ಬುಧವಾರದಿಂದ ಕೊಬ್ಬರಿ ಖರೀದಿ ಆರಂಭಿಸುತ್ತೇವೆ ಧರಣಿ ಕೈ ಬಿಡಿ: ಎಪಿಎಂಸಿ ಡಿಡಿ
ಫಸ್ಟ್ ರೈತರ ಕೊಬ್ಬರಿ ತೂಗಿ ಆಮೇಲೆ ಧರಣಿ ಕೈ ಬಿಡ್ತಿವಿ : ಧರಣಿ ನಿರತರು
ಉಪವಿಭಾಗಾಧಿಕಾರಿ ಪ್ರಜ್ಞಾ ಅಮ್ಮೆಂಬಳ ಮನವೊಲಿಕೆ ಪ್ರಯತ್ನವೂ ವಿಫಲ
-------------------------------------------------
ಹುಳಿಯಾರು: ಕೊಬ್ಬರಿಗೆ ಬೆಂಬಲ ಬೆಲೆ ನೀಡಲು ಆಗ್ರಹಿಸಿ ಹುಳಿಯಾರು ಎಪಿಎಂಸಿ ಎದುರು ಕಳೆದ ೧೧ ದಿನಗಳಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿಗೆ ಹಾಗೂ ೨ ದಿನಗಳಿಂದ ಉಪವಾಸ ಕುಳಿತಿರುವ ಸ್ಥಳಕ್ಕೆ ತುಮಕೂರು ಎಪಿಎಂಸಿ ಉಪ ನಿರ್ದೆಶಕ ಡಾ.ರಾಜಣ್ಣ ಅವರು ಮಂಗಳವಾರ ಭೇಟಿ ನೀಡಿದರು.
ನ್ಯಾಫೆಡ್ ಕೇಂದ್ರ ಆರಂಭಿಸಿ ರೈತರ ಕೊಬ್ಬರಿ ಖರೀಧಿಸಲು ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದ್ದು ಸೋಮವಾರ ತಡರಾತ್ರಿ ಫ್ಯಾಕ್ಸ್ ಮೆಸೆಜ್ ಬಂದಿದೆ. ಅಲ್ಲದೆ ರಾಜ್ಯ ಸರ್ಕಾರ ಸಹ ಮಂಗಳವಾರ ರಾತ್ರಿಯೊಳಗೆ ತನ್ನ ಪಾಲಿನ ಪ್ರೋತ್ಸಾಹ ಧನ ಎಷ್ಟೆಂದು ಘೋಷಿಸಲಿದ್ದು ಅದರಂತೆ ಬುಧವಾರದಿಂದ ಖರೀಧಿ ಕೇಂದ್ರ ಆರಂಭಿಸುತ್ತೇವೆ. ಹಾಗಾಗಿ ಧರಣಿ ಕೈ ಬಿಡಿ ಎಂದು ಡಾ.ರಾಜಣ್ಣ ಮನವಿ ಮಾಡಿದರು.
ಹುಳಿಯಾರು ಎಪಿಎಂಸಿ ಎದುರು ಕೊಬ್ಬರಿಗೆ ಬೆಂಬಲ ಬೆಲೆಗಾಗಿ ಉಪವಾಸ ಕುಳಿತಿರುವ ಕೆಂಕೆರೆ ಸತೀಶ್ ಅವರ ಮನವೊಲಿಸುತ್ತಿರುವ ಉಪವಿಭಾಗಾಧಿಕಾರಿ ಪ್ರಜ್ಞಾಅಮ್ಮೆಂಬಳ್ ಹಾಗೂ ಎಪಿಎಂಸಿ ಡಿಡಿ ಡಾ.ರಾಜಣ್ಣ. |
ಕೇಂದ್ರ ಸರ್ಕಾರ ಖರೀಧಿ ಕೇಂದ್ರ ಆರಂಭಿಸಲು ನಿರ್ದೆಶನ ನೀಡಿದೆ. ಆದರೆ ಬೆಂಬಲ ಬೆಲೆ ಹಿಂದಿನಂತೆ ೬೨೪೦ ರೂ ಇದ್ದು ಒಂದು ರೂಪಾಯಿ ಸಹ ಏರಿಸಿಲ್ಲ. ಇನ್ನು ರಾಜ್ಯ ಸರ್ಕಾರ ತನ್ನ ಪಾಲಿನ ಪ್ರೋತ್ಸಾಹ ಧನ ನಿಗಧಿ ಮಾಡಿಲ್ಲ. ಕನಿಷ್ಟ ಎಂದರೂ ೨ ಸಾವಿರ ಮಾಡಿದರೂ ೮ ಸಾವಿರದ ಆಸುಪಾಸಿನಲ್ಲಿ ಬೆಲೆ ಇರುತ್ತದೆ. ಇಷ್ಟಾದರೂ ರೈತನ ಶ್ರಮಕ್ಕೆ ನ್ಯಾಯಯುತವಾದ ಬೆಲೆಯಲ್ಲ. ಹಾಗಾಗಿ ಕನಿಷ್ಟ ೧೦ ಸಾವಿರ ರೂ. ನಿಗಧಿ ಮಾಡಿ ಖರೀಧಿ ಕೇಂದ್ರ ಆರಂಭಿಸದ ವಿನಃ ಧರಣಿ ಕೈ ಬಿಡೋದಿಲ್ಲ ಎಂದು ರೈತರು ಪಟ್ಟು ಹಿಡಿದರು.
ಕೇಂದ್ರ ಸರ್ಕಾರ ಬೆಲೆ ನಿಗಧಿಗೆ ದೇಶದ ಒಟ್ಟಾರೆ ಬೆಳೆ ಹಾಗೂ ತಜ್ಞರ ಅಭಿಪ್ರಾಯ ಸಂಗ್ರಹಿಸುವುದು ಸೇರಿದಂತೆ ಅನೇಕ ನಿಯಮಗಳಿದ್ದು ಅದ್ಯಕ್ಕೆ ಬೆಲೆ ಏರಿಸುವುದು ಕಷ್ಟ ಸಾಧ್ಯ. ಆದರೆ ರಾಜ್ಯ ಸರ್ಕಾರ ಉತ್ತಮ ಬೆಲೆ ಘೋಷಿಸುವ ವಿಶ್ವಾಸ ತಮಗಿದ್ದು ೧೦ ಸಾವಿರದ ಆಸುಪಾಸಿನಲ್ಲಿ ಬೆಲೆ ನಿಗಧಿಯಾಗುತ್ತದೆ. ಅದರಂತೆ ಖರೀಧಿ ಆರಂಭಿಸಿದರೆ ಸಹಜವಾಗಿ ಮಾರುಕಟ್ಟೆ ಬೆಲೆಯಲ್ಲೂ ಏರಿಕೆಯಾಗಲಿದೆ. ಹಾಗಾಗಿ ನಾಳೆ ರೈತರಿಂದಲೇ ಖರೀಧಿ ಕೇಂದ್ರ ಆರಂಭಿಸುವುದಿದ್ದು ಜಿಲ್ಲೆಯ ೮ ಕಡೆ ಖರೀಧಿ ಕೇಂದ್ರ ಆರಂಭವಾಗಲಿದ್ದು ಚಿ.ನಾ.ಹಳ್ಳಿ ತಾಲೂಕಿನಲ್ಲಿ ೨ ಕೇಂದ್ರ ಆರಂಭಿಸುವುದಾಗಿ ಡಿಡಿ ತಿಳಿಸಿದರು.
ಹುಳಿಯಾರು ಎಪಿಎಂಸಿ ಎದುರು ಕೊಬ್ಬರಿಗೆ ಬೆಂಬಲ ಬೆಲೆಗಾಗಿ ಉಪವಾಸ ಕುಳಿತಿರುವ ಕೆಂಕೆರೆ ಸತೀಶ್ ಅವರ ಜೊತೆ ಎಪಿಎಂಸಿ ಉಪನಿರ್ದೆಶಕ ಡಾ.ರಾಜಣ್ಣ ಅವರು ಮಾತನಾಡುತ್ತಿರುವುದು. |
ಹಾಗಾದರೆ ಇಂದೇ ಖರೀಧಿ ಕೇಂದ್ರ ಆರಂಭಿಸಿ ನಾವು ಧರಣಿ ಕೈ ಬಿಡುತ್ತೇವೆ. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಭರವಸೆ ಕೇಳಿ ಕೇಳಿ ಸಾಕಾಗಿ ಹೋಗಿದೆ. ಅವರಿಗೆ ಮಾತಿನ ಮೇಲೆ ನಿಗ ಇರೋದಿಲ್ಲ. ೩ ತಿಂಗಳಿಂದಲೂ ನಮ್ಮ ಪ್ರತಿಭಟನೆ ಸಂದರ್ಬದಲ್ಲಿ ಹೀಗೆ ಹೇಳಿ ಹೇಳಿ ನಮ್ಮನ್ನು ಯಾಮಾರಿಸಿದ್ದಾರೆ. ಈಗಂತೂ ನಾವು ದೃಢ ನಿರ್ಧಾರಕ್ಕೆ ಬಂದಿದ್ದು ಖರೀಧಿ ಆರಂಭವಾಗದ ವಿನಃ ಧರಣಿ ಕೈ ಬಿಡೋದಿಲ್ಲ. ಅಲ್ಲದೆ ಬರಗಾರದಲ್ಲಿ ಖರೀಧಿ ವೇಳೆ ಕೊಬ್ಬರಿಗೆ ಗ್ರೇಡ್ ಗ್ರೀಡ್ ಎಂದು ತರತಮ್ಯ ಮಾಡದೆ ಕೌಟು, ಚೂರು ಬಿಟ್ಟು ಎಲ್ಲ ಕೊಬ್ಬರಿ ಖರೀಧಿಸಬೇಕು ಎಂದು ತಿಳಿಸಿ ಧರಣಿ ಮುಂದುವರಿಸಿದರು.
ಸಂಜೆಯಷ್ಟರಲ್ಲಿ ಸ್ಥಳಕ್ಕೆ ಉಪವಿಭಾಗಾಧಿಕಾರಿ ಪ್ರಜ್ಞಾ ಅಮ್ಮೆಂಬಳ್ ಅವರು ಆಗಮಿಸಿ ರೈತರ ಮನವೊಲಿಸಲು ಪ್ರಯತ್ನಿಸಿದರು. ಸರ್ಕಾರ ೧ ಸಾವಿರ ರೂ. ಪ್ರೋತ್ಸಾಹ ಧನ ನೀಡಲಿದ್ದು ನಾಳೆಯೇ ಖರೀಧಿ ಆರಂಭಿಸುವುದಾಗಿ ತಿಳಿಸಿದರು. ೧ ಸಾವಿರ ರೂ. ಪ್ರೋತ್ಸಾಹಧನ ಎಂದೊಡನೆ ಸತೀಶ್ ಕೆಂಡಮಂಡಲರಾದರು. ಉತ್ತಮ ಬೆಲೆಗಾಗಿ ೩ ತಿಂಗಳಿಂದ ಹೋರಾಟ ಮಾಡುತ್ತಿದ್ದೇವೆ. ರೈತರಿಗಾಗಿ ಹೋರಾಟಕ್ಕೆ ೧ ಲಕ್ಷ ಸಾಲ ಮಾಡಿದ್ದೇನೆ. ಹೆಂಡತಿ ಮಕ್ಕಳು ಬಿಟ್ಟು ೧೧ ದಿನಗಳಿಂದ ಧರಣಿ ಮಾಡುತ್ತಿದ್ದೇನೆ. ನಾವು ಕೇಳುತ್ತಿರುವುದು ಭಿಕ್ಷೆಯಲ್ಲ. ನಮ್ಮ ಪಾಲಿನ ಹಕ್ಕು. ಜನಾರ್ಧನರೆಡ್ಡಿ ಹತ್ತಿರ ಹೋಗಿ ನಮ್ಮ ಅಳಲನ್ನು ತೋಡಿಕೊಂಡಿದ್ದರು ಧಾರಳವಾಗಿ ಹಣ ನೀಡುತ್ತಿದ್ದ. ಆದರೆ ನಮ್ಮದೆ ದುಡ್ಡಿನಲ್ಲಿ ಸರ್ಕಾರ ನಡೆಸುತ್ತಿರುವವರು ಭಿಕ್ಷೆ ರೂಪದಲ್ಲಿ ೧ ಸಾವಿರ ರೂ. ಕೊಟ್ಟರೆ ನಾವು ಒಪ್ಪಲು ಸಾಧ್ಯವಿಲ್ಲ. ಇಲ್ಲೆ ನನ್ನ ಪ್ರಾಣ ಹೋದರೂ ಚಿಂತೆಯಿಲ್ಲ. ಕನಿಷ್ಟ ೩ ಸಾವಿರ ಬೆಂಬಲ ಬೆಲೆ ಕೊಡೋವರೆವಿಗೂ ಧರಣಿ ಹಿಂಪಡೆಯುವುದಿಲ್ಲ ಎಂದು ಕಡ್ಡಿ ತುಂಡಾದಂತೆ ಹೇಳಿ ಧರಣಿ ಮುಂದುವರಿಸಿದರು.
ತಹಸೀಲ್ದಾರ್ ಗಂಗೇಶ್, ಎಪಿಎಂಸಿ ಅಧ್ಯಕ್ಷ ಬರಗೂರು ಬಸವರಾಜು, ಕಾರ್ಯದರ್ಶಿ ಶ್ರೀನಿವಾಸ್, ಗ್ರಾಪಂ ಅಧ್ಯಕ್ಷೆ ಗೀತಾಪ್ರದೀಪ್, ತಾಪಂ ಸದಸ್ಯ ಏಜೆಂಟ್ ಕುಮಾರ್, ಗ್ರಾಪಂ ಉಪಾಧ್ಯಕ್ಷ ಗಣೇಶ್, ಸದಸ್ಯ ರಾಘವೇಂದ್ರ, ವರ್ತಕರ ಸಂಘದ ಅಧ್ಯಕ್ಷ ಎಂಎಸ್‌ಆರ್ ನಟರಾಜ್, ಕಿರುತೆರೆ ಕಲಾವಿದ ಗೌಡಿ, ರೈತ ಸಂಘದ ಶಂಕರಣ್ಣ, ಕೆಂಕೆರೆ ಸತೀಶ್, ಮಲ್ಲಿಕಾರ್ಜುನ್, ಕಾಡಿನರಾಜ ನಾಗರಾಜು, ಗಂಗಣ್ಣ, ಮತ್ತಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ