ಹುಳಿಯಾರು ಪಟ್ಟಣದಲ್ಲಿ ಹಾದು ಹೋಗಿರುವ ರಸ್ತೆಗಳೆಲ್ಲಾ ಗುಂಡಿಬಿದ್ದು ವಾಹನಗಳ ಸಂಚಾರ ದುಸ್ಥರವಾಗಿದೆ. ಪಟ್ಟಣದಿಂದ ಶಿರಾ ರಸ್ತೆ, ತಿಪಟೂರು ರಸ್ತೆ, ಹೊಸದುರ್ಗ ರಸ್ತೆ, ಪಂಚನಹಳ್ಳಿ ರಸ್ತೆಗಳೆಲ್ಲಾ ಗುಂಡಿಬಿದ್ದು ಅವ್ಯವಸ್ಥೆಯಾಗಿದ್ದು ನಿತ್ಯ ಸಂಚಾರಕ್ಕೆ ಕಿರಿಕಿಯುಂಟಾಗಿವೆ.
ಹುಳಿಯಾರು-ಹೊಸದುರ್ಗ ಮಾರ್ಗದಲ್ಲಿನ ಕೇಶವಾಪುರದ ಹತ್ತಿರ ರಸ್ತೆಯಲ್ಲಿ ಗುಂಡಿಬಿದ್ದಿರುವುದು. |
ಕೇಶವಾಪುರ ತಿರುವಿನಲ್ಲಿ , ಬಿ,ಎಚ್,ರಸ್ತೆ ಹಳೆ ಪೋಸ್ಟ್ ಅಫೀಸ್ ಮುಂಭಾಗದಲ್ಲಿ, ಎಪಿಎಂಸಿ ಮುಭಾಗದ, ಮೀಸೆ ರಂಗಪ್ಪನ ಅಂಗಡಿ ಮುಂಭಾಗ, ಗಾಂಧಿಪೇಟೆ ತಿರುವಿನಲ್ಲಿ, ಕೆಂಚಮ್ಮನ ತೋಪಿನ ಬಳಿ, ಮಂಜುನಾಥ ಸಾಮಿಲ್ ಮುಂಭಾಗದಲ್ಲಿರುವ ಪ್ರಾಣಕಂಟಕವಾಗಿರುವ ಗುಂಡಿಯಲ್ಲದೆ , ಯೂಸೂಫ್ ಖಾನ್ ಪೆಟ್ರೋಲ್ ಬಂಕ್ ಮುಂಭಾಗ, ಒಣಕಾಲುವೆ , ಎಪಿಎಂಸಿ ಹೊಟೆಲ್ ನ ಮುಂಭಾಗದ ಸೇತುವೆ ಮೇಲಿನ ದಿಣ್ಣೆ ಆಪಾಯಕ್ಕೆ ಬಾಯ್ತೆರೆದು ನಿಂತಿದ್ದು, ಸ್ವಲ್ಪ ಎಚ್ಚರ ತಪ್ಪಿದರೂ ಸಾಕು ಅನಾಹುತ ಕಟ್ಟಿಟ್ಟಬುತ್ತಿ ಎಂಬಂತಿದೆ.
ಈ ಗುಂಡಿಗಳು ವರ್ಷೊಂಭತ್ತು ಕಾಲವೂ ಇದ್ದೇಯಿದ್ದು ಪಿಡಬ್ಲ್ಯೂಡಿ ಇಲಾಖೆಯವರಾಗಲಿ ಸ್ಥಳೀಯ ಗ್ರಾ.ಪಂ.ನವರಾಗಲಿ ಕಡೆಗೆ ನಿತ್ಯ ಸಂಚರಿಸುವ ವಾಹನ ಸವಾರರೂ ಈ ಬಗ್ಗೆ ಗಮನಕೊಡದಿರುವುದು ಸೋಜಿಗದ ಸಂಗತಿಯಾಗಿದೆ. ರಸ್ತೆಗೆ ಹಾಕಿದ್ದ ಟಾರು ಸಂಪೂರ್ಣವಾಗಿ ಕಿತ್ತು ಹೋಗಿ ದಪ್ಪದಪ್ಪ ಜಲ್ಲಿಯಲ್ಲಾ ಮೇಲೆ ಬಂದಿರುವ ಜೊತೆಗೆ ದೊಡ್ಡ ಗುಂಡಿಗಳು ಬಿದ್ದು ದ್ವಿಚಕ್ರವಾಹನ ಸವಾರರಿಗೆ ಹೆಚ್ಚಿನ ತೊಂದರೆಯಾಗಿದೆ. ಆಗಾಗ್ಗೆ ಬೈಕ್ ಸವಾರರು ಆಯತಪ್ಪಿ ಬಿದ್ದು ಏಟು ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗುವುದು ಮಾಮೂಲಿಯಾಗಿದೆ.
ಹೊಸದುರ್ಗದಿಂದ ಬೆಂಗಳೂರು ಕಡೆ ಹಾಗೂ ಪಂಚನಹಳ್ಳಿ, ಅರಸೀಕೆರೆಯಿಂದ ಹುಳಿಯಾರಿಗೆ ನಿತ್ಯ ನೂರಾರು ಬಸ್, ಆಟೋ, ಲಾರಿಸೇರಿದಂತೆ ಇತರೆ ವಾಹನಗಳು ಬಹುಪ್ರಯಾಸದಿಂದ ತಿರುಗಾಡುತ್ತವೆಯಾದರೂ ಸಹ ಇದುವರೆಗೂ ಈ ಗುಂಡಿಗಳನ್ನು ಮುಚ್ಚಿ ಟಾರ್ ಹಾಕುವುದಾಗಲಿ ಅಥವಾ ಮಣ್ಣು ಹಾಕುವುದಕ್ಕೂ ಯಾರೊಬ್ಬರು ಮುಂದಾಗಿಲ್ಲವೆಂದು ಸ್ಥಳೀಯರು ದೂರುತ್ತಾರೆ. ಮಳೆಗಾಲದಲ್ಲಂತೂ ಹೆಚ್ಚು ತೊಂದರೆಯಾಗುತ್ತಿದ್ದು ಈ ಗುಂಡಿಗಳ ತುಂಬೆಲ್ಲಾ ನೀರು ತುಂಬಿಕೊಂಡು ರಸ್ತೆಯೇ ಕಾಣದಂತಾಗುತ್ತದೆ. ಈ ಗುಂಡಿಗಳಿಂದ ಅಪಾಯ ಕಟ್ಟಿಟ್ಟ ಬುತ್ತಿಯಾಗಿದ್ದು ಯಾವಾಗ ಯಾರು ಬಿದ್ದೇಳುತ್ತಾರೋ ಎಂಬ ಭಯದಿಂದ ಸಂಚರಿಸುವಂತ ಸ್ಥಿತಿ ಇದೆ.
ಕೇಶವಾಪುರ ಮಾರ್ಗ ತೀರ ಹದಗೆಟ್ಟಿದ್ದು ಈ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 234 ಹಾದು ಹೋಗಲಿದ್ದು ಆ ರಸ್ತೆಯ ಕಾಮಗಾರಿಗೆ ಚಾಲನೆ ದೊರೆತಿರುವ ಹಿನ್ನಲೆಯಿಂದ ಯಾರೂ ಸಹ ಇದರ ಬಗ್ಗೆ ಗಮನಕೊಡದೆ ಹೇಗೂ ಹೊಸ ರೋಡ್ ಆಗುತ್ತಿದೆಯಲ್ಲಾ ಆಗ ಎಲ್ಲಾ ಸರಿಯಾಗುತ್ತದೆ ಎಂಬ ಉದಾಸೀನತೆಯ ನಿಲುವಿನೊಂದಿದೆ ಇಲಾಖೆಯವರು ಸುಮ್ಮನಿದ್ದಾರೆಂದು ಇಲ್ಲಿ ನಿತ್ಯ ಸಂಚರಿಸುವ ಪ್ರಯಾಣಿಕರು ಆರೋಪಿಸುತ್ತಾರೆ. ರಾಷ್ಟ್ರೀಯ ಹೆದ್ದಾರಿ ಕಾರ್ಯ ಯಾವಾಗ ಇಲ್ಲಿಗೆ ಬರುತ್ತದೆಯೋ ಏನು ಎಂಬುದು ಇಲ್ಲಿ ಯಾರಿಗೂ ಸರಿಯಾಗಿ ತಿಳಿದಿಲ್ಲ , ಅದುವರೆವಿಗಾದರೂ ಈಗ ಬಿದ್ದಿರುವ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಿ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ. ಇನ್ನೂ ಮುಂದೆ ಇಲ್ಲಿ ಯಾವುದೇ ರೀತಿಯ ಅಪಘಾತಗಳು ಸಂಭವಿಸಿದಲ್ಲಿ ಪಿಡಬ್ಲೂಡಿ ಹಾಗೂ ಸ್ಥಳಿಯ ಗ್ರಾ.ಪಂ.ನವರೇ ಅದರ ಹೊಣೆ ಹೊರಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ