ಬುಧವಾರದಂದು ಬೆಲೆ ಘೋಷಣೆಯಾಗದಿದ್ದಲ್ಲಿ ವಿಷ ಸೇವಿಸುವ ನಿರ್ಧಾರ
ಹುಳಿಯಾರು: ಕೊಬ್ಬರಿಗೆ ಬೆಂಬಲ ಬೆಲೆಗೆ ಒತ್ತಾಯಿಸಿ ಹುಳಿಯಾರಿನಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಇದುವರೆಗೂ ಶಾಂತಿಯುತವಾಗಿ ಸಾಗಿದ್ದು ಹತ್ತು ದಿನ ಕಳೆದರೂ ಸರ್ಕಾರದ ಪ್ರತಿನಿಧಿಗಳಾಗಲಿ,ಶಾಸಕರಾಗಲಿ,ಈ ಹಿಂದೆ ಭರವಸೆ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಯಚಂದ್ರರಾಗಲಿ ಧರಣಿನಿರತರ ಅಹವಾಲು ಕೇಳದೆ ಉದಾಸೀನ ಮಾಡುತ್ತಾ ಬಂದಿದ್ದರಿಂದ ತೀವ್ರ ಅಸಹನೆಗೊಳಗಾದ ರೈತರು ತಮ್ಮ ಪ್ರತಿಭಟನೆಯ ಹಾದಿಯನ್ನು ಬದಲಾಯಿಸಿದ್ದು ರಸ್ತೆ ತಡೆ ನಂತರ ಐವರು ರೈತರು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗುವ ಮೂಲಕ ತೀವ್ರ ಸ್ವರೂಪ ಪಡೆದುಕೊಂಡಿದೆ.
ಈ ಸಂದರ್ಭದಲ್ಲಿ ಉಪವಾಸ ಕುಳಿತ ತಿಮ್ಮನಹಳ್ಳಿ ಲೋಕೇಶ್ ಅವರು ಮಾತನಾಡಿ ಗಾಂಧೀಜಿ ಮಾರ್ಗದಲ್ಲಿ ನಾವು ಶಾಂತಿಯುತ ಧರಣಿ ನಡೆಸುತ್ತಿದ್ದೇವೆ. ಆದರೂ ಸರ್ಕಾರಗಳು ನಮ್ಮ ಬೇಡಿಕೆ ಈಡೇರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಪಡುತ್ತಿಲ್ಲ.ಬೆಳಗಾವಿಯ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆಯಾಗಬಹುದೆಂಬ ನಿರೀಕ್ಷೆಯಿದ್ದು ಘೋಷಣೆಯಾಗುವವರೆಗೂ ಉಪವಾಸ ಕೈಬಿಡುವ ಮಾತೇಯಿಲ್ಲ ಎಂದರು.
ಕಾಡಿನರಾಜ ನಾಗರಾಜು ಮಾತನಾಡಿ ಹಗಲಿರುಳೆನ್ನದೆ ಸಾಲಸೂಲಮಾಡಿ, ನಿದ್ರಾಹಾರ ಬದಿಗಿತ್ತು ಕಷ್ಟಪಟ್ಟು ಬೆಳೆಯುವ ಬೆಳೆಗೆ ವೈಜ್ಞಾನಿಕ ಬೆಲೆ ಕೊಡಿ ಎಂದು ಭಿಕ್ಷೆ ಬೇಡುವ ಪರಿಸ್ಥಿತಿ ರೈತನಿಗೆ ಬಂದಿರುವುದು ದುಖಃಕರ ಸಂಗತಿ. ಇಷ್ಟಕ್ಕೆಲ್ಲ ನಮ್ಮನ್ನಾಳುವ ಜನಪ್ರತಿನಿಧಿಗಳೇ ನೇರ ಕಾರಣವಾಗಿದ್ದು ತಾಲೂಕಿನಲ್ಲಿ ಬರಗಾಲ ತಾಂಡವವಾಡುತ್ತಿದ್ದು ಸಾವಿರಾರು ರೈತರು ಮನೆಯಲ್ಲಿ ಉಪವಾಸ ವನವಾಸ ಪಡುತ್ತಿದ್ದಾರೆ. ಇದು ಸರ್ಕಾರಕ್ಕೆ ಅರಿವಾಗಲೆಂದು ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತಿಪಟೂರು ತಾಲೂಕು ರೈತ ಸಂಘದ ಅಧ್ಯಕ್ಷ ದೇವರಾಜು, ಬೆಲೆ ಕಾವಲು ಸಮಿತಿಯ ಗಂಗಾಧರ್ ಮತ್ತು ಶ್ರೀಕಾಂತ್ ಶಿರಾ ಅಧ್ಯಕ್ಷ ಧನಂಜಯಾರಾರಾಧ್ಯ, ಹೊಸದುರ್ಗ ಅಧ್ಯಕ್ಷ ಲಿಂಗರಾಜು, ತಿಪಟೂರು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಯೋಗಣ್ಣ,ಎಂ.ಎಸ್.ಆರ್.ನಟರಾಜು, ಎಪಿಎಂಸಿ ಅಧ್ಯಕ್ಷ ಬರಗೂರು ಬಸವರಾಜು ಮತ್ತಿತರರು ಹಾಜರಿದ್ದರು.
------------------------
ಈ ಹಿಂದೆ ಬೆಳಗಾಂ ಅಧಿವೇಶನದ ಸಮಯದಲ್ಲಿ ಒಬ್ಬ ರೈತನ ಆತ್ಮಹತ್ಯೆ ಕೋಲಾಹಲವೆಬ್ಬಿಸಿದ್ದು ಈ ಅಧಿವೇಶನದ ಸಮಯದಲ್ಲಿ ಸರ್ಕಾರದ ಸ್ಪಂದನೆ ದೊರೆಯದಿದಲ್ಲಿ ಧರಣಿ ಕೂತಿರುವ ನಾವೈದು ಜನರು ವಿಷ ಸೇವಿಸಿ ಪ್ರಾಣ ಕಳೆದುಕೊಳ್ಳುವುದು ನಿಶ್ಚಿತ.ಇದಕ್ಕೆ ಸರ್ಕಾರವೇ ನೇರ ಹೊಣೆಯಾಗಲಿದೆ : ಕೆಂಕೆರೆ ಸತೀಶ್ , ರಾಜ್ಯ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ
----------------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ