ಹುಳಿಯಾರು ಸಮೀಪದ ಹಂದನಕೆರೆ ಪೊಲಿಸ್ ಠಾಣಾ ವ್ಯಾಪ್ತಿಯ ಜನರ ಸಮಸ್ಯೆಗಳ ಕುರಿತಂತೆ ಜನಸಂಪರ್ಕ ಸಭೆ ತಿಪಟೂರು ಉಪವಿಭಾಗಾಧಿಕಾರಿ ಕಾರ್ತೀಕ್ ರೆಡ್ಡಿ ಅವರ ನೇತೃತ್ವದಲ್ಲಿ ಶನಿವಾರದಂದು ಠಾಣೆಯಲ್ಲಿ ನಡೆಯಿತು.
ಹುಳಿಯಾರು ಸಮೀಪದ ಹಂದನಕೆರೆ ಠಾಣೆಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಎಎಸ್ಪಿ ಕಾರ್ತೀಕ್ ರೆಡ್ಡಿ ಮಾತನಾಡಿದರು. |
ಸಭೆಯಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರು ಹಂದನಕೆರೆ ಭಾಗಕ್ಕೆ ಸೂಕ್ತ ಬಸ್ ಸಂಚಾರದ ವ್ಯವಸ್ಥೆ, ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ 108 ಅಂಬ್ಯುಲೆನ್ಸ್ ಸೇವೆ ಕಲ್ಪಿಸುವಂತೆ ಹಾಗೂ ರಾತ್ರಿ ಪಾಳಯದ ಗಸ್ತಿಗೆ ಹೆಚ್ಚುವರಿ ಪೋಲಿಸ್ ಸಿಬ್ಬಂದಿಯನ್ನು ಹಾಕುವಂತೆ ಜೊತೆಗೆ ಇನ್ನಿತರ ಸಮಸ್ಯೆಗಳನ್ನು ಪ್ರಸ್ತಾಪಿಸಿದರು. ಉಪವಿಭಾಗಾಧಿಕಾರಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು. ಹಂದನಕೆರೆಯು ಜಿಲ್ಲೆಯ ಗಡಿಭಾಗವಾಗಿದ್ದು ಕೆಲ ಮೂಲಭೂತಸೌಕರ್ಯಗಳು ಸಮರ್ಪಕವಾಗಿ ಇಲ್ಲಿನ ಜನತೆಗೆ ದೊರೆಯುತ್ತಿಲ್ಲ ಈ ಬಗ್ಗೆ ತಮ್ಮ ಗಮನಕ್ಕೂ ಬಂದಿದೆ ಎಂದರು. ಈ ಭಾಗಕ್ಕೆ ಸೂಕ್ತ ಬಸ್ ಸಂಚಾರ ಕಲ್ಪಿಸುವಂತೆ ತಿಪಟೂರು ಡಿಪೋ ಮ್ಯಾನೇಜರ್ ಅವರಲ್ಲಿ ಮಾತನಾಡುವುದಾಗಿ ತಿಳಿಸಿದರಲ್ಲದೆ, ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ 108 ವಾಹನವನ್ನು ಶೀಘ್ರವೇ ಒದಗಿಸುವಂತೆ ತಾಲ್ಲೂಕು ಟಿಎಚ್ ಓ ಶಿವಕುಮಾರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ತಿಳಿಸಿದರು. ಹಂದನಕೆರೆ ಹೋಬಳಿ ಕೇಂದ್ರದ ಸುತ್ತಮುತ್ತ ಸಾಕಷ್ಟು ಹಳ್ಳಿಗಳಿದ್ದು ಯಾವುದೇ ರೀತಿಯ ಅಹಿತಕರಘಟನೆಗಳು ಘಟಿಸದಂತೆ ಕ್ರಮವಹಿಸುವನಿಟ್ಟಿನಲ್ಲಿ ರಾತ್ರಿ ಗಸ್ತಿಗಾಗಿ ಈಗಿರುವ ಸಿಬ್ಬಂದಿಯ ಜೊತೆಗೆ ಹೆಚ್ಚುವರಿಯಾಗಿ ಸಿಬ್ಬಂದಿಯನ್ನು ಹಾಕಿಕೊಡುವ ಭರವಸೆಯನ್ನು ನೀಡಿದರು.
ಹಂದನಕೆರೆ ಠಾಣೆಯ ಪಿಎಸೈ ಹೆಚ್.ವಿ.ಸುನಿಲ್ ಮಾತನಾಡಿ, ಯಾವುದೇ ರೀತಿಯ ಸಮಸ್ಯೆಗಳನ್ನು ತಮ್ಮತಮ್ಮಲೇ ಬಗೆಹರಿಸ್ಕೊಳ್ಳಲು ಹೋಗಿ ದೊಡ್ಡ ಸಮಸ್ಯೆಯನ್ನು ಸೃಷ್ಠಿಸುವ ಬದಲು ತಮ್ಮ ಏನೇ ಸಮಸ್ಯೆ, ದೂರುಗಳನ್ನು ಠಾಣೆಯ ಗಮನಕ್ಕೆ ತರುವ ಮೂಲಕ ಅದನ್ನು ಶಾಂತರೀತಿಯಲ್ಲಿ ಬಗೆಹರಿಸಿಕೊಳ್ಳಿ ಎಂದರು. ಕಾನೂನಿನ ಉಲ್ಲಂಘನೆಯಾಗುವಂತೆ ಯಾವುದೇ ಕಾರ್ಯಗಳಿಗೆ ಆಸ್ಪದಕೊಡದಂತೆ ಶಾಂತರೀತಿಯಲ್ಲಿ ಸಾಗುವಂತೆ ತಿಳಿಸಿದರು.
ಸಿಪಿಐ ಜಯಕುಮಾರ್ ಅಧ್ಯಕ್ಷತೆವಹಿಸಿದ್ದು, ತಾ.ಪಂ. ಸದಸ್ಯ ಶಿವರಾಜ್,ಗ್ರಾ.ಪಂ.ಅಧ್ಯಕ್ಷೆ ಮಂಜಮ್ಮ ಸೇರಿದಂತೆ ಹೋಬಳಿಯ ಮುಖಂಡರು, ಠಾಣೆಯ ಸಿಬ್ಬಂದಿವರ್ಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ