ಸರ್ಕಾರದ ವಿರುದ್ಧ ಕಿಡಿಕಾರಿದ ಪ್ರತಿಭಟನಕಾರರು : ನಿರ್ಲಕ್ಷ್ಯದ ವಿರುದ್ಧ ಸಿಡಿದೆದ್ದ ರೈತರು
------------------------------------
ಹುಳಿಯಾರು: ಕೊಬ್ಬರಿಗೆ ಬೆಂಬಲ ಬೆಲೆ ನೀಡಲು ಆಗ್ರಹಿಸಿ ಹುಳಿಯಾರು ಎಪಿಎಂಸಿ ಎದುರು ಕಳೆದ ೧೦ ದಿನಗಳಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿಗೆ ಸರ್ಕಾರವೂ ಸೇರಿದಂತೆ ಜನಪ್ರತಿನಿಧಿಗಳು ಗಮನಹರಿಸದಿದ್ದು ರೈತರ ಶಾಂತಿಯುತ ಧರಣಿ ಮತ್ತೊಂದು ಮಜಲು ತಲುಪಲು ಕಾರಣವಾಗಿ ಸಿಡಿದೆದ್ದ ರೈತರು ಸೋಮವಾರ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಎಪಿಎಂಸಿ ಧರಣಿ ಸ್ಥಳದಿಂದ ರಾಷ್ಟ್ರೀಯ ಹೆದ್ದಾರಿಯವರೆವಿಗೂ ಸರ್ಕಾರಗಳ ವಿರುದ್ಧ ಘೋಷಣೆ ಕೂಗುತ್ತ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು ಹೆದ್ದಾರಿಯಲ್ಲಿ ವಾಹನಗಳಿಗೆ ಅಡ್ಡಲಾಗಿ ನಿಂತು ದ್ವಿಚಕ್ರ ವಾಹನಗಳೂ ಸೇರಿದಂತೆ ಯಾವುದೇ ವಾಹನಗಳನ್ನು ಬಿಡದೆ ರಸ್ತೆ ನಡೆಸಿದರು.ರಸ್ತೆ ತಡೆ ಬಗ್ಗೆ ಮುಂಚಿತವಾಗಿಯೇ ತಿಳಿಸಿದ್ದರಿಂದ ಪಿಎಸ್‌ಐ ಪ್ರವೀಣ್ ಕುಮಾರ್ ಅವನ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.
ರಾಜ್ಯ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಕೆಂಕೆರೆ ಸತೀಶ್ ಅವರು ಈ ಸಂದರ್ಭದಲ್ಲಿ ಮಾತನಾಡಿ ಪಾದಯಾತ್ರೆ, ಬೈಕ್ ರ್ಯಾಲಿ, ಅಹೋರಾತ್ರಿ ಧರಣಿ ಸೇರಿದಂತೆ ಕಳೆದ ೩ ತಿಂಗಳಿಂದ ಕೊಬ್ಬರಿ ಬೆಲೆಗಾಗಿ ಪ್ರತಿಭಟನೆ ಮಾಡಲಾಗುತ್ತಿದ್ದರೂ ಜನಪ್ರತಿನಿಧಿಗಳು ಕಿವಿಗೊಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಇಂದಿನಿಂದ ಪ್ರಾರಂಭವಾಗುತ್ತಿರುವ ಬೆಳಗಾವಿ ಅಧಿವೇಶನದಲ್ಲಿ ಶಾಸಕರ ಊಟೋಪಚಾರ, ಭತ್ಯೆಗಾಗಿಯೇ ಕೋಟಿಗಟ್ಟಲೆ ಖರ್ಚು ಮಾಡುವ ಸರ್ಕಾರ ಐದಾರು ಕೋಟಿ ಮೀಸಲಿಟ್ಟು ಕೊಬ್ಬರಿಗೆ ಉತ್ತಮ ಬೆಲೆ ಕೊಟ್ಟು ಖರೀದಿಗೆ ಮುಂದಾಗದಿರುವುದು ದುರಂತ ಎಂದು ಆರೋಪಿಸಿದರರು. ಕೊಬ್ಬರಿ ಬೆಳೆಗಾರರ ಗೋಳು ಕೇಳದ ಎಲ್ಲ ಶಾಸಕರು ಹಾಗೂ ಸಂಸದರು ನಮ್ಮ ಪಾಲಿಗೆ ಸತ್ತಿದ್ದು ರೈತರು ಇವರಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವಂತೆ ಕರೆ ನೀಡಿದರು.
ರೈತ ಸಂಘದ ಉಪಾಧ್ಯಕ್ಷ ತಮ್ಮಡಿಹಳ್ಳಿ ಮಲ್ಲಿಕಾರ್ಜುನ್ ಮಾತನಾಡಿ ಕಳೆದ ೧೦ ದಿನಗಳಿಂದ ಮನೆಮಠ ಬಿಟ್ಟು ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಜಿಲ್ಲಾಧಿಕಾರಿಗಳಾಗಲಿ, ತಹಸೀಲ್ದಾರ್ ಅವರಾಗಲಿ ಧರಣಿ ಸ್ಥಳಕ್ಕೆ ಆಗಮಿಸಿ ರೈತರ ಅಹವಾಲು ಆಲಿಸುತ್ತಿಲ್ಲ. ಇನ್ನು ಶಾಸಕ ಸಿ.ಬಿ.ಸುರೇಶ್‌ಬಾಬು ಕ್ಷೇತ್ರದಲ್ಲಿದ್ದರೂ ಧರಣಿ ಕಡೆ ತಿರುಗಿ ನೋಡಿಲ್ಲ. ಮುಖ್ಯಮಂತ್ರಿಗಳು ತಾಲೂಕಿಗೆ ಬಂದರಾದರೂ ಕೊಬ್ಬರಿ ಬೆಳೆಗಾರನ ಕಷ್ಟಕ್ಕೆ ಸ್ಪಂದಿಸದೆ ಅವರು ಇಲ್ಲಿ ಇರುವಷ್ಟು ಕಾಲ ರೈತರನ್ನು ಬಂಧಿಸಿದ್ದು ನಾಚಿಕೆ ಪ್ರಚಾರಕ್ಕೆನ್ನುವಂತೆ ಬರ ವೀಕ್ಷಣೆ ಮಾಡಿ ಹೋದರು. ಇನ್ನು ಪ್ರಧಾನಿ ಮೋದಿ ಅವರಿಗೆ ವಿದೇಶಿ ಪ್ರವಾಸ ಹುಚ್ಚು ಹಿಡಿದಿದ್ದು ದೇಶದ ರೈತನನ್ನು ಸಂಪೂರ್ಣ ಮರೆತಿದ್ದಾರೆ. ಒಟ್ಟಾರೆ ಎಲ್ಲರೂ ರೈತನ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ರೈತ ಸಂಘದ ಅಧ್ಯಕ್ಷ ಶಂಕರಪ್ಪ ಅವರು ಮಾತನಾಡಿ ಮಳೆಬೆಳೆಯಿಲ್ಲದೆ ಬರಗಾರದಲ್ಲಿ ತೆಂಗು ರೈತನ ಆಸರೆಯಾಗಿದೆ. ಆದರೆ ಕೊಬ್ಬರಿ ಬೆಲೆ ಪಾತಾಳ ಸೇರಿದ್ದು ಬೆಳೆಯಿದ್ದರೂ ರೈತನ ಬದುಕು ಹಸನಾಗುತ್ತಿಲ್ಲ. ಈ ಸಂದರ್ಭದಲ್ಲಿ ಸರ್ಕಾರಗಳು ರೈತನಿಗೆ ಆಸರೆಯಾಗಬೇಕಿತ್ತು. ಆದರೂ ಜಾಣ ಕಿವುಡು, ಜಾಣ ಕುರುಡುತನ ಪ್ರದರ್ಶಿಸುತ್ತಿವೆ. ಜಿಲ್ಲಾ ಉಸ್ತುವಾರಿ ಸಚಿವ ಜಯಚಂದ್ರರವರು ಕೊಬ್ಬರಿ ಬೆಂಬಲ ಬೆಲೆಯೊಂದಿಗೆ ರಾಜ್ಯದ ಪಾಲಾಗಿ ೨೦೦೦ರೂ ಹೆಚ್ಚುವರಿ ಸಹಾಯಧನ ಘೋಷಿಸಲು ಸರ್ಕಾರ ಸಿದ್ದವಿದ್ದು ಕೇಂದ್ರ ಸರ್ಕರ ತನ್ನ ಪಾಲು ಘೋಷಿಸಲಿ ಎನ್ನುತ್ತಾ ದಿನ ದೂಡುತ್ತಿದ್ದಾರೆ. ನಿಜವಾಗಲೂ ಇವರಿಗೆ ರೈತನ ಮೇಲೆ ಕಾಳಜಿ ಇದ್ದರೆ ರಾಜ್ಯ ಸರ್ಕಾರದ ಹಣ ಘೋಷಿಸಿ ನ್ಯಾಫೆಡ್ ಖರೀದಿ ಕೇಂದ್ರ ಆರಂಭಿಸಲಿ. ಆಗಲೂ ಕೇಂದ್ರ ಮೌನ ತಾಳಿದ್ದರೆ ರಾಜ್ಯದ ಜನ ಕೇಂದ್ರದ ಮೇಲೆ ತಿರುಗಿ ಬೀಳುತ್ತಾರೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಿಪಟೂರು ತಾಲೂಕು ರೈತ ಸಂಘದ ಅಧ್ಯಕ್ಷ ದೇವರಾಜು,ಚಿಕ್ಕನಾಯಕನಹಳ್ಳಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ತಿಮ್ಮನಹಳ್ಳಿ ಲೋಕೇಶ್,ತಿಪಟೂರು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಯೋಗಣ್ಣ, ಶಿರಾ ಅಧ್ಯಕ್ಷ ಆರಾಧ್ಯ, ಹೊಸದುರ್ಗ ಅಧ್ಯಕ್ಷ ಲಿಂಗರಾಜು, ಬುಕ್ಕಾಪಟ್ಟಣ ಬಯಲಪ್ಪ, ಕಾಡಿನರಾಜ ನಾಗರಾಜು, ಹಿರಿಯ ಮುಖಂಡ ಗಂಗಣ್ಣ, ಶಿವಣ್ಣ, ದಾಸಪ್ಪ, ಶಂಕರಪ್ಪ, ಹೂನ್ನಪ್ಪ, ಮೈಲಾರಪ್ಪ ಇತರರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ