ಹುಳಿಯಾರು: ಟಿಪ್ಪು ಜಯಂತಿ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಎಚ್ಚರವಹಿಸಬೇಕು ಹಾಗೂ ಜಯಂತಿ ಆಚರಣೆಯನ್ನು ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಮಾಡುವುದಾಗಲಿ ಹಾಗೂ ಮೆರವಣಿಗೆ ನಡೆಸುವುದಾಗಲಿ ಮಾಡಕೂಡದು ಎಂದು ಪಿಎಸೈ ಪ್ರವೀಣ್ ಕುಮಾರ್ ಸೂಚಿಸಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕರೆಯಲಾಗಿದ್ದ ನಾನಾ ಸಂಘ ಸಂಸ್ಥೆಗಳ, ಎಲ್ಲಾ ಧರ್ಮದ ಸಾರ್ವಜನಿಕ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು ಟಿಪ್ಪು ಜಯಂತಿ ಆಚರಣೆಯನ್ನು ಒಳಾಂಗಣದಲ್ಲಿ ನಡೆಸಬೇಕು ಯಾವುದೇ ರೀತಿಯ ಧ್ವನವರ್ಧಕಗಳನ್ನು ಬಳಸಬಾರದು, ಪ್ರಚೋದನೆ ನೀಡುವ ರೀತಿಯಲ್ಲಿ ಭಾಷಣಗಳನ್ನು ಮಾಡಬಾರದು, ಹಾಗೂ ಮೆರವಣಿಗೆಯನ್ನು ನಡೆಸಬಾರದು ಎಂದು ಕಟ್ಟು ನಿಟ್ಟಾಗಿ ಸೂಚಿಸಿದರು.
ಹಿಂದಿನ ವರ್ಷಗಳಲ್ಲಿ ನಡೆದ ಗಲಭೆಗಳನ್ನು ಮೆಲುಕು ಹಾಕುತ್ತಾ ಯಾವುದೇ ಲೋಪಕ್ಕೆ ಅವಕಾಶ ಇಲ್ಲದೆ ಶಾಂತಿಯುತವಾಗಿ ಹಬ್ಬ ಆಚರಿಸಬೇಕೆಂದು ತಾಕೀತು ಮಾಡಿದರು. ಹಬ್ಬದ ಹೆಸರಿನಲ್ಲಿ ಸಾಮಾಜಿಕ ನೆಮ್ಮದಿಯನ್ನು ಹಾಳುಗೆಡವಬಾರದು ಹಾಗೂ ಬ್ಯಾನರ್ ಬಂಟಿಂಗ್‌ಗಳನ್ನು ಕಟ್ಟಬಾರದು, ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಅಥವಾ ಪ್ರಚೋದನೆ ನೀಡುವಂತಹ ಪೋಸ್ಟರ್‌ಗಳನ್ನು ಹಾಕಬಾರದು ಮತ್ತು ಅಂತಹ ಪೋಸ್ಟರ್‌ಗಳಿಗೆ ಲೈಕ್ ನೀಡುವುದು ಕೂಡ ಅಪರಾಧವಾಗಿದ್ದು ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಗ್ರಾಪಂ ಸದಸ್ಯ ಸೈಯದ್‌ಜಹೀರ್ ಸಾಬ್ ನಾವೆಲ್ಲಾ ಸಹೋದರರಂತಿದ್ದು ಯಾವುದೇ ಸಂದರ್ಭದಲ್ಲೂ ಅಹಿತಕರ ಘಟನೆ ನಡೆಯಲು ಆಸ್ಪದ ನೀಡುವುದಿಲ್ಲವೆಂದು ಎಂದು ಭರವಸೆ ನೀಡಿದರು.
ತಾ.ಪಂ.ಸದಸ್ಯ ಹೆಚ್.ಎನ್.ಕುಮಾರ್, ಗ್ರಾ.ಪಂ.ಉಪಾಧ್ಯಕ್ಷ ಗಣೇಶ್, ಗ್ರಾ.ಪಂ.ಸದಸ್ಯ ಪಟಾಕಿ ಶಿವಣ್ಣ, ಇಮ್ರಾನ್, ಅಪ್ಸರ್ ಮೊದಲಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ