ವಿದ್ಯಾರ್ಥಿ ಜೀವನ ನಮ್ಮ ಮುಂದಿನ ಬದುಕಿಗೆ ಭದ್ರಬುನಾದಿಯಾಗಿದ್ದು, ಈ ಸಮಯದಲ್ಲಿ ಶಿಸ್ತು,ಸಂಯಮ,ಗುರಿಉದ್ದೇಶಗಳನ್ನು ಹೊಂದಿ ಅವುಗಳ ಸಾರ್ಥಕತೆಯಥ ಸಾಗಿದಾಗ ಮಾತ್ರ ಜೀವನದಲ್ಲಿ ಯಶಸ್ಸು ಲಭಿಸಲಿದ್ದು ಆನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಾಗಬೇಕು ಎಂದು ಹುಳಿಯಾರು ಪಿಎಸೈ ವೈ.ಘೋರ್ಪಡೆ ಕರೆನೀಡಿದರು.
ಹುಳಿಯಾರು-ಕೆಂಕೆರೆ ಬಿಎಂಎಸ್ ಕಾಲೇಜಿನಲ್ಲಿ ಪಿಎಸೈ ವೈ.ಘೋರ್ಪಡೆ ಅವರು ಮಹಿಳಾ ದೌರ್ಜನ್ಯ ಹಾಗೂ ಲೈಂಗಿಕ ಅಪರಾಧದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. |
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಹಾಗೂ ಪೋಲಿಸ್ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ನಡೆದ ಕಾಲೇಜು ವಿದ್ಯಾರ್ಥಿಗಳಲ್ಲಿ ಮಹಿಳಾ ದೌರ್ಜನ್ಯ ಹಾಗೂ ಲೈಂಗಿಕ ಅಪರಾಧದ ಬಗ್ಗೆ ಅರಿವು ಕುರಿತ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು.
ಕಾಲೇಜು ಹಂತದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸಾಕಷ್ಟು ಕಲ್ಪನೆಗಳು ಮೂಡುವುದು ಸಹಜ ಆದರೆ ಆ ಕಲ್ಪನೆಗಳು ಮತ್ತೊಬ್ಬರಿಗೆ ಅಹಿತಕರವಾಗಿ ತೊಂದರೆಯನ್ನುಂಟು ಮಾಡಬಾರದು ಎಂದರು. ಅತಿಯಾದ ತಂತ್ರಜ್ಞಾನದಿಂದ ಸಮಾಜದಲ್ಲಿ ಅಹಿತಕರ ಘಟನೆಗಳು ಹೆಚ್ಚಾಗುತ್ತಿವೆ ಅಂತಹ ಘಟನೆಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಹಾಗೂ ಕಾಲೇಜು ವಿದ್ಯಾರ್ಥಿಗಳು ತಮಗೆ ಎದುರಾಗುವ ಸಮಸ್ಯೆಗಳನ್ನು ಪೋಷಕರ, ಉಪನ್ಯಾಸಕರ ಬಳಿ ತಿಳಿಸುವ ಮೂಲಕ ಸಮಸ್ಯೆಯನ್ನು ಸಣ್ಣದರಲ್ಲೇ ಪರಿಹರಿಸಿಕೊಳ್ಳದಿದ್ದಲ್ಲಿ ಮುಂದೆ ಅದೇ ಸಮಸ್ಯೆ ಬೆಳೆದು ದೊಡ್ಡದಾಗಿ ಇಡಿ ಜೀವನವೇ ನಾಶವಾಗುವ ದುಸ್ಥಿತಿ ಎದುರಾಗುತ್ತದೆ ಎಂದರು.
ನಾವು ನಡೆದುಕೊಳ್ಳುವ ರೀತಿ, ಹಾವಾಭಾವ ,ನಮ್ಮ ಉಡುಪುಗಳು ಸೇರಿದಂತೆ ಇನ್ನಿತರ ಪೂರಕ ಸನ್ನಿವೇಶಗಳಿಂದ ಅಹಿತಕರ ಘಟನೆಗಳು ನಡೆಯುತ್ತವೆ .ಮಹಿಳೆಯರ ಹಿತ ರಕ್ಷಣೆಗಾಗಿ ಸಾಕಷ್ಟು ಪ್ರಬಲವಾದ ಕಾನೂನುಗಳಿದ್ದು ಅದರಡಿ ತಪ್ಪಿತಸ್ಥರಿಗೆ ಶಿಕ್ಷೆವಿಧಿಸಲಾಗುತ್ತದೆ . ಯಾವುದೇ ರೀತಿಯ ಸಮಸ್ಯೆಗಳಿದ್ದರೂ ತಮ್ಮ ಇಲಾಖೆಯನ್ನು ಸಂಪರ್ಕಿಸುವಂತೆ 08133-268245, ಮಹಿಳಾಸಾಂತ್ವಾನ ಕೇಂದ್ರ 9036421593 ಅಥವಾ ಇ-ರಕ್ಷಾದ ಮೂಲಕ ನಮಗೆ ಸಂದೇಶ ಕಳುಹಿಸಿ ಎಂದರು.
ಸಿಪಿಐ ಜಯಕುಮಾರ್ ಮಾತನಾಡಿ , ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆಯುತ್ತಿರುವ ಬಗ್ಗೆ ದಿನನಿತ್ಯ ಪತ್ರಿಕೆ,ಟಿವಿಗಳಲ್ಲಿ ಪ್ರಕಟವಾಗುತ್ತಿದ್ದು, ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಾಲಾಕಾಲೇಜುಗಳಲ್ಲಿ ಇಂತಹ ಸಭೆಗಳನ್ನು ಮಾಡಿ ವಿದ್ಯಾರ್ಥಿಗಳಿಗೆ ತಿಳುವಳಿಕೆ ಮೂಡಿಸುವ ಕಾರ್ಯ ನಡೆಯಬೇಕಿದೆ ಎಂದರು. ಮಹಿಳಾ ದೌರ್ಜನ್ಯ ತಡೆಗಾಗಿ ಫೋಸ್ಕೋ ಎಂಬ ಕಾನೂನಿದ್ದು ಅಪರಾಧಿಗೆ ಕನಿಷ್ಠ ಮೂರುವರ್ಷ ಶಿಕ್ಷೆಯಿದೆ. ಕಾಲೇಜು ಹಂತದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ತಮ್ಮನಡುವೆ ಸಹೋದರತ್ವ ಭಾವನೆ ಬೆಳೆಸಿಕೊಳ್ಳಬೇಕೆ ಹೊರತು ಮತ್ಯಾವುದೆ ಕೆಟ್ಟ ಭಾವನೆ ಬೆಳೆಸಿಕೊಳ್ಳಬೇಡಿ ಎಂದು ಕಿವಿಮಾತುಹೇಳಿದರು.
ಪ್ರಾಂಶುಪಾಲರಾದ ಡಿ.ದೇವಿರಮ್ಮ ಅಧ್ಯಕ್ಷತೆವಹಿಸಿದ್ದರು.ರಾಜ್ಯಶಾಸ್ತ್ರ ಉಪನ್ಯಾಸಕ ಯತೀಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕರಾದ ಸಯ್ಯದ್ ಇಬ್ರಾಹಿಂ, ಅಶೋಕ್, ಹನುಮಂತಪ್ಪ, ಶಿವಯ್ಯ ಸೇರಿದಂತೆ ಇತರರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ