ಕೊಬ್ಬರಿಗೆ ಕನಿಷ್ಟ ೧೫ಸಾವಿರ ಬೆಲೆ ಘೋಷಿಸುವಂತೆ ಒತ್ತಾಯ
ಹುಳಿಯಾರು: ಕೊಬ್ಬರಿ ಬೆಲೆ ಹೆಚ್ಚಿಸುವಂತೆ ಒತ್ತಾಯಿಸಿ ರೈತಸಂಘದವರು ಕೃಷಿ ಉತ್ಪನ್ನಮಾರುಕಟ್ಟೆಯ ಆವರಣದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿಯು ಶುಕ್ರವಾರದಂದು ೪೩ನೇ ದಿನಕ್ಕೆ ಕಾಲಿಟ್ಟಿದ್ದು ಇಂದಿನ ಧರಣಿಯನ್ನು ಬೆಂಬಲಿಸಿ ನವದೆಹಲಿಯ ಭಾರತೀಯ ಕೃಷಿಕ ಸಮಾಜದ ತುಮಕೂರು ಜಿಲ್ಲಾ ಘಟಕದ ಪದಾಧಿಕಾರಿಗಳು ಭಾಗವಯಿಸಿ ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಹುಳಿಯಾರಿನ ರೈತರ ಧರಣಿ ಬೆಂಬಲಿಸಿ ನವದೆಹಲಿ ಭಾರತೀಯ ಕೃಷಿ ಸಮಾಜದ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷೆ ಶಿವರತ್ನ ಮತ್ತು ಪದಾಧಿಕಾರಿಗಳು ಭಾಗವಹಿಸಿ ಕೃಷಿ ಉತ್ಪನ್ನಮಾರುಕಟ್ಟೆಯ ಅಧ್ಯಕ್ಷ ಬರಗೂರು ಬಸವರಾಜುಗೆ ಮನವಿ ಪತ್ರ ಸಲ್ಲಿಸಿದರು.
ಕೃಷಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷೆ ಶಿವರತ್ನ ಮಾತನಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಸಾಕಷ್ಟು ವರ್ಷಗಳಾದರು ಸಹಾ ರೈತರಿಗೆ ಸಿಗಬಹುದಾದ ಸೌಲಭ್ಯಗಳು ಸಿಗದೆ ಪ್ರತಿಯೊಂದಕ್ಕೂ ಸಹಾ ಪ್ರತಿಭಟನೆ ನಡೆಸಿ ಪಡೆಯುವಂತ ಸ್ಥಿತಿ ನಿರ್ಮಾಣಗೊಂಡಿದೆ ಎಂದು ಟೀಕಿಸಿದರು.
ರೈತರು ನಮ್ಮ ದೇಶದ ಬೆನ್ನೆಲುಬು ಎನ್ನುವ ಸರಕಾರಗಳು ರೈತರ ಬೆಳೆದ ಬೆಳೆಗೆ ಯೋಗ್ಯವಾದ ಬೆಲೆ ನೀಡದೆ ರೈತರ ಬೆನ್ನು ಮುರಿಯುವಂತೆ ಮಾಡುತ್ತಿವೆ ಎಂದು ಆರೋಪಿಸಿದರು.
ಸರಕಾರಗಳ ದುರಾಡಳಿತದಿಂದ ಕಂಗೆಟ್ಟಿರುವ ರೈತರು ಕೃಷಿಯನ್ನು ತೊರೆದು ಉದ್ಯೋಗ ಅರಸಿ ನಗರಪ್ರದೇಶಗಳಿಗೆ ವಲಸೆ ಹೋಗುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಕೊಬ್ಬರಿ ಉತ್ಪಾದನ ವೆಚ್ಚವೆ ಕ್ವಿಂಟಾಲ್ ಗೆ ೧೨ ಸಾವಿರ ತಗುಲಲಿದ್ದು ಆದರೆ ಕೊಬ್ಬರಿ ಬೆಳೆದ ರೈತರ ಒಂದು ಕ್ವಿಂಟಾಲ್ ಗೆ ೬ಸಾವಿರ ರೂ ಗೆ ಖರೀದಿಮಾಡುವುದರಿಂದ ಕೊಬ್ಬರಿ ಉತ್ಪಾದನೆಗಾಗಿ ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯೆಯಂತ ಕೃತ್ಯದ ಬಗ್ಗೆ ಯೋಚಿಸುವಂತಾಗಿದೆ ಎಂದರು.
ಅಡಿಕೆ ಬೆಲೆ ಕ್ವಿಂಟಾಲ್ ಗೆ ಸುಮಾರು ೨೨ ರಿಂದ ೨೩ ಸಾವಿರ ರೂ ಬೆಲೆ ಇದೆ.ಆದರೆ ಅಡಿಕೆಯ ಉತ್ಪದನಾ ವೆಚ್ಚವೇ ೩೦ಸಾವಿರ ರೂ ದಾಟುತ್ತದೆ. ಆದುದರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೊಬ್ಬರಿಗೆ ಕನಿಷ್ಟ ೧೫ ಸಾವಿರ ರೂ ಹಾಗೂ ಅಡಕೆ ಬೆಳೆಗೆ ೪೦ಸಾವಿರ ರೂ ಬೆಲೆ ನಿಗದಿಮಾಡಿದರೆ ಮಾತ್ರ ರೈತರು ಉಳಿಯಲು ಸಾಧ್ಯವೆಂದರು.
ಈಗಲಾದರು ಕೇಂದ್ರ ಮತ್ತು ರಾಜ್ಯ ಸರಕಾರಗಳು ಎಚ್ಚೆತ್ತುಕೊಂಡು ಕೊಬ್ಬರಿ ಮತ್ತು ಅಡಕೆಗೆ ಯೋಗ್ಯಬೆಲೆ ನೀಡದಿದ್ದರೆ ರೈತರ ಹೋರಾಟ ತೀವ್ರ ಸ್ವರೂಪಕ್ಕೆ ತಿರುಗಲಿದ್ದು,ಅಲ್ಲದೆ ಈ ಪ್ರತಿಭಟನೆಗೆ ನಮ್ಮ ಕೃಷಿಕ ಸಮಾಜವೂ ಕೈಜೊಡಿಸಿದ್ದು ನವದೆಹಲಿ ಸಂಘಟನೆಯ ಮಿತ್ರ ಸಂಘಗಳೊಂದಿಗೆ ಸೇರಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಕೃಷಿ ಉತ್ಪನ್ನಮಾರುಕಟ್ಟೆಯ ಅಧ್ಯಕ್ಷ ಬರಗೂರು ಬಸವರಾಜುಗೆ ಮನವಿ ಪತ್ರ ಸಲ್ಲಿಸಿದರು.
ಇಂದಿನ ಧರಣಿಯಲ್ಲಿ ಕೃಷಿಕ ಸಮಾಜದ ತುಮಕೂರು ಘಟಕದ ಉಪಾಧ್ಯಕ್ಷ ಬಿ.ಕೆ.ರಾಜಣ್ಣ, ಪ್ರಾಧಾನ ಕಾರ್ಯದರ್ಶಿ ಸುರೇಶ್, ಸಂಘಟನಾ ಕಾರ್ಯದರ್ಶಿ ವೀರಣ್ಣ, ತಾಲ್ಲೂಕು ಅಧ್ಯಕ್ಷ ಪುಟ್ಟರಾಜು, ಶಿರಾ ತಾಲ್ಲೂಕು ಅಧ್ಯಕ್ಷ ಗೋವಿಂದಸ್ವಾಮಿ, ಮಧುಗಿರಿ ತಾಲ್ಲೂಕು ಅಧ್ಯಕ್ಷ ದೇವರಾಜು, ಜಿಲ್ಲಾ ಪದಾಧಿಕಾರಿಗಳಾದ ರಾಜಶೇಖರ್, ಕುಮಾರಸ್ವಾಮಿ, ಶಾಂತರಾಜು, ಭಾರತೀಯ ಜನ ಕಲಾ ಸಮಿತಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗೌಡರಂಗಪ್ಪ, ರೈತಸಂಘದ ಕೆಂಕೆರೆ ಸತೀಶ್, ಮಲ್ಲಿಕಾರ್ಜುನ್, ಲೋಕಣ್ಣ ಇತರರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ