ಬೆಲೆ ಹೆಚ್ಚಳಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೊಂದಿಗೆ ಚರ್ಚಿಸುವೆ
ಹುಳಿಯಾರು:ರಾಜ್ಯದ ತೆಂಗು ಬೆಳೆಗಾರರ ಹಿತಕಾಪಾಡುವ ನಿಟ್ಟಿನಲ್ಲಿ ಜನವರಿ ೪ ರಂದು ತಾನು ದೆಹಲಿಗೆ ತೆರಳುತ್ತಿದ್ದು,ಈ ವೇಳೆ ಕೇಂದ್ರ ಕೃಷಿ ಸಚಿವರನ್ನು ಹಾಗೂ ಪ್ರಧಾನ ಮಂತ್ರಿಗಳನ್ನು ಭೇಟಿಯಾಗಿ ತೆಂಗು ಬೆಳೆಗಾರರ ಸಮಸ್ಯೆಯನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು ರೈತರ ಕೊಬ್ಬರಿಗೆ ಸದ್ಯ ನೀಡಿರುವ ಬೆಂಬಲ ಬೆಲೆಯನ್ನು ಹೆಚ್ಚಿಸುವಂತೆ ಪ್ರಧಾನ ಮಂತ್ರಿಗಳನ್ನು ಒಪ್ಪಿಸುವ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.
ಹುಳಿಯಾರಿನ ಕೃಷಿಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಬುಧುವಾರದಂದು ಭೇಟಿಯಿತ್ತ ಯಡಿಯೂರಪ್ಪನವರು ರೈತರೊಂದಿಗೆ ಚರ್ಚಿಸಿ ಮಾತನಾಡಿದರು. |
ಕೊಬ್ಬರಿ ಬೆಲೆ ಹೆಚ್ಚಿಸುವಂತೆ ಒತ್ತಾಯಿಸಿ ಹುಳಿಯಾರಿನ ಕೃಷಿಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿಯು ೪೮ನೇ ದಿನವಾದ ಬುಧವಾರದಂದು ಭೇಟಿಯಿತ್ತ ಅವರು ರೈತರೊಂದಿಗೆ ಚರ್ಚಿಸಿ ಮಾತನಾಡಿದರು.
ಸರಕಾರ ಈಗ ನೀಡುತ್ತಿರುವ ಬೆಲೆಯಿಂದ ರೈತ ಬದುಕಲು ಸಾಧ್ಯವಿಲ್ಲ.ಬರಗಾಲ ಸಮಸ್ಯೆಯಿಂದ ರೈತ ಕೃಷಿ ಬಿಟ್ಟು ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ.ಬರದಿಂದ ತೆಂಗಿನ ಮರ ಒಣಗಿದ್ದು ಇದೇ ಪರಿಸ್ಥಿತಿ ಮುಂದುವರಿದಲ್ಲಿ ಮೇ ತಿಂಗಳಿನೊಳಗೆ ತೆಂಗು ಉಳಿಸಿಕೊಳ್ಳುವುದೇ ದುಸ್ತರವಾಗುತ್ತದೆ.ಆಗ ತೆಂಗಿನ ತೋಟ ಹಾಳಾಗಿದ್ದಕ್ಕೂ ಪರಿಹಾರ ಕೊಡಬೇಕಾಗುತ್ತದೆ.ಇದನ್ನು ಕೇಂದ್ರಕ್ಕೆ ಮನವರಿಕೆ ಮಾಡಿಕೊಟ್ಟು , ಬೆಲೆ ಹೆಚ್ಚಳ ಮಾಡುವ ನಿಮ್ಮ ನ್ಯಾಯಬದ್ದ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸುವೆ ಎಂದರು.
ಹುಳಿಯಾರಿನ ಕೃಷಿಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿ ರೈತರನ್ನುದ್ದೇಶಿಸಿ ಜೆ.ಸಿ.ಮಾಧುಸ್ವಾಮಿ ಮಾತನಾಡಿದರು. |
ಈಗಾಗಲೆ ದೆಹಲಿಯಲ್ಲಿ ಪ್ರಧಾನ ಮಂತ್ರಿಗಳು ಡಿಸಂಬರ್ ೩೦ ರಂದು ಕರ್ನಾಟಕ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಗಳ ಸಭೆ ಕರೆದಿದ್ದು ಅಲ್ಲಿ ಕೊಬ್ಬರಿ ಬೆಳೆಗಾರರ ಸಮಸ್ಯೆ ಚರ್ಚಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.ಆದರೆ ಸಮಸ್ಯೆ ಏನೆಂದು ಅರಿಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮನ್ನು ಆಹ್ವಾನಿಸಿ ಚರ್ಚಿಸಿಲ್ಲ,ದೆಹಲಿಗೆ ಬನ್ನಿ ಎಂದೂ ಸಹ ಕರೆದಿಲ್ಲಾ. ಆದ್ದರಿಂದ ಕೇಂದ್ರ ಸರಕಾರ ಏನು ಮಾಡುತ್ತೆ ಮತ್ತು ರಾಜ್ಯ ಸರಕಾರ ಏನು ಮಾಡುತ್ತೆ ಎನ್ನುವದನ್ನು ತಿಳಿದುಕೊಂಡು ನಾನು ಜನವರಿ ೪ ರಂದು ಪ್ರಧಾನ ಮಂತ್ರಿಗಳನ್ನ ಭೇಟಿ ಮಾಡಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಅವರ ಮನವೊಲಿಸುವುದಾಗಿ ತಿಳಿಸಿದರು.
ಆಡಳಿತ ನಡೆಸುವ ಈ ಸರಕಾರಕ್ಕೆ ರೈತರ ಬಳಿಗೆ ತೆರಳಿ ಸಮಸ್ಯೆಗಳ ವಸ್ತು ಸ್ಥಿತಿ ಅರಿತು ರೈತರ ಕಷ್ಟಗಳನ್ನು ಪರಿಹರಿಸಲು ವ್ಯವಧಾನ ಇಲ್ಲವಾಗಿದೆ.ರೈತ ಸಂಘದಲ್ಲಿ ಕಳೆದ ಹತ್ತಾರು ವರ್ಷಗಳಿಂದ ವಡನಾಡಿರುವ ನನಗೆ ಒಬ್ಬ ರೈತನ ಮಗನಾಗಿ, ತೆಂಗು ಬೆಳೆಗಾರನಾಗಿ ರೈತರ ಕಷ್ಟ ಏನೆಂದು ನನಗೆ ಅರಿವಿದೆ ಎಂದರು.
ನಾನು ಮುಖ್ಯಮಂತ್ರಿಯಾದ ಅವಧಿಯಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸುವ ರೀತಿ ಕರ್ತವ್ಯ ನಿರ್ವಹಿಸಿದ್ದು ನೀರಾವರಿ ಯೋಜನೆಗೆ, ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ದೆಹಲಿಯಲ್ಲಿ ಕೂತಿದ್ದು ಬೆಂಬಲ ಬೆಲೆ ಘೋಷಣೆ ಮಾಡಿಸಿಕ್ಕೊಂಡೆ ಬಂದಿದ್ದೆ.ಕೊಬ್ಬರಿ ಬೆಳೆಗಾರರ ಸಮಸ್ಯೆ ಬಗ್ಗೆ ನನಗೆ ಮನವಿ ನೀಡಿದಲ್ಲಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದೊಂದಿಗೆ ಮಾತನಾಡಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನನ್ನ ಕೈಲಾದ ಸಹಾಯ ಮಾಡಿಯೇ ತೀರುವುದಾಗಿ ತಿಳಿಸಿದರು.
ಈ ವೇಳೆ ಕುಪ್ಪುರು ಗದ್ದಿಗೆ ಮಠದ ಡಾ:ಯತೀಶ್ವರ ಶಿವಾಚಾರ್ಯ ಸ್ವಾಮಿಜಿ, ಮಾಜಿ ಸಚಿವೆ ಶೋಭಾ ಕರಂದ್ಲಾಜೆ,ಶಾಸಕ ಸುರೇಶ್ ಗೌಡ,ಮಾಜಿ ಸಂಸದ ಬಸವರಾಜ್, ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ ಹಾಗೂ ಕೆ.ಎಸ್.ಕಿರಣ್ ಕುಮಾರ್,ಹುಲಿನಾಯ್ಕರ್,ಜಿಪಂ ಸದಸ್ಯ ಮಹಲಿಂಗಪ್ಪ, ಕೆಂಕೆರೆ ನವೀನ್, ರೈತಮುಖಂಡರಾದ ಕೆಂಕೆರೆ ಸತೀಶ್, ತಿಮ್ಮಹಳ್ಳಿ ಲೋಕಣ್ಣ, ಮಲ್ಲಿಕಾರ್ಜುನಯ್ಯ, ಸಜ್ಜಾದ್, ಹೂವಿನ ರಘು, ಸತೀಶ್, ಓಂಕಾರಮೂರ್ತಿ ಮತ್ತಿತರರಿದ್ದರು.
----------------
ಕೇಂದ್ರದಿಂದ ಬೆಂಬಲ ಬೆಲೆ ಕನಿಷ್ಟ ಹದಿನೈದು ಸಾವಿರ ಘೋಷಣೆಯಾಗುವವರೆಗೂ ,ತಿಂಗಳಾದರೂ ಸರಿ,ವರ್ಷವಾದರೂ ಸರಿ ಈ ಧರಣಿ ನಿಲ್ಲುವುದಿಲ್ಲ:ಕೆಂಕೆರೆ ಸತೀಶ್
----------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ