ಕೊಬ್ಬರಿ ಬೆಂಬಲ ಬೆಲೆಗೆ ಒತ್ತಾಯಿಸಿ ಮುಂದುವರೆದ ಧರಣಿ ಸತ್ಯಾಗ್ರಹ
ಹುಳಿಯಾರು: ಕೊಬ್ಬರಿ ಬೆಂಬಲ ಬೆಲೆಗೆ ಒತ್ತಾಯಿಸಿ ರಾಜ್ಯ ರೈತಸಂಘನಡೆಸುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ವಿವಿಧ ಸಂಘಟನೆಗಳು ಕೈಜೋಡಿಸುವ ಮೂಲಕ ದಿನದಿಂದ ದಿನಕ್ಕೆ ತೀವ್ರತೆ ಪಡೆಯುತ್ತಿದ್ದು ತಾಲ್ಲೂಕು ವಕೀಲರ ಸಂಘ ಸಹ ಧರಣಿಗೆ ಬೆಂಬಲ ಸೂಚಿಸಿ ಧರಣಿಯಲ್ಲಿ ಪಾಲ್ಗೊಂಡಿತ್ತು.
ವಕೀಲ ಬಿ.ಕೆ.ಸದಾಶಿವು ಮಾತನಾಡಿ ರಾಜ್ಯ ಸರ್ಕಾರ ರೈತರಿಗಾಗಿ ಆವರ್ತನಿಧಿ ಸ್ಥಾಪಿಸಬೇಕು. ರೈತರು ಬೆಳೆದ ಬೆಳೆಗಳಿಗೆ ಬೆಲೆಯಿಲ್ಲದ ಪರಿಸ್ಥಿತಿಯಲ್ಲಿ ಬೆಂಬಲ ಬೆಲೆಯಲ್ಲಿ ಕೊಂಡು ರೈತರಿಗೆ ನೆರವಾಗಬೇಕು. ಆದರೆ ಸ್ವಾತಂತ್ರ್ಯ ನಂತರ ಅಧಿಕಾರಕ್ಕೆ ಬಂದ ಯಾವುದೇ ರಾಜ್ಯ ಸರ್ಕಾರಗಳು ಆವರ್ತನಿಧಿ ಸ್ಥಾಪಿಸುವ ಗೋಜಿಗೆ ಹೋಗಲಿಲ್ಲ ಎಂದು ದೂರಿದರು.
ಕೊಬ್ಬರಿಗೆ ಬೆಲೆ ಹೆಚ್ಚಳಕ್ಕೆ ಕಳೆದ ೧೫ ದಿವಸಗಳಿಂದಲೂ ಆಹೋರಾತ್ರಿ ಧರಣಿ ಸತ್ಯಾಗ್ರಹ ನಡೆಯುತ್ತಿದ್ದರೂ ರೈತರ ಸಮಸ್ಯೆ ಏನೆಂದು ವಿಚಾರಿಸದ ಸರ್ಕಾರ ರೈತರ ಉಪವಾಸ ಸತ್ಯಾಗ್ರಹಕ್ಕೆ ಬೆದರಿ ಎಲ್ಲೋ ಕೂತು ಕೇಂದ್ರಸರ್ಕಾರದ ಬೆಂಬಲ ಬೆಲೆಗೆ ಒಂದು ಸಾವಿರ ಪ್ರೋತ್ಸಾಹ ಧನ ಘೋಷಿಸಿ ನಾಫೆಡ್ ಕೇಂದ್ರ ತೆರಸಿದೆ. ರೈತರು ಮಾತ್ರ ಸರ್ಕಾರ ನೀಡಲಿರುವ ಸಾವಿರ ರೂ. ಸಾಕಾಗುತ್ತಿಲ್ಲ ಎಂದು ನಾಫೆಡ್ ನತ್ತ ಮುಖ ಹಾಕದೆ ಧರಣಿ ಮುಂದುವರಿಸಿರುವುದು ಸರ್ಕಾರಕ್ಕೆ ಮುಖಭಂಗವಾಗಿದೆ.ಸರ್ಕಾರ ಈಗಲಾದರೂ ಎಚ್ಚೆತ್ತು ರೈತರ ಸಮಸ್ಯೆ ಆಲಿಸಿ ಕನಿಷ್ಟ ಹತ್ತು ಸಾವಿರ ರೂಪಾಯಿ ನೀಡಿ ಕೊಬ್ಬರಿಕೊಳ್ಳಲು ಮುಂದಾಗಬೇಕೆಂದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಸೋಮಶೇಖರ್, ಉಪಾಧ್ಯಕ್ಷ ಕೆ.ಎಂ.ರಾಜಶೇಖರ್, ಮಾಜಿ ಅಧ್ಯಕ್ಷರಾದ ಆರ್.ಕರಿಯಣ್ಣ, ಕೆ.ಸಿ.ವಿಶ್ವನಾಥ್ ಇತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ