ಹುಳಿಯಾರು: ಕೊಬ್ಬರಿಗೆ ಬೆಲೆಗಾಗಿ ರೈತರು ಹುಳಿಯಾರಿನ ಕೃಷಿಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿಯು ಮಂಗಳವಾರದಂದು ೧೯ನೇ ದಿನಕ್ಕೆ ಕಾಲಿಟ್ಟಿದ್ದು ದಿನೇದಿನೇ ಧರಣಿಯ ತೀವ್ರತೆ ಹೆಚ್ಚಾಗುತ್ತಿದ್ದು ಹಳ್ಳಿಹಳ್ಳಿಗೆ ವ್ಯಾಪಿಸುತ್ತಿದ್ದು ಇಂದಿನ ಧರಣಿಗೆ ಸ್ವಾಮೀಜಿಗಳೆ ಬೀದಿಗಿಳಿದು ನೇತೃತ್ವ ವಹಿಸಿದ್ದು ವಿಶೇಷವಾಗಿತ್ತು.
ಇಂದಿನ ಧರಣಿಯಲ್ಲಿ ಯಳನಾಡು ಅರಸೀಕೆರೆ ಸಂಸ್ಥಾನದಶ್ರೀಗಳಾದ ಜ್ಞಾನಪ್ರಭು ಸಿದ್ಧರಾಮದೇಶಿಕೇಂದ್ರ ಸ್ವಾಮಿಗಳ ನೇತೃತ್ವದಲ್ಲಿ ಬೈಕ್ ರ್ಯಾಲಿ ನಡೆಸಿದ ಯಳನಾಡು ಭಾಗದ ರೈತರುಗಳು ನಂತರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಅರ್ಧಗಂಟೆ ಸಮಯ ರಸ್ತೆ ತಡೆನಡೆಸಿ ನಂತರ ಧರಣಿ ಸ್ಥಳಕ್ಕೆ ಆಗಮಿಸಿ ಧರಣಿನಿರತರೊಂದಿಗೆ ಪಾಲ್ಗೊಂಡರು.
ಈ ಸಮಯದಲ್ಲಿ ವರ್ತಕರ ಸೋಗಲಾಡಿತನದ ಬಗ್ಗೆ ಪ್ರಶ್ನಿಸಿದ ರೈತ ನಾಗಣ್ಣನ ಮಾತು ಸ್ಥಳದಲ್ಲಿ ಜೋರುಗದ್ದಲಕ್ಕೆ ಕಾರಣವಾಯಿತು.ಸ್ವಾಮೀಜಿಗಳ ಉಪಸ್ಥಿತಿಯಲ್ಲಿಯೇ ನಫೆಡ್ ಪ್ರಾರಂಭವಾಗದಂತೆ ಕೊಬ್ಬರಿ ಬೆಲೆ ಏರಿಸಿರುವ ವರ್ತಕರ ಕ್ರಮದ ಬಗ್ಗೆ ರೈತ ಹೋರಾಟಗಾರರು ಮತ್ತು ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರ ನಡುವೆ ಕೆಲವು ಸಮಯ ಮಾತಿನ ಜಟಾಪಟಿ ನಡೆದು ಎಲ್ಲರಲ್ಲೂ ಗೊಂದಲ ಮೂಡಿಸಿತು.
ರೈತ ಸಂಘದ ನಾಗಣ್ಣ ಮಾತನಾಡಿ ನಾವು ಧರಣಿ ಪ್ರಾರಂಭಿಸುವಾಗ ೫೦೧೧ ರೂ ಕುಸಿತಕಂಡಿದ್ದ ಕೊಬ್ಬರಿಯ ಬೆಲೆಗೆ ನಮ್ಮ ಹೋರಾಟ ನಡೆದು ಅದರ ಫಲವಾಗಿ ನಫೇಡ್ ಪ್ರಾರಂಭಿಸುವುದಾಗಿ ಸರಕಾರವು ಘೋಷಿಸಿದೆ ಹೀಗಿರುವಾಗ ಈಗ ಏಕಾಏಕಿ ವರ್ತಕರು ಕೊಬ್ಬರಿ ಬೆಲೆಗೆ ೬೫೩೬ ರೂ ನಿಗದಿ ಪಡಿಸಿ ದರ ಪ್ರಕಟಿಸಿರುವುದು ಸರಕಾರದವರು ನಫೇಡ್ ತೆರೆಯದಂತೆ ಮಾಡಿರುವ ತಂತ್ರವಾಗಿದೆ.ವರ್ತಕರು ಮಾಡಿರುವ ಈ ಕ್ರಮ ಸರಿಯೇ ಎಂದು ಹರಿಹಾಯ್ದ ಅವರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಡಳಿತ ಮಂಡಳಿಯು ಇದಕ್ಕೆ ಸಹಕಾರ ನೀಡಿ ಈಗ ಮೌನವಹಿಸಿರುವುದು ಸರಿಯಲ್ಲವೆಂದು ಅಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಧ್ವನಿಗೂಡಿಸಿದ ಯಳನಾಡು ಲೊಕೇಶ್ ಸುಮ್ಮನೆ ಕೂತು ಧರಣಿ ನಡೆಸಿದರೆ ಪ್ರಯೋಜನವಿಲ್ಲಾ. ಮಾರುಕಟ್ಟೆಯಲ್ಲಿನ ವರ್ತಕರು ಅಂಗಡಿಗಳನ್ನ ತೆಗೆದು ವ್ಯಾಪಾರ ನಡೆಸದಂತೆ ಅಂಗಡಿಗಳನ್ನು ಬಂಧ್ ಮಾಡಿಸಿ ಎಂದು ಸಿಡಿದೆದ್ದರು.
ಧರಣಿ ಸ್ಥಳದಲ್ಲಿಯೆ ಇದ್ದ ಮಾರುಕಟ್ಟೆಯ ಆಡಳಿತ ಮಂಡಳಿಯ ಅಧ್ಯಕ್ಷ ಬರಗೂರುಬಸವರಾಜು ಪ್ರತಿಕ್ರಿಯಿಸಿ ಮಾರುಕಟ್ಟೆಯಲ್ಲಿ ಕೊಬ್ಬರಿಗೆ ಬೆಲೆ ನಿಗದಿಪಡಿಸುವುದು ವರ್ತಕರೆ ವಿನ: ಮಾರುಕಟ್ಟೆಯ ಆಡಳಿತಮಂಡಳಿಯ ಸದಸ್ಯರಲ್ಲ.ಈ ಕಚೇರಿಯ ಮುಂದೆನೆ ನೀವು ಧರಣಿ ನಡೆಸಲು ನಾವು ಸಹಕಾರ ನೀಡುತ್ತಿದ್ದು ನಾವು ಸಹ ನಿಮ್ಮೊಂದಿಗೆ ನಿತ್ಯ ಧರಣಿಯಲ್ಲಿ ಪಾಲ್ಗೊಳ್ಳುತ್ತಿದ್ದು ನಿಮ್ಮ ಅಪಾದನೆಯಲ್ಲಿ ಹುರುಳಿಲ್ಲ.ತೆಂಡರ್ ನಲ್ಲಿ ಕೊಬ್ಬರಿ ಬೆಲೆಯನ್ನು ವರ್ತಕರು ಹೆಚ್ಚಿಸದಂತೆ ನೀವೇ ತಡೆಯಬೇಕಿತ್ತು ಎಂದರಲ್ಲದೆಮಾರುಕಟ್ಟೆಯಲ್ಲಿನ ವರ್ತಕರ ಅಂಗಡಿಗಳನ್ನು ನಾವು ಬಂದ್ ಮಾಡಿಸಲು ಸಾಧ್ಯವಿಲ್ಲ. ನೀವೆ ಬಂದ್ ಮಾಡಿಸಿ, ನಾವು ಸಹಾ ನಿಮ್ಮ ಜೊತೆಯಲ್ಲಿ ಬರುತ್ತೇವೆ. ನಮ್ಮ ಆಡಳಿತ ಮಂಡಳಿಯು ರೈತರ ಪರವಾಗಿಯೇ ನಿಲ್ಲುತ್ತದೆ ಎಂದರು.
ನಂತರ ಜ್ಞಾನಪ್ರಭು ಸಿದ್ದರಾಮದೇಶಿಕೇಂದ್ರ ಸ್ವಾಮೀಜಿ ಮಾತನಾಡಿ ರೈತರು ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಮೊದಲು ಸಂಘಟಿತರಾಗಿ .ರೈತರು ಬೆಳೆದ ಬೆಳೆಗೆ ಸಮರ್ಪಕವಾದ ಬೆಲೆ ಸಿಗದಿದ್ದ ಮೇಲೆ ಏಕೆ ಕೃಷಿ ಕಾರ್ಯ ನಿರ್ವಹಿಸ ಬೇಕು, ರೈತರೆಲ್ಲಾ ಒಟ್ಟಾಗಿ ಕೃಷಿ ಕಾರ್ಯವನ್ನು ತ್ಯಜಿಸಿದರೆ ಮುಂದೊಂದು ದಿನ ದೇಶದಲ್ಲಿ ಆಹಾರ ಉತ್ಪಾದನೆಯ ಸಮಸ್ಯೆ ತಲೆದೋರಿ ಸರಕಾರಗಳೆ ರೈತರನ್ನ ಹುಡುಕಿಕೊಂಡು ಬರುವಂತ ದಿನಗಳು ಬರಲಿವೆ.ಆದುದರಿಂದ ಸರಕಾರಗಳು ಈಗಲಾದರು ಎಚ್ಚೆತ್ತುಕೊಂಡು ರೈತರು ಬೆಳೆಯುವ ಬೆಲೆಗೆ ಸಮಪರ್ಕವಾದ ಬೆಲೆಯನ್ನು ನೀಡಲು ಮುಂದಾಗುವಂತೆ ತಿಳಿಸಿದರು.
ರೈತರು ಅವರಿವರ ಮೇಲೆ ಆರೋಪ ಮಾಡುವುದನ್ನು ಬಿಟ್ಟು ಎಲ್ಲರೂ ಒಗ್ಗಟಾಗಿ ಮಾರುಕಟ್ಟೆಗೆ ಕೊಬ್ಬರಿಯ ತರುವುದನ್ನು ನಿಲ್ಲಿಸಿ, ಆಗ ವರ್ತಕರು ನಿಮ್ಮ ದಾರಿಗೆ ಬರುತ್ತಾರೆಂದರು.ಇಂದು ನಾವು ಕುಡಿಯುವ ನೀರಿನ ಬಾಟಲ್ ಬೆಲೆ ೧೫ರೂ ಇದೆ ಆದರೆ ರೈತರು ವರ್ಷಗಟ್ಟೆಲೆ ಬೆವರು ಸುರಿಸಿ ಬೆಳೆಯುವ ಎಳನೀರಿನ ಬೆಲೆ ಮತ್ತು ಕಾಯಿ ೮ ರೂ ಅಂದರೆ ರೈತರ ಶ್ರಮಕ್ಕೆ ಬೆಲೆ ಎಲ್ಲಿದೆ ಎಂದರು.
ರೈತರು ಬೆಳೆದ ಬೆಳೆಗೆ ನ್ಯಾಯಯುತವಾದ ಬೆಲೆಸಿಗದಂತ ಸ್ಥಿತಿ ಇಂದು ನಿರ್ಮಾಣಗೊಂಡಿದೆ.ಇದೇ ಪರಿಸ್ಥಿತಿ ಮುಂದುವರಿದಲ್ಲಿ ಹಳ್ಳಿಯಲ್ಲಿ ಇರುವ ಅಲ್ಪಸ್ವಲ್ಪ ರೈತರು ಸಹಾ ಕೃಷಿಯನ್ನ ಬಿಟ್ಟು ನಗರ ಪ್ರದೇಶಗಳಿಗೆ ವಲಸೆ ಹೋಗುವಂತಹ ಸ್ಥಿತಿ ನಿರ್ಮಾಣಗೊಳ್ಳಲಿದೆ ಎಂದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ