ದೊಡ್ಡ ಹೋಬಳಿ ಕೇಂದ್ರವಾಗಿರುವ ಹುಳಿಯಾರು ವ್ಯಾಪ್ತಿಯಲ್ಲಿ ಸಾಕಷ್ಟು ಶಾಲೆಗಳಿದ್ದು, ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರೂ ಸಹ ಹೋಬಳಿ ಹಂತದ ಆಟೋಟಗಳನ್ನು ನಡೆಸಲು ಪಟ್ಟಣದಲ್ಲಿ ಸೂಕ್ತ ಕ್ರೀಡಾಂಗಣವಿಲ್ಲ . ಕ್ಷೇತ್ರದ ಜನಪ್ರತಿನಿಧಿಗಳಾಗಲಿ, ಶಿಕ್ಷಣ ಇಲಾಖೆಯವರಾಗಲಿ ಈ ಬಗ್ಗೆ ಗಮನಮಾಡಿ ಪಟ್ಟಣಕ್ಕೆ ಕ್ರೀಡಾಂಗಣ ಮಂಜೂರು ಮಾಡಿಕೊಡಿ ಎಂದು ವಾಸವಿ ಸಂಸ್ಥೆಯ ನಿರ್ದೇಶಕ ಎಲ್.ಆರ್.ಚಂದ್ರಶೇಖರ್ ಮನವಿ ಮಾಡಿದರು.
ಹುಳಿಯಾರಿನ ಟಿ.ಆರ್.ಎಸ್,ಆರ್ ಶಾಲಾವತಿಯಿಂದ ವಾಸವಿ ಶಾಲಾ ಆವರಣದಲ್ಲಿ ಶುಕ್ರವಾರದಂದು ಆಯೋಜಿಸಿದ್ದ ಹೋಬಳಿ ಮಟ್ಟದ ಪ್ರೌಢಶಾಲೆಗಳ 2014-15 ನೇ ಸಾಲಿನ " ಎ" ವಿಭಾಗದ ಕ್ರೀಡಾಕೂಟದಲ್ಲಿ ಕ್ರೀಡಾಜ್ಯೋತಿ ಸ್ವೀಕರಿಸಿ ಅವರು ಮಾತನಾಡಿದರು.
ಹುಳಿಯಾರಿನ ಟಿ.ಆರ್.ಎಸ್,ಆರ್ ಶಾಲಾವತಿಯಿಂದ ವಾಸವಿ ಶಾಲಾ ಆವರಣದಲ್ಲಿ ನಡೆದ ಹೋಬಳಿ ಮಟ್ಟದ ಪ್ರೌಢಶಾಲೆಗಳ " ಎ" ವಿಭಾಗದ ಕ್ರೀಡಾಕೂಟದ ಉದ್ಘಾಟನೆಯನ್ನು ಕಾರ್ಯದರ್ಶಿ ರಾಮದಾಸ್ ನೆರವೇರಿಸಿದರು. |
ಹೋಬಳಿ ಎಲ್ಲಾ ಶಾಲೆಗಳ ಮಕ್ಕಳೂ ಸಹ ಪ್ರತಿಭಾವಂತರಾಗಿದ್ದಾರೆ. ಆದರೆ ಕೆಲ ಶಾಲೆಗಳಲ್ಲಿ ಆಟದ ಮೈದಾನವಿಲ್ಲದೆ ಆ ಶಾಲೆಯ ಮಕ್ಕಳು ಕ್ರೀಡಾಚಟುವಟಿಕೆಯಲ್ಲಿ ಪಾಲ್ಗೊಳ್ಳದೆ ಹಿಂದೆಯೇ ಉಳಿಯುವಂತಾಗಿದೆ ಎಂದರು. ಹುಳಿಯಾರು ಹೋಬಳಿಯ ಹಲವಾರು ಕ್ರೀಡಾಪಟುಗಳು ತಾಲ್ಲೂಕು,ಜಿಲ್ಲಾ ಹಾಗೂ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಅಲ್ಲಿಯೂ ಸಹ ಬಹುಮಾನಗಳಿಸಿದ ನಿದರ್ಶನಗಳಿವೆ ಎಂದರು. ವಿದ್ಯಾರ್ಥಿಗಳು ಸಿಂಹಾವಲೋಕನದಲ್ಲಿ ಸಾಗಬೇಕಿದ್ದು ನಾವು ಹಿಂದೆ ನಡೆದು ಬಂದ ಹಾದಿಯನ್ನು ಮರೆಯದೆ ಸಾಗಬೇಕು ಹಾಗೂ ಆಟಗಳನ್ನು ಪ್ರಾಮಾಣಿಕವಾಗಿ ಆಡಬೇಕಿದೆ ಎಂದರಲ್ಲದೆ ಪ್ರೇಕ್ಷಕರು ಕ್ರೀಡಾಪಟುಗಳನ್ನು ಹುರಿದುಂಬಿಸುವ ಕಾರ್ಯ ಮಾಡಬೇಕೆ ಹೊರತು ಅವರಲ್ಲಿ ಮತ್ತೊಬ್ಬರ ಮೇಲೆ ದ್ವೇಷ ಮೂಡುವಂತೆ ಮಾಡಬೇಡಿ ಎಂದು ಕಿವಿಮಾತು ಹೇಳಿದರು.
ಪ್ರತಿಜ್ಞಾನವಿಧಿ ಬೋಧಿಸಿದ ದೈಹಿಕ ಶಿಕ್ಷಣ ಸಂಯೋಜಕ ನರಸಿಂಹಮೂರ್ತಿ ಮಾತನಾಡಿ, ಕ್ರೀಡಾಕೂಟವೆಂಬುದು ಪರೀಕ್ಷೆಯಿದ್ದಂತೆ, ಪರೀಕ್ಷೆಯಲ್ಲಿ ನಕಲು ಮಾಡಿದರೆ ಯಾವರೀತಿ ಶಿಕ್ಷೆಯಿದೆ ಅದೇರಿತಿ ಕ್ರೀಡೆಯಲ್ಲಿಯೂ ಸಹ ತಪ್ಪೆಸಗುವವರಿಗೆ ತಕ್ಕ ಶಿಕ್ಷೆಲಭಿಸುತ್ತದೆ ಎಂದರು. ಮಕ್ಕಳನ್ನು ಏಕಾಗ್ರತೆಯತ್ತ ಕೊಂಡೈಯುವ ಉತ್ತಮ ಮಾರ್ಗ ಕ್ರೀಡೆಯಾಗಿದ್ದು, ಶಾಲಾಶಿಕ್ಷಕರು ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಒಂದಲ್ಲ ಒಂದು ಆಟದಲ್ಲಿ ತೊಡಗಿಕೊಳ್ಳುವಂತೆ ಉತ್ತೇಜಿಸಬೇಕು ಆಗ ವಿದ್ಯಾರ್ಥಿಗಳಲ್ಲಿ ಉತ್ತಮ ಕಲಿಕೆಯುಂಟಾಗುತ್ತದೆ ಎಂದರು.
ಹುಳಿಯಾರಿನ ವಾಸವಿಶಾಲಾವರಣದಲ್ಲಿ ಸೋನೆಮಳೆಯಲ್ಲೇ ಆರಂಭವಾದ ಕ್ರೀಡಾಕೂಟದಲ್ಲಿ ಸಿಪಿಓ ನರಸಿಂಹಮೂರ್ತಿ ಪ್ರತಿಜ್ಞಾನವಿಧಿ ಬೋಧಿಸಿದರು. |
ಕ್ರೀಡಾಕೂಟದ ಅಧ್ಯಕ್ಷತೆವಹಿಸಿದ್ದ ವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ.ಆರ್.ಲಕ್ಷ್ಮಿಕಾಂತ್ ಮಾತನಾಡಿ ಆಟದಲ್ಲಿ ಸೋಲುಗೆಲವು ಸಾಮಾನ್ಯವಾಗಿದ್ದು ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ, ಸಂತೋಷಯುತವಾಗಿ ಆಟವಾಡಿ ಎಂದರು. ಸಂಸ್ಥೆಯ ಕಾರ್ಯದರ್ಶಿ ರಾಮನಾಥ್ ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ಜ್ಯೋತಿನಾಗರಾಜು,ಮುಖ್ಯಶಿಕ್ಷಕರಾದ ಎಂ.ವಿ.ರಮೇಶ್, ಮಹೇಶ್, ಸ್ಕೌಟ್ ಗೈಡ್ಸ್ ನ ಗಂಗಾಧರ್ ಉಪಸ್ಥಿತರಿದ್ದು ಬಸವರಾಜು ನಿರೂಪಿಸಿ,ನಟರಾಜ್ ವಂದಿಸಿದರು.ಸೋನೆಮಳೆಯಲ್ಲೇ ಪ್ರಾರಂಭವಾದ ಕ್ರೀಡಾಕೂಟದಲ್ಲಿ ಹೋಬಳಿಯ ಶಾಲಾಮಕ್ಕಳು ಉತ್ಸಾಹದಿಂದ ಪಾಲ್ಗೊಳ್ಳುವ ಆಟೋಟಗಳನ್ನು ಆಡಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ