ಹುಳಿಯಾರು: ನವಂಬರ್ ೧ ಬಂತೆಂದರೆ ಈ ಅಂಗಡಿಯಲ್ಲಿ ಹಬ್ಬದ ಸಡಗರ. ಅಂದು ಪಟ್ಟಣದಲ್ಲಿ ಕನ್ನಡಪರ ಸಂಘಟನೆಗಳು, ಇನ್ನಿತರ ಸಂಸ್ಥೆಗಳು ರಾಜ್ಯೋತ್ಸವ ಆಚರಿಸಲಿ ಬಿಡಲಿ ಈತನ ಟೀ ಅಂಗಡಿಯ ಮುಂದೆ ಧ್ವಜಾರೋಹಣ ಮಾತ್ರ ಕಡ್ಡಾಯವಾಗಿ ನಡೆದು ತಾಯಿ ಭುವನೇಶ್ವರಿಗೆ ಪೂಜೆ ಸಲ್ಲುತ್ತದೆ. ಹಾಗಂತ ಇದು ಹತ್ತಾರು ಜನ ಸೇರಿ ಮಾಡುವ ಸಮಾರಂಭವಲ್ಲ ಕೇವಲ ಬೋಂಡಾ,ಟೀ ಅಂಗಡಿ ಇಟ್ಟಿರುವ ಪರಪ್ಪ ಒಬ್ಬನೇ ಆಚರಿಸುವ ರಾಜ್ಯೋತ್ಸವ.
ಹೌದು, ಪಟ್ಟಣದ ರಾಜ್ ಕುಮಾರ್ ರಸ್ತೆಯ ಕರವೇ ವೃತ್ತದಲ್ಲಿನ ಟೀ ಅಂಗಡಿಯ ಪರಪ್ಪ ಕಳೆದ 1೩ ವರ್ಷದಿಂದ ತಪ್ಪದೇ ಕನ್ನಡರಾಜ್ಯೋತ್ಸವವನ್ನು ಆಚರಿಸಿಕೊಂಡು ಬರುವ ಮೂಲಕ ತನ್ನ ಕನ್ನಡಾಭಿಮಾನ ಮೆರೆಯುತ್ತಿದ್ದಾರೆ.
ಪರಪ್ಪನಿಗೂ ಕನ್ನಡರಾಜ್ಯೋತ್ಸವಕ್ಕೂ ಅದೇಗೆ ನಂಟು ಕೂಡಿತೋ ಗೊತ್ತಿಲ್ಲ.ನವಂಬರ್ ೧ ರಂದು ಹೆಚ್ಚಿನವರು ರಾಜ್ಯೋತ್ಸವ ಆಚರಿಸಲು ಮುಂದಾಗದ ಕಾರಣ ನವಂಬರ್ ೧ ರಂದು ರಾಜ್ಯೋತ್ಸವ ಆಚರಿಸಲು ಮುಂದಾದೆ ಎನ್ನುತ್ತಾನೆ. ಡಾ||ರಾಜ್, ವಿಷ್ಣುವರ್ಧನ್,ಶಂಕರ್ ನಾಗ್,ಕುವೆಂಪು ಸೇರಿದಂತೆ ನಾಡುನುಡಿಗೆ ಶ್ರಮಿಸಿದ ಕನ್ನಡದ ಕಟ್ಟಾಳುಗಳ ಭಾವಚಿತ್ರ ಹಾಗೂ ಅವರು ಅಭಿನಯಿಸಿದ ಪೌರಾಣಿಕ ಪಾತ್ರಗಳ ಚಿತ್ರಗಳನ್ನು ಅಂಗಡಿ ತುಂಬ ಪ್ರದರ್ಶಿಸುವ ಈತ ಸ್ವಯಂಪ್ರೇರಣೆಯಿಂದ ಚಿಕ್ಕದಾಗಿ ಆಚರಿಸುತ್ತಾ ಬಂದ ರಾಜ್ಯೋತ್ಸವ ಇದೀಗ ಅದ್ದೂರಿಯಾಗಿ ನಡೆಯುವ ಮಟ್ಟಕ್ಕೆ ತಲುಪಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ತನ್ನ ಅಂಗಡಿಯನ್ನು ಹೂ, ಬಾಳೆಕಂದು, ಮಾವಿನ ತಳಿರಿಂದ ಸಿಂಗರಿಸಿ ತಾಯಿ ಭುವನೇಶ್ವರಿ ಪೋಟೋಕ್ಕೆ ಪೂಜಿ ಸಲ್ಲಿಸಿ ಕನ್ನಡ ನಾಡುನುಡಿಗೆ ಸಂಬಂಧಿಸಿದ ಹಾಡುಗಳನ್ನು ಹಾಕಿ, ಅಂಗಡಿಯ ಮುಂಭಾಗದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ನಂತರ ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಕನ್ನಡ ತಾಯಿಗೆ ನಮನ ಸಲ್ಲಿಸಿ ಆಚರಿಸಿದರು.
ಈ ಕಾರ್ಯಕ್ರಮದಲ್ಲಿ ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ, ಕಲಾವಿದ ಗೌಡಿ,ಉಮೇಶ್, ಅರ್ಚಕ ರಾಜಣ್ಣ, ಪರಮೇಶ್, ಚಿರುಮುರಿ ಶ್ರೀನಿವಾಸ್, ಚನ್ನಕೇಶವ, ಸಜ್ಜಾದ್ ಇತರರಿದ್ದರು.
ಒಟ್ಟಾರೆ ಈತನ ಆಚರಣೆ ನೋಡುಗರನ್ನು ನಿಬ್ಬೆರಗಾಗುವಂತೆ ಮಾಡಿದ್ದು, ಈತ ತನ್ನ ಅಂಗಡಿಗೆ ಮಾಡಿದ್ದ ಅಲಂಕಾರ, ನಡೆಸಿದ ಧ್ವಜಾರೋಹಣ, ಹಾಕಿದ್ದ ಕನ್ನಡದ ಹಾಡುಗಳಿಂದಾಗಿ ರಸ್ತೆಯಲ್ಲಿ ಹೋಗುವರೆಲ್ಲಾ ಒಮ್ಮೆ ಇಲ್ಲಿನಿಂತು ನೋಡಿ ಮುಂದೆ ಹೋಗುವಂತೆ ಮಾಡಿದ್ದವು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ