ರಾಜ್ಯ ಸರ್ಕಾರದ ಭರವಸೆ ಮೇಲೆ ನಂಬಿಕೆಯಿಲ್ಲ:ರೈತರು
ಮೊದಲು ಖರೀದಿ ಪ್ರಾರಂಭಿಸಿ:ನಂತರ ಧರಣಿ ಅಂತ್ಯಗೊಳಿಸುವೆವು
ಕೊಬ್ಬರಿ ಬೆಂಬಲ ಬೆಲೆಗೆ ಒತ್ತಾಯಿಸಿ ರಾಜ್ಯ ರೈತಸಂಘದ ವತಿಯಿಂದ ಪಟ್ಟಣದ ಎಪಿಎಂಸಿಯಲ್ಲಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ ನಿರತರೊಂದಿಗೆ ಬುಧವಾರ ಜಿಲ್ಲಾಧಿಕಾರಿ ಕೆ.ಪಿ.ಮೋಹನ್ ರಾಜ್ ಚರ್ಚಿಸಿದರು. |
ಹುಳಿಯಾರು:ಪಟ್ಟಣದ ಎಪಿಎಂಸಿ ಮುಂದೆ ನಡೆಯುತ್ತಿರುವ ಅಹೋರಾತ್ರಿ ಕೊಬ್ಬರಿಚಳುವಳಿಗೆ ಬುಧವಾರ ತುಮಕೂರು ಜಿಲ್ಲಾಧಿಕಾರಿ ಕೆ.ಪಿ.ಮೋಹನ್ ರಾಜ್ ಭೇಟಿ ನೀಡಿ ರೈತ ಮುಖಂಡರೊಂದಿಗೆ ಚರ್ಚಿಸಿದರಾದರೂ ನಫೆಡ್ ಖರೀದಿ ಬಗ್ಗೆ ಏನೊಂದು ಸ್ಪಷ್ಟವಾದ ಮಾಹಿತಿ ನೀಡದೆ ಸ್ವಯಂ ಅವರೇ ಗೊಂದಲದಲ್ಲಿ ಮುಳುಗಿದ್ದರಿಂದ,ಇಅವರ ಮಾತನ್ನು ನಂಬದ ರೈತರುಗಳು, ಜಿಲ್ಲಾಧಿಕಾರಿಗಳೇ ನಮಗೆ ಭರವಸೆಯ ಮಾತು ಬೇಕಿಲ್ಲ,ನೀವು ಖರೀದಿ ಶುರುಮಾಡುವವರೆಗೂ ನಮ್ಮ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಧರಣಿ ಮುಂದುವರಿಸಿದರು.
ಹುಳಿಯಾರಿನ ನಫೇಡ್ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ರೈತರ ನೊಂದಣಿ ಪುಸ್ತಕ ಪರಿಶೀಲಿಸಿದರು. |
ಪಟ್ಟಣದ ಎಪಿಎಂಸಿಗೆ ಎರಡು ಗಂಟೆ ಸುಮಾರಿಗೆ ಆಗಮಿಸಿದ ಜಿಲ್ಲಾಧಿಕಾರಿಗಳು ನೇರವಾಗಿ ನಫೆಡ್ ಖರೀದಿ ಕೇಂದ್ರ ಬಳಿ ತೆರಳಿದರು. ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸಿ ಇದುವರೆಗೂ ಕೊಬ್ಬರಿ ಎಷ್ಟು ಕೊಳ್ಳಲಾಗಿದೆ ಎಂದು ಪ್ರಶ್ನಿಸಿದಲ್ಲದೆ ತೂಕದ ಯಂತ್ರ,ಗುಣಮಟ್ಟ ಪರೀಕ್ಷಿಸುವ ಮಾಪಕ ಮುಂತಾದವನ್ನು ಪರಿಶೀಲಿದರು.ಕೊಬ್ಬರಿ ಕೊಂಡಿಲ್ಲವೇಕೆಂದು ಪ್ರಶ್ನಿಸಿದ ಅವರು ಟೋಕನ್ ನೀಡಿರುವ 3 ಮಂದಿ ರೈತರಿಗೆ ತಾವೇ ನೇರವಾಗಿ ಮೊಬೈಲ್ ನಂಬರ್ ಗೆ ಕೆರೆ ಮಾಡಿ ಕೊಬ್ಬರಿ ತಂದಿಲ್ಲವೇಕೆಂದು ಪ್ರಶ್ನಿಸಿದ್ದಲ್ಲದೆ ಕೂಡಲೇ ಕೊಬ್ಬರಿ ತರುವಂತೆ ಹಾಗೂ ಖರೀದಿ ಕೇಂದ್ರದಲ್ಲಿ ಏನಾದರೂ ಸಮಸ್ಯೆಯಿದ್ದಲ್ಲಿ ತಿಳಿಸುವಂತೆ ಮನವಿ ಮಾಡಿದರು.
ನಂತರ ಧರಣಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು ಧರಣಿ ನಿರತರೊಂದಿಗೆ ಸುಮಾರು 3 ಗಂಟೆಗಳ ಕಾಲ ಚರ್ಚಿಸಿದರು. ಸರ್ಕಾರ ನಫೆಡ್ ಕೇಂದ್ರ ತೆರದಿದ್ದು ಕೊಬ್ಬರಿಯನ್ನು ಕೊಳ್ಳುವಂತೆ ಆದೇಶ ನೀಡಲಾಗಿದೆ.ಕೇಂದ್ರದ ಬೆಂಬಲ ಬೆಲೆ 6240ರೂ ಹಾಗೂ ರಾಜ್ಯ ಸರ್ಕಾರದ 1 ಸಾವಿರ ಸಹಾಯಧನ ಸೇರಿಸಿ ರೂ.7240ಕ್ಕೆ ಕೊಬ್ಬರಿ ಕೊಳ್ಳಲಾಗುವುದು.ನಾಳೆಯಿಂದಲೇ ಕೊಬ್ಬರಿ ತನ್ನಿ.ಸರ್ಕಾರದಿಂದಲೇ ಹಣ ಕೊಡಿಸುವ ಜವಬ್ದಾರಿ ನನ್ನದು ಎಂದರು.
ತಾವುಗಳು ೧೫ ಸಾವಿರ ಬೆಲೆ ಕೇಳುತ್ತಿದ್ದು ನಾನು ಸಹ ಖುದ್ದು ಸಂಬಂಧಪಟ್ಟ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಬೆಲೆ ಹೆಚ್ಚಳಕ್ಕೆ ಶ್ರಮಿಸುವೆ.ಕೊಬ್ಬರಿ ಬೆಂಬಲ ಬೆಲೆ ಏರಿಸುವ ಅವಕಾಶ ಕೇಂದ್ರ ಸರ್ಕಾರ ಮಾತ್ರ ಇದ್ದು ತಾವು ನೀಡಿರುವ ಬೇಡಿಕೆಗಳನ್ನು ರಾಜ್ಯ ಸರ್ಕಾರದ ಗಮನಕ್ಕೆ ತರುವುದಾಗಿಯೂ ಹೇಳಿದ ಅವರು ನನ್ನ ಮೇಲೆ ಭರವಸೆ ಇಟ್ಟು ಧರಣಿ ಹಿಂಪಡೆಯುವಂತೆ ಮನವಿ ಮಾಡಿದರು.
ಜಿಲ್ಲಾಧಿಕಾರಿಗಳೇ ತಮ್ಮದು ಕೇವಲ ಭರವಸೆಯಾಗಿದ್ದು ನಾವೀಗಾಗಲೇ ಹಲವಾರು ಬಾರಿ ಖುದ್ದು ಮುಖ್ಯಮಂತ್ರಿಗಳೇ ನೀಡಿದ್ದ ಭರವಸೆಯೂ ಈಡೇರದೆ ಮೋಸ ಹೋಗಿದ್ದೇವೆ. ಹಾಗಾಗಿ ಯಾವುದೇ ಕಾರಣಕ್ಕೂ ಬೆಲೆ ಆಯೋಗದ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಕೊಬ್ಬರಿಗೆ ನೀಡಿರುವ ಬೆಂಬಲ ಬೆಲೆ ರೂ.11550 ನೀಡುವವರೆಗೆ ಧರಣಿ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಖರೀದಿ ವಿಷಯದಲ್ಲಿ ಜಿಲ್ಲಾಧಿಕಾರಿಯ ಗೊಂದಲ
––––––––––––––––––––––––––––––––––
ಈ ಮೊದಲು ಧರಣಿ ನಿರತರೊಂದಿಗೆ ಮಾತನಾಡಿ ನಾಳೆಯಿಂದಲೇ ಕೊಬ್ಬರಿ ಕೊಳ್ಳುವುದಾಗಿ ತಿಳಿಸಿದ ಜಿಲ್ಲಾಧಿಕಾರಿಗಳು ನಂತರ ನಫೆಡ್ ನ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ತಮ್ಮ ತಮ್ಮ ಹೇಳಿಕೆಯನ್ನು ಮತ್ತೆ ಬದಲಾಯಿಸಿದರು.
ಕೊಬ್ಬರಿ ಮಾರುಕಟ್ಟೆ ಧಾರಣೆ ರೂ.6240ಕ್ಕಿಂತ ಹೆಚ್ಚಾದರೂ ನಫೆಡ್ ಖರೀದಿ ಕೇಂದ್ರದ ಮೂಲಕ ಕೊಬ್ಬರಿ ಕೊಳ್ಳಲು ಆದೇಶ ನೀಡಲಾಗಿದೆ ಎಂದು ಗೊಂದಲದ ಹೇಳಿಕೆ ನೀಡಿದ್ದ ಅವರು ಈ ವಿಷಯಕ್ಕೆ ಸಂಬಂಧಪಟ್ಟ ಆದೇಶ ಪತ್ರ ಕೊಡುವುದಾಗಿ ತಿಳಿಸಿದ್ದರು. ನಫೆಡ್ ಖರೀದಿ ನೀತಿ ಬಗ್ಗೆ ಗೊಂದಲಕ್ಕೀಡಾದ ಜಿಲ್ಲಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಮಂತ್ರಿ ಹಾಗೂ ನಫೆಡ್ ಅಧಿಕಾರಿಗಳೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚಿಸಿದರು. ರೂ. 6240ಕ್ಕಿಂತ ಕೊಬ್ಬರಿ ಬೆಲೆ ಮಾರುಕಟ್ಟೆ ಧಾರಣೆ ಹೆಚ್ಚಾದ ಸಂದರ್ಭದಲ್ಲಿ ನಫೆಡ್ ಅಧಿಕಾರಿಗಳಿಂದ ಕೊಳ್ಳಲು ಸಾಧ್ಯವಿಲ್ಲ .ಕೇಂದ್ರ ಸರ್ಕಾರ ನಿಗದಿಪಡೀಸಿದ ಬೆಲೆಯಂತೆ ನಫೆಡ್ ಅಭಿಕಾರಿಗಳ ಖರೀದಿಸಬೇಕಿದ್ದು ಈ ಬಗ್ಗೆ ರಾಜ್ಯ ಸರ್ಕಾರ ಕೇಂದ್ರದೊಂದಿಗೆ ಮಾತನಾಡಿದೆ.ಇನ್ನೇರಡು ಮೂರುದಿನದೊಳಗೆ ಗೊಂದಲ ಬಗೆಹರಿಯಲಿದ್ದು ಖರಿದಿ ನಡೆಯಲಿದೆ ಎಂದರು.ಒಟ್ಟಾರೆ ಜಿಲ್ಲಾಧಿಕಾರಿಗಳಿಗೂ ಸಹ ನಫೆಡ್ ಖರೀದಿ ಎಂದು ಪ್ರಾರಂಭಮಾಡುತ್ತದೆ ಎಂದು ಗೊಂದಲವಾಗಿ ಯಾವುದೇ ತೀರ್ಮಾನಕ್ಕೆ ಬಾರದೆ ಹಿಂತಿರುಗಿದರು.
ಜಿಲ್ಲಾ ಕೃಷಿ ಮಾರುಕಟ್ಟೆ ಸಹಾಯಕ ನಿರ್ದೇಶಕ ಎಂ,ರಾಜಣ್ಣ, ಉಪವಿಭಾಗಾಧಿಕಾರಿ ಪ್ರಜ್ಞಾಅಮ್ಮೆಂಬಳ, ತಹಶೀಲ್ದಾರ್ ಆರ್.ಗಂಗೇಶ್ ಸೇರಿದಂತೆ ತಾಲ್ಲೂಕ್ ಅಧ್ಯಕ್ಷ ಲೋಕಣ್ಣ,ಉಪಾಧ್ಯಕ್ಷ ಮಲ್ಲಿಕಾರ್ಜುನಯ್ಯ,ಎಪಿಎಂಸಿ ಅಧ್ಯಕ್ಷ ಬಸವರಾಜು.ಕೆಂಕೆರೆ ಗ್ರಾಪಂ ಸದಸ್ಯ ನಾಗಣ್ಣ,ಸೃಜನ ಮಹಿಳಾ ಸಂಘದ ಜಯಮ್ಮ ,ಹೂವಿನ ರಘು,ಪಾತ್ರೆ ಸತೀಶ್,ರಂಗನಕೆರೆ ವಿರೂಪಾಕ್ಷ,ತಮ್ಮಡಿಹಳ್ಳಿ ಮಂಜಣ್ಣ,ಲಕ್ಷ್ಮೀಪುರದ ಶಿವಣ್ಣ,ಮುಂತಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ