7ನೇ ದಿನದ ಆಹೋರಾತ್ರಿ ಧರಣಿಯಲ್ಲಿ ಉಗಿಯುವ ಚಳುವಳಿ
ಹುಳಿಯಾರು: ಕೊಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಪಟ್ಟಣದ ಎಪಿಎಂಸಿಯಲ್ಲಿ ರೈತಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಆಹೋರಾತ್ರಿ ಧರಣಿ ಗುರುವಾರ 7ನೇ ದಿನಕ್ಕೆ ಕಾಲಿಟ್ಟಿದ್ದು ಚಳುವಳಿಗಾರರಿಗೆ ಯಾವುದೇ ರೀತಿಯಲ್ಲಿ ಸ್ಪಂದಿಸದ ಸರ್ಕಾರ ವಿರುದ್ದ ಹರಿಹಾಯ್ದ ರೈತರು ಇಂದು ರಾಜ್ಯ ಹಾಗೂ ಕೇಂದ್ರ ಸರ್ಕಾರ ಎಂದು ಬರೆದಿದ್ದ ಪ್ಲಕ್ಸ್ ಅನ್ನು ಅಳವಡಿಸಿ ಎಲೆಅಡಿಕೆ ಹಾಕಿಕೊಂಡು ಉಗಿಯುವ ಚಳುವಳಿ ನಡೆಸುವ ಮೂಲಕ ವಿಭಿನ್ನ ಹಾದಿ ಹಿಡಿದರು.
7 ದಿನಗಳು ಕಳದರೂ ಸ್ಪಂದಿಸದ ಸರ್ಕಾರದ ವಿರುದ್ಧ ಕೆಂಡಕಾರಿದ ಸಂಚಾಲಕ ಕೆಂಕೆರೆ ಸತೀಶ್ ಜನಪ್ರತಿನಿಧಿಗಳದು ದಪ್ಪ ಚರ್ಮವಾಗಿರುವುದರಿಂದ ಮನವಿ, ಹೋರಾಟಗಳು ಅವರ ಗಮನಕ್ಕೆ ಬಾರವು.ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡೂ ರೈತರ ಪಾಲಿಗೆ ಸತ್ತಿದ್ದು ರೈತರ ಸಮಸ್ಯೆ ಆಲಿಸದ,ಸಮಸ್ಯೆಗೆ ಸ್ಪಂದಿಸದ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ...ವ್ಯಾಕ್ ಥೂ ಎಂದು ಸರ್ಕಾರದ ಮುಖಕ್ಕೆ ಉಗಿಯುವ ಚಳುವಳಿ ಮಾಡಿದ್ದೇವೆ.ಮುಂದಿನ ದಿನಗಳಲ್ಲಿ ಹೋರಾಟ ಇನ್ನೂ ತೀವ್ರತರವಾಗಿ ಕೊಂಡೊಯ್ಯುವುದಾಗಿ ಎಚ್ಚರಿಸಿದರು.
ಸರ್ಕಾರಗಳು ರೈತನ ನೆರವಿಗೆ ಧಾವಿಸುತ್ತಿಲ್ಲ. ಬರ ಸ್ಥಿತಿ ಅವಲೋಕನ ಎಂಬುದು ಎರಡೂ ಸರ್ಕಾರಗಳ ಕಣ್ಣೊರಿಸುವ ನಾಟಕವಾಗಿದೆ. ಈ ವರ್ಷ ಮುಂಗಾರು ಮತ್ತು ಹಿಂಗಾರು ಬೆಳೆ ಬಾರದೆ, ರೈತರ ಜಾನುವಾರುಗಳಿಗೆ ಮೇವಿಲ್ಲದೆ ರೈತ ಕಂಗಲಾಗಿದ್ದಾನೆ.ಈ ವೇಳೆಗಾಗಲೇ ಬರ ಪರಿಹಾರದ ಯೋಜನೆಗಳು ರೈತರಿಗೆ ತಲುಪಬೇಕಿತ್ತು. ರಾಜ್ಯದ ಮುಖ್ಯಮಂತ್ರಿ ಹಾಗೂ ಕೇಂದ್ರದ ಅಧಿಕಾರಿಗಳು ಇನ್ನೂ ಬರ ವೀಕ್ಷಣೆಯಲ್ಲಿಯೇ ಕಾಲ ನೂಕುತ್ತಿದ್ದಾರೆ ಎಂದು ದೂರಿದರು.
ತಾಲ್ಲೂಕು ರೈತಸಂಘದ ಅಧ್ಯಕ್ಷ ತಿಮ್ಮನಹಳ್ಳಿ ಲೋಕಣ್ಣ ಮಾತನಾಡಿ ನಾಳೆ ಸಗಣಿಯಲ್ಲಿ ಹೊಡೆಯುವ ಕಾರ್ಯಕ್ರಮ,.ನಾಡಿದ್ದು ರಸ್ತೆ ಚಳುವಳಿ ಹೀಗೆ ದಿನಕ್ಕೊಂದು ರೀತಿಯ ಚಳುವಳಿಗಳನ್ನು ನಡೆಸಿ ಕೇಂದ್ರದ ೫೪೫ ಸಂಸದರು ಹಾಗೂ ರಾಜ್ಯದ ೨೨೫ ಶಾಸಕರಿಗೂ ನಮ್ಮ ಕೂಗೂ ತಟ್ಟುವಂತೆ ಮಾಡುವುದಾಗಿ ಹೇಳಿದರು.
ಉಗಿಯುವ ಚಳುವಳಿಯಲ್ಲಿ ರೈತಮುಖಂಡರಾದ ತಮ್ಮಡಿಹಳ್ಳಿ ಮಲ್ಲಿಕಾರ್ಜುನಯ್ಯ, ಗಂಗಾಧರಯ್ಯ, ಕೆಂಕೆರೆ ನಾಗರಾಜು, ಶಿವಣ್ಣ, ನಾಗರಾಜು, ಪ್ರಕಾಶ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ