ಕೆಂಕೆರೆಸತೀಶ್ ರಿಂದ ಮುಂದುವರಿದ ಉಪವಾಸ ಸತ್ಯಾಗ್ರಹ
ಉಳಿದ ರೈತರಿಂದ ಮುಂದುವರಿದ ಧರಣಿ
---------------------------
ಹುಳಿಯಾರು: ಕೊಬ್ಬರಿಗೆ ಬೆಂಬಲ ಬೆಲೆಗೆ ಒತ್ತಾಯಿಸಿ ಹುಳಿಯಾರಿನಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿಯಲ್ಲಿ ಉಪವಾಸ ಸತ್ಯಾಗ್ರಹ ಹೂಡಿದ್ದ ಐವರು ರೈತರ ಪೈಕಿ ನಾಲ್ಕು ಮಂದಿ ಅಸ್ವಸ್ಥರಾಗಿದ್ದು ಧರಣಿ ಸ್ಥಳಕ್ಕೆ ಆಗಮಿಸಿದ್ದ ಉಪವಿಭಾಗಾಧಿಕಾರಿ ಪ್ರಜ್ಞಾಅಮ್ಮೆಂಬಳ್ ಹಾಗೂ ತಹಸೀಲ್ದಾರ್ ಗಂಗೇಶ್ ಅವರುಗಳ ಆರೋಗ್ಯ ತಪಾಸಣೆ ನಡೆಸಿ ಬಲವಂತವಾಗಿ ಎಳನೀರು ಕುಡಿಸಿ ಉಪವಾಸ ಕೈ ಬಿಡಿಸಿ ಚಿಕ್ಕನಾಯಕನಹಳ್ಳಿಯ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ರಾಜ್ಯ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಕೆಂಕೆರೆ ಸತೀಶ್, ತಾಲೂಕು ರೈತ ಸಂಘದ ಅಧ್ಯಕ್ಷ ತಿಮ್ಮನಹಳ್ಳಿ ಲೋಕೇಶ್, ಉಪಾದ್ಯಕ್ಷ ಮಲ್ಲಿಕಾರ್ಜುನಯ್ಯ, ಹಿರಿಯ ರೈತ ಮುಖಂಡ ಸೂರಗೊಂಡನಹಳ್ಳಿ ಗಂಗಜ್ಜ,ಕೆಂಕೆರೆ ಗ್ರಾಪಂ ಸದಸ್ಯರಾದ ಕಾಡಿನರಾಜ ನಾಗರಾಜು ಅವರುಗಳೇ ಉಪವಾಸ ಸತ್ಯಗ್ರಹ ಹೂಡೀದವರಾಗಿದ್ದು ಸೋಮವಾರದಿಂದ ಹನಿ ನೀರು ಸಹ ಸೇವಿಸದೆ ಉಪವಾಸ ನಿರಶನ ನಡೆಸಿದ್ದರು.
ಇವರಲ್ಲಿ ಗ್ರಾಪಂ ಸದಸ್ಯಕಾಡಿನರಾಜ ನಾಗರಾಜು ಹಾಗೂ ಗಂಗಣ್ಣ ಅವರುಗಳು ಮಂಗಳವಾರ ೧೧ ಗಂಟೆಯಷ್ಟರಲ್ಲಿ ಶುಗರ್ ಹಾಗೂ ಬಿಪಿ ಕಡಿಮೆಯಾಗಿ ಅಸ್ವಸ್ಥಗೊಂಡರು. ತಕ್ಷಣ ಆರೋಗ್ಯ ಇಲಾಖೆಯ ಸಿಬ್ಬಂಧಿಗಳು ಸ್ಥಳಕ್ಕೆ ದೌಡಾಯಿಸಿ ಆರೋಗ್ಯ ತಪಾಸಣೆ ನಡೆಸಿದರು. ಆಗಲೂ ಸಹ ನ್ಯಾಫೆಡ್ ಕೇಂದ್ರ ಆರಂಭಿಸದ ವಿನಃ ಒಂದು ಹನಿ ನೀರು ಕುಡಿಯುವುದಿಲ್ಲ ಎಂದು ಪಟ್ಟು ಹಿಡಿದರು. ೩ ತಿಂಗಳಿಂದ ಹೋರಾಟ ಮಾಡುತ್ತಿದ್ದರೂ ಕಿವಿ ಕೊಡದ ಸರ್ಕಾರಕ್ಕೆ ನಮ್ಮ ಸಾವಿನಿಂದಲಾದರೂ ಬುದ್ದಿ ಬಂದು ಕೊಬ್ಬರಿಗೆ ೧೦ ಸಾವಿರ ರೂ. ಬೆಂಬಲ ಬೆಲೆ ಕೊಟ್ಟರೆ ಅದಕ್ಕಿಂತ ಪುಣ್ಯ ಮತ್ಯಾವುದಿದೆ ಎಂದು ಪಟ್ಟು ಹಿಡಿದರು.
ಎಪಿಎಂಸಿ ಉಪ ನಿರ್ದೆಶಕ ಡಾ.ರಾಜಣ್ಣ ಸ್ಥಳಕ್ಕೆ ಆಗಮಿಸಿ ನ್ಯಾಫೆಡ್ ಆರಂಭಿಸಲು ಕೇಂದ್ರ ಸರ್ಕಾರ ಹಸಿರು ನಿಶಾನೆ ನೀಡಿದ್ದು ಬುಧವಾರದಿಂದ ಖರೀದಿ ಕೇಂದ್ರ ಆರಂಭಿಸುವುದಾಗಿ ಹೇಳಿದ್ದರಿಂದ ಪಟ್ಟುಸಡಿಲಿಸಿದ ಅವರಿಗೆ ಡಾ.ಶೋಭ ಜ್ಯೂಸ್ ಕುಡಿಸಿ ಗ್ಲೂಕೋಸ್ ಬಾಟಲ್ ಹಾಕಿದರು.
ಸಂಜೆಯಾಗುವಷ್ಟರಲ್ಲಿ ತಿಮ್ಮನಹಳ್ಳಿ ಲೋಕೇಶ್, ತಮ್ಮಡಿಹಳ್ಳಿ ಮಲ್ಲಿಕಾರ್ಜುನ್ ಅವರ ಆರೋಗ್ಯದಲ್ಲೂ ಸಹ ಏರುಪೇರಾಯಿತು. ಸ್ಥಳಕ್ಕಾಗಮಿಸಿದ ಉಪವಿಭಾಗಾಧಿಕಾರಿ ಪ್ರಜ್ಞಾ ಅಮ್ಮೆಂಬಳ್ ಅವರು ತಕ್ಷಣ ವೈದ್ಯರನ್ನು ಕರೆಸಿ ಆರೋಗ್ಯ ತಪಾಸಣೆ ಮಾಡಿಸಿದರು. ನಾಲ್ವರೂ ಸಹ ಉಪವಾಸ ಮುಂದುವರಿಸಿದರೆ ಮತ್ತೊಷ್ಟು ಆರೋಗ ಹದಗೆಡುವ ವಿಷಯ ತಿಳಿದು ತಕ್ಷಣ ಎಳನೀರು ತರಿಸಿ ಕೆಂಕೆರೆ ಸತೀಶ್ ಅವರನ್ನು ಬಿಟ್ಟು ಉಳಿದವರ ಮನವೊಲಿಸಿ ಕುಡಿಸಿ ಉಪವಾಸ ಕೈ ಬಿಡಿಸುವಲ್ಲಿ ಯಶಸ್ವಿಯಾದರು.
ನಂತರ ಸತೀಶ್ ಅವರಿಗೂ ಸಹ ಉಪವಾಸ ಕೈ ಬಿಟ್ಟು ಅಹೋರಾತ್ರಿ ಧರಣಿ ಮುಂದುವರೆಸಲು ಪರಿಪರಿಯಾಗಿ ಕೇಳಿಕೊಳ್ಳಲಾಯಿತು. ಮುಖಂಡರೆ ಆರೋಗ್ಯ ಹಾಳುಮಾಡಿಕೊಂಡರೆ ಹೋರಾಟ ಕಟ್ಟುವವರಾರು. ನೀವು ಆರೋಗ್ಯದಿಂದಿದ್ದರೆ ಇಂತಹ ನೂರಾರು ಹೋರಾಟ ಮಾಡಬಹುದು ಎಂದು ಅನೇಕ ಸಲಹೆ ನೀಡಿದರಾದರೂ ನ್ಯಾಯ ಸಿಗುವವರೆವಿಗೂ ಅನ್ನನೀರು ಸೇವಿಸುವುದಿಲ್ಲ ಎಂದು ಸತೀಶ್ ಪಟ್ಟು ಹಿಡಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ