ಹುಳಿಯಾರು:ಉದ್ದೇಶಿತ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಹಂದನಕೆರೆ ಮತ್ತು ದೊಡ್ಡಎಣ್ಣೆಗೆರೆ ಪಂಚಾಯಿತಿಯ ಕೆರೆಗಳನ್ನು ತುಂಬಿಸುವ ಯೋಜನೆ ಕೈ ಬಿಟ್ಟಿದ್ದು ಸದರಿ ಭಾಗಕ್ಕೂ ನೀರನ್ನು ಹರಿಸುವಂತೆ ಒತ್ತಾಯಿಸಲು ಹಾಗೂ ಬರಪೀಡಿತವಾದ ಈ ಭಾಗದಲ್ಲಿ ಗೋಶಾಲೆ ಹಾಗೂ ಗಂಜಿಕೇಂದ್ರ ಆರಂಭಿಸಲು ಆಗ್ರಹಿಸಿ ನ.೧೪ರಂದು ಹುಳಿಯಾರು ಸಮೀಪದ ದೊಡ್ಡಎಣ್ಣೆಗೆರೆ ಸರ್ಕಲ್‌ನಲ್ಲಿ ಬೃಹತ್ ಪ್ರತಿಭಟನೆ ಹಾಗೂ ರಾಷ್ಟ್ರೀಯ ಹೆದ್ದಾರಿ ತಡೆ ಹಮ್ಮಿಕೊಳ್ಳಲಾಗಿದೆ.
ಸದ್ಯ ಭದ್ರಾ ಮೇಲ್ದಂಡೆ ಯೋಜನೆ ಹೊಸದುರ್ಗ ತಾಲ್ಲೂಕಿನ ಬೆಲಗೂರು ಮಾರ್ಗವಾಗಿ, ಮೈಲಾರಪುರ ಪಕ್ಕ ಸೂಚಿಕಲ್ಲಿನಿಂದ ದಳವಾಯಿಕಟ್ಟೆ ಮೂಲಕ ಹೆಗ್ಗೆರೆ ಅಲ್ಲಿಂದ ಮೋಟಿಹಳ್ಳಿ ಮೂಲಕ ತಾಲ್ಲೂಕಿನ ಹುಳಿಯಾರು, ಚಿಕ್ಕಬಿದರೆ ಮೂಲಕ ತಿಮ್ಮನಹಳ್ಳಿಯಿಂದ ಶಿರಾ ತಾಲ್ಲೂಕಿಗೆ ಹೋಗಲಿದೆ.ಉದ್ದೇಶಿತ ಯೋಜನೆಯಲ್ಲಿ ನೀರು ಹಾಯುವ ಮಾರ್ಗದಲ್ಲೇ ಸಿಗುವ ಹಂದನಕೆರೆ ಮತ್ತು ದೊಡ್ಡೆಣ್ಣೆಗೆರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು ತುಂಬಿಸುವ ಯೋಜನೆ ಕೈ ಬಿಟ್ಟಿದ್ದಾರೆ. ಈಗಾಗಲೇ ಗಡಿಭಾಗದ ಈ ಗ್ರಾಮಗಳು ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ನೀರಾವರಿ ಸೌಲಭ್ಯವಿಲ್ಲದೆ ಅಂತರ್ಜಲ ಕುಸಿದಿದೆ. ಈ ಭಾಗದ ಎಲ್ಲಾ ಕೆರೆಗಳು ಬತ್ತಿ ಹೋಗಿದ್ದು ಜಾನುವಾರು, ಪ್ರಾಣಿ-ಪಕ್ಷಿಗಳು ಸಾವನ್ನಪ್ಪುತ್ತಿವೆ.
ಈ ಬಗ್ಗೆ ಸರ್ಕಾರದ ಗಮನ ಸೆಳೆದು ಭದ್ರಾ ಮೇಲ್ದಂಡೆ ನೀರನ್ನು ಈ ಭಾಗಕ್ಕೂ ಹರಿಸುವಂತೆ ಹಾಗೂ ದೊಡ್ಡೆಣ್ಣೆಗೆರೆ, ಹಂದನಕೆರೆ ಭಾಗಕ್ಕೆ ಶೀಘ್ರವೇ ಗೋಶಾಲೆ ತೆರೆಯಲು ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.ದೊಡ್ಡೆಣ್ಣೆಗೆರೆ ಹಾಗೂ ಹಂದನಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಾರ್ವಜನಿಕರು, ರೈತರು ಅಂದು ಬೆಳಗ್ಗೆ ೮.೩೦ಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಹಾಗೂ ರೈತರು ಬರುವಾಗ ತಮ್ಮ ದನಕರು ಎತ್ತಿನ ಗಾಡಿಯೊಂದಿಗೆ ಪ್ರತಿಭಟನಾ ಸ್ಥಳಕ್ಕೆ ಬರಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ