ಹುಳಿಯಾರು:ಕನ್ನಡ ಕಟ್ಟುವವರು ಕೇವಲ ಸಾಹಿತಿಗಳಷ್ಟೆ ಅಲ್ಲ. ಬೀದಿಗಳಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳುವಂತಹ ಜನ ಕೂಡ ಕನ್ನಡಕ್ಕೆ ಹೋರಾಟ ಮಾಡುತ್ತಿದ್ದಾರೆ.ಕನ್ನಡವನ್ನು,ಕನ್ನಡ ನಾಡನ್ನು ಕೇವಲ ಭಾಷೆಯನ್ನಾಗಿ ನೋಡಬಾರದು.ಇದು ಒಂದು ಬದುಕು.ಕನ್ನಡದ ಬದುಕು ಕೃಷಿಯ ಬದುಕು,ಗಾಳಿಯ ಬದುಕು,ನೀರಿನ ಬದುಕು.ಸಾಹಿತಿಗಳು,ರಂಗಭೂಮಿಯವರು, ಸಿನಿಮಾದವರಷ್ಟೆ ಕನ್ನಡದ ಬಗ್ಗೆ ಕಾಳಜಿಯಿರುವವರು ಎಂದಲ್ಲ .ಪ್ರಾಮಾಣಿಕವಾಗಿ ಎಲ್ಲರು ಅವರವರ ವೃತ್ತಿಯನ್ನು ನಿಭಾಯಿಸಿದರೆ ಅದು ಕನ್ನಡ ನಾಡಿಗೆ ಕೊಡುವ ಕೊಡುಗೆ ಎಂದು ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ತಿಳಿಸಿದರು.
ಹುಳಿಯಾರಿನ ಕರ್ನಾಟಕ ರಕ್ಷಣಾವೇದಿಕೆವತಿಯಿಂದ ಮಂಗಳವಾರದಂದು ಆಚರಿಸಲಾದ ಕನ್ನಡರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕನ್ನಡ ಎಂಬುದು ಕೇವಲ ಭಾಷೆಯಲ್ಲ.ಅದು ನೆಲ ಜಲಕ್ಕೆ ಸಂಬಂಧಿಸಿದ ವಿಚಾರ.ನಾವು ಕೇವಲ ಭಾಷೆಗೆ ಅಧ್ಯತೆ ಕೊಡುತ್ತಿದ್ದು ಭಾಷೆ ಎನ್ನುವುದು ಕೇವಲ ಸಂಪರ್ಕಕ್ಕೆ ಬೇಕಾಗಿರುವ ವಿನಿಮಯ ಸಾಧನವಷ್ಟೆ.ಇಂಗ್ಲೀಷನ್ನು ಕೂಡ ಜಗತ್ತನ್ನು ಅರಿಯುವ ಭಾಷೆಯನ್ನಾಗಿ ನೋಡಬೇಕೆಂದರು.ಹಳ್ಳಿಯಲ್ಲಿ ಮಾತ್ರ ಕನ್ನಡ ತೇರನ್ನೆಳೆಯಿರಿ ಎನ್ನುವ ಜನ ನಗರದದಲ್ಲಿ ಇಂಗ್ಲಿಷ್ ಭಾಷೆಗೆ ಅಡಿಯಾಳಾಗಿ ವರ್ತಿಸುತ್ತಾ ಕನ್ನಡವನ್ನು ಎರಡನೇ ಸ್ಥಾನಕ್ಕೆ ತಳ್ಳಿರುವುದು ಸರಿಯಲ್ಲ ಎಂದರು.
ಕುವೆಂಪು ,ಬೇಂದ್ರೆ ಹೆಸರು ಹೇಳುತ್ತಾ ಕನ್ನಡ ಬಾವುಟ ಹಾರಿಸುತ್ತಾ ,ಜಯಘೋಷಗಳನ್ನು ಕೂಗಿದರೆ ಪ್ರಯೋಜನವಿಲ್ಲ. ಅವರ ಹಾಡುಗಳನ್ನು ಕಲಿಯಬೇಕು.ಅವರ ಸಾಹಿತ್ಯವನ್ನು ಓದಬೇಕು. ಕನ್ನಡ ಭಾಷೆಯ ಏಳಿಗೆಗಾಗಿ, ಉಳಿವಿಗಾಗಿ ಕನ್ನಡ ಪತ್ರಿಕೆಗಳನ್ನು,ಪುಸ್ತಕಗಳನ್ನು ಕೊಂಡು ಓದುವುದನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕೆಂದರು.ಓದುವ ಸಂಸ್ಕೃತಿಯನ್ನು ದೊಡ್ಡಪ್ರಮಾಣದಲ್ಲಿ ಬೆಳಸಿಕೊಳ್ಳಬೇಕು.ಹಾಗಾದಾಗ ಮಾತ್ರ ಕನ್ನಡ ಕಟ್ಟುವ ಕೆಲಸವಾಗುತ್ತದೆ ಎಂದರು.
ಇಂಗ್ಲೀಷ್ ಭಾಷೆಯ ವ್ಯಾಮೋಹ ಬಿಟ್ಟು ನಮ್ಮ ಮಾತೃ ಭಾಷೆ ಕನ್ನಡ ನಶಿಸದ ರೀತಿಯಲ್ಲಿ ಕಾಪಾಡಿಕೊಳ್ಳವ ಮೂಲಕ ಪ್ರತಿಯೊಬ್ಬ ಕನ್ನಡಿಗರು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಂತ ಕಾರ್ಯವನ್ನು ಮಾಡಬೇಕಿದೆ.ಕನ್ನಡದ ಬಗೆಗಿನ ಕಾಳಜಿವಹಿಸಿ ಕನ್ನಡ ಉಳಿಸಿ ಬೆಳಸುವ ಕಾರ್ಯವನ್ನು ಮಾಡುತ್ತಿರುವ ಕರವೇಯಂತಹ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದರು.
ಸಮಾರಂಭದಲ್ಲಿ ಕರವೇ ಅಧ್ಯಕ್ಷ ಕೋಳಿ ಶ್ರೀನಿವಾಸ್,ಜಯಕನಾಟಕದ ಮೋಹನ್ ಕುಮಾರ್, ಪದಾಧಿಕಾರಿಗಳಾದ ಮೆಡಿಕಲ್ ಚನ್ನಬಸವಯ್ಯ,ಬಾಳೆಕಾಯಿ ಲಕ್ಷ್ಮೀಕಾಂತ್, ಕಲಾವಿದ ಗೌಡಿ,ರಂಗಸ್ವಾಮಿ,ಕುಮಾರ್,ಚನ್ನಕೇಶವ ಮಂಜುನಾಥ್, ಅಂಜನಕುಮಾರ್, ಮುರಳಿ, ರಘು, ಸಂತೋಷ್, ಪರಪ್ಪ ಮುಂತಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ