ಹುಳಿಯಾರು:ಕೊಬ್ಬರಿ ಬೆಂಬಲ ಬೆಲೆಗೆ ಒತ್ತಾಯಿಸಿ ಕಳೆದ ೨೬ ದಿನಗಳಿಂದಲೂ ನಡೆಯುತ್ತಿರುವ ರೈತರ ಚಳುವಳಿ ಬಗ್ಗೆ ಸರ್ಕಾರದ ಹಾಗೂ ಶಾಸಕರ ನಿರ್ಲಕ್ಷ್ಯ ಖಂಡಿಸಿ ಹೆಚ್.ಮೇಲನಹಳ್ಳಿ ಗ್ರಾಮಸ್ಥರು ಎಪಿಎಂಸಿ ಮುಂಭಾಗ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ ಘಟನೆ ಬುಧವಾರ ಜರುಗಿತು.
ಹುಳಿಯಾರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಕೊಬ್ಬರಿ ಬೆಳಗಾರರ ೨೭ ನೇ ದಿನದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಹೆಚ್.ಮೇಲನಹಳ್ಳಿಯ ನೂರಕ್ಕೂ ಹೆಚ್ಚು ಗ್ರಾಮಸ್ಥರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ರಸ್ತೆ ತಡೆ ನಡೆಸಿದರು.
ನಂತರ ಮಾತನಾಡಿದ ಮೇಲನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಮ್.ಕೆ.ಪರಮೇಶ್ ಇಂದು ನಿತ್ಯ ಉಪಯೋಗಿಸುವ ಬೆಂಕಿಪಟ್ಟಣ,ಸೋಪಿಗೂ ಸ್ಥಿರವಾದ ಬೆಲೆಯಿದ್ದು ೨೦ ತಿಂಗಳುಗಳ ಕಾಲ ಕಾಪಾಡಿಕೊಂಡು ತಯರಾಗುವ ಕೊಬ್ಬರಿಗೆ ಮಾರುಕಟ್ಟೆಯಲ್ಲಿ ಕನಿಷ್ಠ ಬೆಲೆಯೂ ಸಿಗುತ್ತಿಲ್ಲ.ರೈತಪರವೆಂದು ಹೇಳಿಕೊಳ್ಳುವ ಸರ್ಕಾರಗಳು ರೈತರಿಗೆ ಏನೊಂದು ಸೌಲಭ್ಯಗಳನ್ನು ಕೊಡದೆ ರೈತರ ಬೆನ್ನುಮೂಳೆ ಮುರಿದು ರೈತರನ್ನು ನಿತ್ರಾಣ ಮಾಡಿದೆ.ರೈತ ವಿರೋಧಿ ಸರ್ಕಾರದ ಧೋರಣೆ ವಿರುದ್ಧ ರೈತರುಗಳು ಸಂಘಟಿತರಾಗಿ ಬೀದಿಗಿಳಿಯೋಣ, ಭ್ರಷ್ಟ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸೋಣ ಎಂದರು.
ತಾಲ್ಲೂಕ್ ಅಧ್ಯಕ್ಷ ತಿಮ್ಮನಹಳ್ಳಿ ಲೋಕಣ್ಣ ಮಾತನಾಡಿ ಕೊಬ್ಬರಿ ಬೆಳೆಯಲು ಕನಿಷ್ಠ ೧೧೫೦೦ ರೂಗಳು ತಗುಲಲಿದೆ ಎಂದು ಸರ್ಕಾರವೇ ನೇಮಿಸಿರುವ ಕೃಷಿ ಆಯೋಗವೇ ವರದಿ ನೀಡಿದ್ದು ಅದರಂತೆ ಕೊಬ್ಬರಿಗೆ ಬೆಂಬಲ ಬೆಲೆ ಎಂದು ಕೊಡುವ ಬದಲು ಯೋಗ್ಯಬೆಲೆ ಕೊಡಲಿ ಎಂದರು.
ದೆಹಲಿ ಚಲೋ : ರಾಜ್ಯ ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಕೆಂಕೆರೆ ಸತೀಶ್ ಮಾತನಾಡಿ ಜನವರಿಯಲ್ಲಿ ದೆಹಲಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ನಮ್ಮಲ್ಲಿ ತೆಂಗು ಬೆಳೆಯುವ ೧೩ ಜಿಲ್ಲೆಗಳಿದ್ದು ಪ್ರತಿ ಜಿಲ್ಲೆಯಿಂದಲೂ ಕನಿಷ್ಠ ನೂರು ರೈತರಂತೆ ದೆಹಲಿಗೆ ತೆರಳಿ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ಮುಂದುವರಿಸುವುದಾಗಿ ಘೋಷಿಸಿದರು.ಕೊಬ್ಬರಿಗೆ ಕನಿಷ್ಠ ೧೫ ಸಾವಿರ ಬೆಲೆ ತೀರ್ಮಾನವಾಗುವವರೆಗೂ ಚಳುವಳಿ ಮುಂದುವರಿಯಲಿರುವುದಾಗಿ ಹೇಳಿದರು.
ಪ್ರತಿಭಟನೆಯಲ್ಲಿ ಮಾಜಿ ಗ್ರಾಪಂ ಸದಸ್ಯರುಗಳಾದ ಎಂ.ಕೆ.ಹನುಮಂತರಾಜು ಮತ್ತು ಬಸವರಾಜು,ನಿಂಗಪ್ಪ,ಷಣ್ಮುಖಸ್ವಾಮಿ, ಮಲ್ಲಿಕಾರ್ಜುನ್, ಬಸವರಾಜು,ರಾಮು ಮೊದಲಾದವರು ಪಾಲ್ಗೊಂಡಿದ್ದರು.
-----------------------------------------------------------------
ರೈತರುಗಳು ಮನೆಮಠ ಬಿಟ್ಟು ತಿಂಗಳುಗಟ್ಟಲೇ ಧರಣಿ ಕೂತರೂ ಸರ್ಕಾರಕ್ಕೆ ನಮ್ಮ ಕೂಗೂ ಕೇಳಿಲ್ಲ.ಧರಣಿ ಶಾಂತವಾಗಿ ನಡೆಯುತ್ತಿರುವುದರಿಂದ ಇವರೇನೂ ಮಾಡಿಯಾರು ಎಂಬ ಧೋರಣೆಯಿಂದ ಇತ್ತ ಗಮನಹರಿಸುತ್ತಿಲ್ಲ.ಹಾಗಾಗಿ ರೈತ ಬೀದಿಗಿಳಿದು ಅಶಾಂತಿ ಸೃಷ್ಟಿಸುವ ತನಕ ಸರ್ಕಾರ ಎಚ್ಚೆತ್ತುಕೊಳ್ಳುವಂತೆ ಕಾಣುವುದಿಲ್ಲ: ಕೆ.ಪಿ.ಮಲ್ಲೇಶ್ ,ತಾಲ್ಲೂಕ್ ಸಂಘದ ಗೌರವಾಧ್ಯಕ್ಷ
-------------------------------------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ