------------------------------
೧೫೦೦೦ರೂ ಬೆಂಬಲ ಬೆಲೆ ಘೋಷಣೆಯಾಗುವವರೆಗೂ ಸ್ಥಳದಿಂದ ಕದಲುವುದಿಲ್ಲ
--------------------------
ಹುಳಿಯಾರು:ರಾಜ್ಯದಲ್ಲಿ ತೆಂಗು ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದು ಸತತ ಬರಗಾಲದ ಹಿನ್ನೆಲೆಯಲ್ಲಿ ತೆಂಗಿನ ಬೆಳೆಯಲ್ಲಿ ಹಾಗೂ ಬೆಲೆಯಲ್ಲೂ ಕೂಡ ಕುಸಿತವಾಗಿದೆ. ಆದ್ದರಿಂದ ಹಾಲಿಯಿರುವ ೬೨೪೦ ರೂ ಗಳ ಬೆಂಬಲಬೆಲೆಯನ್ನು ೧೫೦೦೦ ರೂ ಗಳಿಗೆ ಏರಿಸುವ ಮೂಲಕ ರೈತರ ನೆರವಿಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಬರಬೇಕು ಎಂದು ಒತ್ತಾಯಿಸಿ ಹುಳಿಯಾರಿನ ಎಪಿಎಂಸಿ ಮುಂದೆ ನ.೧೧ ರ ಶುಕ್ರವಾರದಿಂದ ಕರ್ನಾಟಕ ರಾಜ್ಯ ರೈತಸಂಘದ ವಿವಿಧ ತಾಲ್ಲೂಕಿನ ರೈತರು ಅಹೋರಾತ್ರಿ ಧರಣಿ ಆರಂಭಿಸಿದ್ದು ಯಾವುದೇ ಕಾರಣಕ್ಕೂ ಬೆಂಬಲಬೆಲೆ ಘೋಷಣೆಯಾಗುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಪ್ರವಾಸಿಮಂದಿರದ ಬಳಿ ಸೇರಿದ್ದ ನೂರಾರು ರೈತರು ಸರ್ಕರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ಮೂಲಕ ಎಪಿಎಂಸಿಗೆ ಆಗಮಿಸಿದರು.ಎಪಿಎಂಸಿಯ ಮುಖ್ಯದ್ವಾರದಲ್ಲಿ ಷಾಮಿಯಾನ ಹಾಕಿರುವ ರೈತರು ಪಾತ್ರೆಪಡಗಳನ್ನು ತಂದು ಅಡುಗೆ ಮಾಡಿ ಸ್ಥಳದಲ್ಲೆ ಮೊಕ್ಕಾಂ ಹೂಡಿದ್ದಾರೆ.
ನಂತರ ಮಾತನಾಡಿದ ರಾಜ್ಯ ರೈತಸಂಘದದ ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯಾರಾಧ್ಯ ನಿನ್ನೆ ನಡೆದ ಗುರುವಾರದ ಹರಾಜಿನಲ್ಲಿ ೬೧೧೧ರಂತೆ ಕೊಬ್ಬರಿ ಖರೀದಿಸಲಾಗಿದ್ದು ಇದು ಸರ್ಕಾರದ ಹಾಲಿ ಬೆಲೆ ಬೆಂಬಲ ಬೆಲೆಗಿಂತ ೧೨೯ ರೂ ಕಡಿಮೆಯಾಗಿದೆ.ಬೆಂಬಲ ಬೆಲೆಗಿಂತ ಕಡಿಮೆಗೆ ಕೊಬ್ಬರಿ ಮಾರಾಟವಾದರೆ ಸರ್ಕಾರ ಮಧ್ಯಪ್ರವೇಶಿಸಿ ನಾಫೆಡ್ ಮೂಲಕ ಕೊಬ್ಬರಿ ಖರೀದಿಸಬೇಕಿದ್ದು ಈ ಬಾರಿ ಬೆಂಬಲ ಬೆಲೆಯನ್ನು ೬೨೪೦ರ ಬದಲು ೧೫೦೦೦ ದರ ನಿಗದಿಪಡಿಸಿ ಖರೀದಿಸಬೇಕು .ಇದಕೊಪ್ಪದಿದ್ದಲ್ಲಿ ಎಪಿಎಂಸಿಯಲ್ಲಿ ಒಂದು ಕೆಜಿಯಷ್ಟು ಕೊಬ್ಬರಿ ಖರೀದಿ ಮಾಡಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಕೆಂಕೆರೆ ಸತೀಶ್ ಮಾತನಾಡಿ ಕೊಬ್ಬರಿಗೆ ಬೆಂಬಲ ಬೆಲೆಯ ಬಗ್ಗೆ ಸರ್ಕಾರದ ಭರವಸೆಗಳೆಲ್ಲಾ ಹುಸಿಯಾದ ಹಿನ್ನಲೆಯಲ್ಲಿ ಈ ನಿರಂತರ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದ್ದು ಸರ್ಕಾರವೇ ಸ್ಥಳಕ್ಕೆ ಬಂದು ಕೊಬ್ಬರಿಗೆ ಬೆಂಬಲ ಬೆಲೆ ೧೫ ಸಾವಿರ ರೂ ಘೋಷಣೆ ಮಾಡುವವರೆಗೂ ಈ ಬಾರಿ ಚಳುವಳಿ ನಿಲ್ಲುವುದಿಲ್ಲ ಎಂದರು.
ಧರಣಿಯಲ್ಲಿ ತಿಪಟೂರು ತಾಲ್ಲೂಕ್ ಜಿಲ್ಲಾಧ್ಯಕ್ಷ ಶಂಕರಪ್ಪ,ಶಿರಾ ತಾಲ್ಲೂಕ್ ಅಧ್ಯಕ್ಷ ಪರಮಶಿವಯ್ಯ,ಉಪಾಧ್ಯಕ್ಷ ದ್ಯಾಮೇಗೌಡ,ಚಿಕ್ಕನಾಯಕನಹಳ್ಳಿ ತಾಲ್ಲೂಕ್ ಅಧ್ಯಕ್ಷ ತಿಮ್ಮನಹಳ್ಳಿ ಲೋಕಣ್ಣ,ಉಪಾಧ್ಯಕ್ಷ ತಮ್ಮಡಿಹಳ್ಳಿ ಮಲ್ಲೀಕಣ್ಣ ,ತಾಲ್ಲೂಕ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಬರಗೂರು ಬಸವರಾಜು, ಎಪಿಎಂಸಿ ನಿರ್ದೇಶಕ ರುದ್ರೇಶ್,ಕಾಡಿನರಾಜ ನಾಗರಾಜು,ದಬ್ಬಗುಂಟೆ ರವಿಕುಮಾರ್,ರಾಮಕೃಷ್ಣಪ್ಪ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕಿನ ರೈತರುಗಳು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ