇತ್ತ ಮುಖಹಾಕದಿದ್ದು ತರವಲ್ಲ ಎಂದು ತಮ್ಮ ನೋವನ್ನು ಹೊರಹಾಕಿದರು.ನಿಮ್ಮನ್ನು ಚುನಾಯಿಸಿ ಕಳುಹಿಸಿರುವ ರೈತರ ಪರವಾಗಿ ವಿಧಾನಸಭೆಯಲ್ಲಿ ಕೊಬ್ಬರಿ ಬೆಲೆ ಹೆಚ್ಚಿಸುವ ಬಗ್ಗೆ ತಾವೇಕೆ ಇದುವರೆಗೂ ಪ್ರಸ್ತಾಪಿಸಿಲ್ಲಾ. ನಮ್ಮದು ರೈತರ ಪಕ್ಷ ,ನಾವೆಲ್ಲಾ ಮಣ್ಣಿನ ಮಕ್ಕಳು ಎನ್ನುತ್ತೀರಿ. ಆದರೆ ರಾಜ್ಯದಲ್ಲಿ ರೈತರು ಬೆಳೆಯುವ ತೆಂಗು ಕೊಬ್ಬರಿ ಸಮಸ್ಯೆ ಬಗ್ಗೆ ಒಂದು ದಿನವು ಸಹಾ ಯಾರೊಬ್ಬ ಶಾಸಕರು ಸಹಾ ಧ್ವನಿಎತ್ತಿಲ್ಲವೇಕೆ ಎಂದು ಕುಟುಕಿದರು.
ಈ ಪ್ರಯತ್ನವು ಸಹಾ ನಿಮ್ಮಕೈಯಲ್ಲಿ ಆಗದಿದ್ದರೆ ರೈತಸಂಘದ ನೇತೃತ್ವದಲ್ಲಿ ರೈತರು ನಿಮ್ಮ ಮನೆಯ ಮುಂದೆ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಶಾಸಕರಾಗಿ ಇದುವರೆಗೂ ನಮ್ಮ ಸಮಸ್ಯೆ ಆಲಿಸಿಲ್ಲವೆಂಬ ಆರೋಪವನ್ನು ಮೌನವಾಗಿಯೇ ಕುಳಿತು ಆಲಿಸಿದ ಶಾಸಕರು ನಂತರ ಪ್ರತಿಕ್ರಿಯಿಸಿ ಕೊಬ್ಬರಿಗೆ ಸಂಬಂಧಪಟ್ಟಂತೆ ಮೊನ್ನೆಯ ಬೆಳಗಾಂ ಅಧಿವೇಶನದಲ್ಲಿ ಇತರ ಕೊಬ್ಬರಿ ಬೆಳೆಯುವ ತಾಲ್ಲೂಕಿನ ಶಾಸಕರೊಂದಿಗೆ ಚರ್ಚಿಸಿದ್ದೇವೆ. ಅಲ್ಲದೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಹಾ ಇದೇ ವಿಚಾರವಾಗಿ ಅಧಿವೇಶನದಲ್ಲಿ ಚರ್ಚಿಸಿದ್ದಾರೆ. ಆದರೆ ಸರಕಾರ ಯಾವುದಕ್ಕೂ ಸ್ಪಂದಿಸುತ್ತಿಲ್ಲಾವಾದ್ದರಿಂದ ನಮಗೇನು ಮಾಡಲಿಕ್ಕೆ ಸಾಧ್ಯವಾಗುತ್ತಿಲ್ಲ ಎಂದರು.
ನಾನು ಎಂದಿಗೂ ಸಹಾ ರೈತರ ಪರ. ಇದರ ಬಗ್ಗೆ ಯಾರಿಗೂ ಸಂಶಯಬೇಡ. ರೈತರ ಸಂಕಷ್ಟಕ್ಕೆ ನಾನು ಸದಾಕಾಲ ಸ್ಪಂದಿಸುವುದಾಗಿ ತಿಳಿಸಿದ ಅವರು ಪಕ್ಷ ಭೇದ ಮರೆತು ರೈತರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ತೆಂಗು ಬೆಳೆಯುವ ಎಲ್ಲಾ ಕ್ಷೇತ್ರದ ಶಾಸಕರನ್ನು ಈ ಧರಣಿ ಸ್ಥಳಕ್ಕೆ ಕರೆಸಿ ಕೊಬ್ಬರಿ ಬೆಲೆಯ ಬಗ್ಗೆ ಮುಂದಿನ ನಡೆಯ ಬಗ್ಗೆ ಚರ್ಚೆಸಿ ಸಂಸದ ಮುದ್ಧಹನುಮೇಗೌಡರ ನೇತೃತ್ವದಲ್ಲಿ ನಿಯೋಗ ರಚಿಸಿಕೊಂಡು ರೈತ ಮುಖಂಡರೊಂದಿಗೆ ಮುಖ್ಯಮಂತ್ರಿಗಳ ಬಳಿ ಕರೆದೊಯ್ಯುವ ಭರವಸೆ ನೀಡಿದರು.
ಈ ಕುರಿತು ಎಲ್ಲರೆದುರೇ ಸಂಸದ ಮುದ್ಧಹನುಮೇಗೌಡರನ್ನು ಸಂಪರ್ಕಿಸಿ ತಮ್ಮ ಅಭಿಪ್ರಾಯ ತಿಳಿಸಿದರು.ಒಟ್ಟಾರೆ ಗರಂ ಆಗಿದ್ದ ರೈತರನ್ನು ತಣ್ಣಗೆ ಮಾಡುವುದರಲ್ಲಿ ಯಶಸ್ವಿಯಾದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಶ್ರೀನಿವಾಸ್,ಎಪಿಎಂಸಿ ನಿರ್ದೇಶಕ ಶಾಂತಣ್ಣ,ತಾಪಂ ಸದಸ್ಯರುಗಳಾದ ಹೆಚ್.ಎನ್. ಕುಮಾರ್ ಮತ್ತು ಪ್ರಸನ್ನಕುಮಾರ್,ಮುತುವಲ್ಲಿ ಭೈಜುಸಾಬ್,ಪ್ರಸನ್ನಕುಮಾರ್,ಗ್ರಾಪಂ ಸದಸ್ಯೆ ಗೀತಾ ಬಾಬು,ವಕ್ಫ್ ಸಲಹಾ ಸಮಿತಿ ಸದಸ್ಯ ಮಹ್ಮದ್ ಸಜ್ಜಾದ್ ಸೇರಿದಂತೆ ರೈತ ಸಂಘದ ಪ್ರತಿನಿಧಿಗಳು ಹಾಜರಿದ್ದರು.
------------------------
ರೈತರಿಗೆ ನ್ಯಾಯಕೊಡಿಸಲು ನೀವು ಸಹಾ ನಮ್ಮ ಜೊತೆಯಲ್ಲಿಯೇ ಧರಣಿ ಕೂರಿ. ಇಡೀ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜನತೆಯೇ ನಿಮ್ಮೊಂದಿಗೆ ಇರುತ್ತಾರೆ. ಸರ್ಕಾರವೇ ಇಲ್ಲಿಗೆ ಬರುತ್ತದೆ.ಸರ್ಕಾರ ಆಗಲಾದರೂ ಎಚ್ಚೆತ್ತು ಕೊಬ್ಬರಿಗೆ ಕನಿಷ್ಟ ೧೦ ಸಾವಿರ ಬೆಲೆ ನೀಡಬಹುದು: ದಯಾನಂದ್,ಯಳನಾಡು ಗ್ರಾಪಂ ಸದಸ್ಯ
-----------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ