ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬರ ಪರಿಸ್ಥಿತಿ ವೀಕ್ಷಿಸಲು ಹಾಗೂ ತಿಪಟೂರಿನಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಬಂದಂತಹ ಮುಖ್ಯಮಂತ್ರಿಗಳು ಹುಳಿಯಾರಿನ ಧರಣಿ ಸ್ಥಳಕ್ಕೆ ಭೇಟಿ ನೀಡಿ ಸಂಕಷ್ಟಕ್ಕೆ ಸಿಲುಕಿರುವ ರೈತರ ಜೊತೆ ಚರ್ಚಿಸಿ ಕೊಬ್ಬರಿ ಬೆಂಬಲ ಬೆಲೆ ಘೋಷಿಸಬೇಕು ಇಲ್ಲದಿದ್ದಲ್ಲಿ ಮುಖ್ಯಮಂತ್ರಿಗಳು ಸಾಗುವ ಮಾರ್ಗಮಧ್ಯೆ ವಾಹನವನ್ನು ತಡೆದು ಕಪ್ಪುಬಾವುಟ ಪ್ರದರ್ಶಿಸಿ ಘೇರಾವ್ ಮಾಡುವುದಾಗಿ ಎಚ್ಚರಿಸಿದ್ದ ರೈತಸಂಘದ ಪ್ರತಿಭಟನಾಕಾರರನ್ನು ಹುಳಿಯಾರಿನ ಎಪಿಎಂಸಿ ಆವರಣದಲ್ಲಿ ಪೋಲಿಸರು ಬಂಧಿಸಿದ ಘಟನೆ ಮಂಗಳವಾರ ಬೆಳಿಗ್ಗೆ ೧೧ ಗಂಟೆ ಸಮಯದಲ್ಲಿ ಜರುಗಿತು.
ಬರ ಅಧ್ಯಯನಕ್ಕೆ ಆಗಮಿಸಿದ ಮುಖ್ಯಮಂತ್ರಿಗಳನ್ನು ಭೇಟಿಮಾಡ ಹೊರಟ ಪ್ರತಿಭಟನಕಾರರನ್ನು ಹುಳಿಯಾರು ಎಪಿಎಂಸಿ ಮುಂಭಾಗ ಪೋಲಿಸರು ಬಂಧಿಸಿದರು. |
ಇದಕ್ಕೂ ಮುನ್ನ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತುಮಕೂರು ಸಂಸದ ಮುದ್ಧಹನುಮೇಗೌಡ ಹಾಗೂ ಚಿತ್ರದುರ್ಗ ಸಂಸದ ಬಿ.ಎನ್.ಚಂದ್ರಪ್ಪ ಪ್ರತಿಭಟನಕಾರರ ಸಮಸ್ಯೆ ಆಲಿಸಿದರು.ರೈತರ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗಳ ಗಮನ ತರುವುದಾಗಿ ಭರವಸೆ ನೀಡಿದರು.ಆವರು ನಿರ್ಗಮಿಸುತ್ತಿದ್ದಂತೆ ಮುಂಜಾನೆಯೇ ಆಗಮಿಸಿದ್ದ ಕುಣಿಗಲ್ ವೃತ್ತನಿರೀಕ್ಷಕ ಬಾಳೇಗೌಡ ನೇತೃತ್ವದ ತುಮಕೂರು ಗ್ರಾಮಾಂತರ ಪಿಐಸೈ ,ಹುಳಿಯಾರು ಪಿಎಸೈ ಪ್ರವೀಣ್ ಕುಮಾರ್ ಅವರುಗಳ ತಂಡ ಎಪಿಎಂಸಿ ಮುಖ್ಯದ್ವಾರಕ್ಕೆ ಬೀಗಹಾಕಿಸಿ ಯಾರನ್ನೂ ಹೊರಗೆ ಬಿಡದಂತೆ ಕಾವಲು ಕಾದರು.
ಬಂಧನಕೊಳಪಟ್ಟ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆಂಕೆರೆ ಸತೀಶ್ |
ರೈತಸಂಘದ ಜಿಲ್ಲಾಧ್ಯಕ್ಷ ಶಂಕರಣ್ಣನವರ ಮುಖಂಡತ್ವದಲ್ಲಿ ಸಭೆ ನಡೆದು ಈ ಹಿಂದೆ ನಡೆದ ಪಾದಾಯಾತ್ರೆಯ ವೇಳೆ ರೈತ ಸಂಘದ ಮುಖಂಡರನ್ನು ಬೆಂಗಳೂರಿಗೆ ಕರೆಸಿಕೊಂಡು ಕೊಬ್ಬರಿಗೆ ಬೆಂಬಲ ಬೆಲೆ ನೀಡುವುದಾಗಿ ಹೇಳಿದ್ದ ಮುಖ್ಯಮಂತ್ರಿಗಳ ಮಾತಿಗೆ ತಪ್ಪಿದ್ದು ಇಂದು ಕೊಬ್ಬರಿನಾಡಿಗೆ ಆಗಮಿಸಿರುವ ಅವರನ್ನು ಭೇಟಿ ಮಾಡಿ ಕೊಬ್ಬರಿಗೆ ೧೫ ಸಾವಿರ ಬೆಂಬಲ ಬೆಲೆ ಘೋಷಿಸಲು ಒತ್ತಾಯಿಸೋಣ ಎಂದು ಹೊರಡುತ್ತಿದ್ದಂತೆಯೇ ಮಾರುಕಟ್ಟೆಯ ಪ್ರವೇಶ ದ್ವಾರದಲ್ಲಿ ಕಾದುನಿಂತಿದ್ದ ಪೋಲಿಸರು ಎಲ್ಲರನ್ನು ಬಂಧಿಸಿದರು.ಬಸ್ಸು ಹಾಗೂ ವ್ಯಾನಿನಲ್ಲಿ ಸುಮಾರು ಅರವತ್ತಕ್ಕೂ ಹೆಚ್ಚು ರೈತಸಂಘದ ಪ್ರತಿನಿಧಿಗಳನ್ನು ತುಂಬಿಕೊಂಡು ಶಿರಾ ಬಳಿಯ ಕಲ್ಯಾಣಮಂದಿರದಲ್ಲಿ ಕೂಡಿಟ್ಟು ಸಂಜೆ ಬಿಡುಗಡೆಗೊಳಿಸಿದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ