ಇಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ಆಸ್ಪತ್ರೆಗೆ ಬರುವ ರೋಗಿಗಳು ನಿತ್ಯ ಪರದಾಡುವಂತ ಸ್ಥಿತಿ ಇನ್ನೂ ಸಹ ಮುಂದುವರೆಯುತ್ತಲೇ ಸಾಗಿದ್ದು, ಭಾನುವಾರದಂದು ಆಸ್ಪತ್ರೆಗೆ ಬಂದಿದ್ದದವರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ಯಾವೊಬ್ಬ ವೈದ್ಯರಿಲ್ಲದ್ದನ್ನು ಕಂಡ ಗ್ರಾ.ಪಂ. ಸದಸ್ಯರಾದ ಅಶೋಕ್ ಬಾಬು ಹಾಗೂ ಹೇಮಂತ್ ಅಕ್ರೋಶಿತರಾಗಿ ಅಸ್ಪತ್ರೆಯ ಮುಖ್ಯದ್ವಾರದಲ್ಲಿ ಕುಳಿತು ಪ್ರತಿಭಟಿಸಿದರು.
ವೈದ್ಯರಿಲ್ಲದ ಹುಳಿಯಾರು ಆಸ್ಪತ್ರೆಯ ಮುಂದೆ ಗ್ರಾ.ಪಂ.ಸದಸ್ಯರು ಪ್ರತಿಭಟಿಸಿದರು. |
ಇಂದು ಬೆಳಿಗ್ಗೆ ಗಾಯಾಳು ಒಬ್ಬರಿಗೆ ತುರ್ತಾಗಿ ಚಿಕಿತ್ಸೆ ಕೊಡಿಸಲು ಕರೆದುಕೊಂಡು ಬಂದಾಗ ಆಸ್ಪತ್ರೆಯಲ್ಲಿ ವೈದ್ಯರ ಗೈರಿನಿಂದಾಗಿ ಚಿಕಿತ್ಸೆ ಸಿಗದೆ ಪರದಾಡುವಂತಾಯಿತು. ವೈದ್ಯರಿಲ್ಲವೆಂದು ಸಿಬ್ಬಂದಿಯವರೂ ಕೂಡ ಬಾರದೆ ಇದ್ದುದ್ದು ಪ್ರತಿಭಟನೆಗೆ ಕಾರಣವಾಯಿತು.
ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾ.ಪಂ.ಸದಸ್ಯ ಅಶೋಕ್ ಬಾಬು ಹುಳಿಯಾರು ಆಸ್ಪತ್ರೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಅದರಲ್ಲಿ ಪ್ರಮುಖ ಸಮಸ್ಯೆ ಎಂದರೆ ಖಾಯಂ ವೈದ್ಯರಿಲ್ಲದೆ ಇರುವುದು, ಈ ಬಗ್ಗೆ ಟಿ.ಎಚ್.ಓ, ಡಿ.ಎಚ್.ಓ, ಶಾಸಕರು ಸೇರಿದಂತೆ ಅರೋಗ್ಯ ಮಂತ್ರಿಯಗಳ ವರೆಗೆ ಮನವಿ ಸಲ್ಲಿಸಿ, ಈ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವಂತೆ ಸಾಕಷ್ಟು ಪ್ರತಿಭಟನೆ ನಡೆಸಿ ಒತ್ತಾಯಿಸಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಇಂದಿಗೂ ಈ ಬಗ್ಗೆ ಚಕಾರವೆತ್ತದೆ ಸುಮ್ಮನಿದ್ದಾರೆ. ಇಲ್ಲಿ ಖಾಯಂ ವೈದ್ಯ ಮೊದಲೇ ಇಲ್ಲ ಅದರ ಜೊತೆಗೆ ಇರುವ ಗುತ್ತಿಗೆ ಆಧಾರದ ವೈದ್ಯರು ಹಬ್ಬದ ಹಿನ್ನಲೆಯಲ್ಲಿ ಆಸ್ಪತ್ರೆಗೆ ಬಾರದೆ ರಜೆ ಹಾಕಿಕೊಂಡು ಹಾಕಿಕೊಂಡು ಹೋಗಿದ್ದಾರೆ, ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗುತ್ತಿದೆ ಎಂದು ದೂರಿದರು.
ಹುಳಿಯಾರು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಮುಂದೇನು ಎಂದು ತೋಚದೆ ರೋಗಿಗಳು ಮುಖ್ಯದ್ವಾರದ ಮುಂದೆ ನಿಂತಿರುವುದು. |
ರಾತ್ರಿ ವೇಳೆ ಅಪಘಾತಗಳು ಉಂಟಾಗಿ ಆಸ್ಪತ್ರೆಯಲ್ಲಿಗೆ ಬಂದರೆ ಇಲ್ಲಿ ಪ್ರಥಮ ಚಿಕಿತ್ಸೆ ನೀಡಲು ಸಹ ಇಲ್ಲಿ ಸಿಬ್ಬಂದಿ ಇರುವುದಿಲ್ಲ , ಕೆಲ ಸಮಯ ಅನೇಕರು ಪ್ರಥಮ ಚಿಕಿತ್ಸೆ ದೊರೆಯದೆ ಮೃತಪಟ್ಟ ಘಟನೆಗಳು ಜರುಗಿದ್ದರು ಸಹ ಗಮನಹರಿಸಿಲ್ಲ. ನಿತ್ಯ ನೂರಾರು ಮಂದಿ ಈ ಆಸ್ಪತ್ರೆಗೆ ಬರುತ್ತಿದ್ದು , ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ಖಾಯಂ ವೈದ್ಯರು ಅತ್ಯವಶ್ಯಕವಾಗಿ ಬೇಕು. ಈಗಿರುವ ಗುತ್ತಿಗೆ ಅಧಾರದ ವೈದ್ಯರು ಮೂರುದಿನ ಈ ಆಸ್ಪತ್ರೆ ಮತ್ತೆ ಮೂರು ದಿನ ಬೇರೆ ಆಸ್ಪತ್ರೆಯಲ್ಲಿ ಸೇವೆ ಮಾಡುತ್ತಿದ್ದರೆ ಯಾವೊಬ್ಬ ರೋಗಿಗಳಿಗೂ ಸಹ ಸೂಕ್ತ ಚಿಕಿತ್ಸೆ ಸಿಗುವುದಿಲ್ಲ. ಇಂತಹ ಸಾಕಷ್ಟು ಸಮಸ್ಯೆಗಳಿಂದಾಗಿ ಜನ ಪ್ರಾಣ ತೆತ್ತುವಂತಾಗಿದೆ.ಇನ್ನಾದರೂ ಸಂಸದರಾಗಲಿ,ಶಾಸಕರಾಗಲಿ ಈ ಬಗ್ಗೆ ಸೂಕ್ತ ಗಮನಕೊಟ್ಟು ಶೀಘ್ರದಲ್ಲೇ ಖಾಯಂ ವೈದ್ಯರ ನೇಮಕ ಮಾಡುವಂತೆ ಹಾಗೂ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವಂತೆ ಗ್ರಾ.ಪಂ.ಸದಸ್ಯ ಹೇಮಂತ್ ಒತ್ತಾಯಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ