ಹುಳಿಯಾರು ಹೋಬಳಿ ಸ್ವಾತಂತ್ರ್ಯ ಹೋರಾಟಗಾರರ ಸಂಘ ಹಾಗೂ ರೈತಸಂಘದ ಸಹಯೋಗದಲ್ಲಿ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಪಟ್ಟಣದ ಗಾಂಧಿಭವನದಲ್ಲಿ ಬುಧವಾರ ಮಧ್ಯರಾತ್ರಿ 12ರ ಸಮಯದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ 68ನೇ ಸ್ವಾತಂತ್ಯ್ರ ದಿನಾಚರಣೆಯನ್ನು ಆಚರಿಸಲಾಯಿತು.
![]() |
ಹುಳಿಯಾರಿನ ಗಾಂಧಿಭವನದಲ್ಲಿ ಮಧ್ಯರಾತ್ರಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಪಿಎಸೈ ಘೋರ್ಪಡೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. |
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪಿಎಸೈ ಘೋರ್ಪಡೆ ದೇಶಕ್ಕೆ ಸ್ವಾತಂತ್ರ್ಯ ಕೊಟ್ಟಿದ್ದು ಮಧ್ಯರಾತ್ರಿಯಾಗಿದ್ದು ಅದರ ಸವಿನೆನಪಿಗಾಗಿ ಇಲ್ಲೂ ಕೂಡ ಮಧ್ಯರಾತ್ರಿಯೇ ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು. ಸ್ವಾತಂತ್ಯ್ರಕ್ಕೆ ಹೋರಾಡಿದ ಹೋರಾಟಗಾರರ ನಡುವೆ ಮಧ್ಯರಾತ್ರಿಯಲ್ಲಿ ನಾನು ಧ್ವಜಾರೋಹಣ ಮಾಡುತ್ತಿರುವುದು ಇದೇ ಮೊದಲಾಗಿದ್ದು ಇದು ನನ್ನ ವೃತ್ತಿ ಜೀವನದ ಮರೆಯಲಾಗದ ಘಟನೆ ಎಂದರು. ಇಂತಹ ಆಚರಣೆಗಳು ಸದಾಕಾಲ ನಡೆಯುತ್ತಿರಬೇಕು, ಪ್ರಸ್ತುತ ದೇಶವ್ಯಾಪಿ ಅನೇಕ ಕಾನೂನುಬಾಹಿರ ಕೃತ್ಯಗಳು ಹಾಗೂ ಭ್ರಷ್ಟಾಚಾರ ಹೆಚ್ಚುತ್ತಿದ್ದು ಇವುಗಳು ದೇಶದ ಅಭಿವೃದ್ದಿಗೆ ಮಾರಕವಾಗಿವೆ ಎಂದು ವಿಷಾದಿಸಿದರು. ಇಂದಿನ ಯುವಕರಿಗೆ ಹಿಂದಿನವರ ಮಾರ್ಗದರ್ಶನ ಅಗತ್ಯವಿದ್ದು ರಾಷ್ಟ್ರನಾಯಕರ ಅದರ್ಶ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ದೇಶದ ಪ್ರಗತಿಗೆ ಮುಂದಾಗಿ ಎಂದು ಕರೆ ನೀಡಿದರು.
ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಕುಫ್ಫೂರು ಗದ್ದಿಗೆಮಠದ ಡಾ|| ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಅಶೀರ್ವಚನ ನೀಡಿ, ದ್ವೇಷ ಅಸೂಯೆಗಳು ತಾಂಡವವಾಡಿ , ತ್ಯಾಗಮನೋಭಾವ ಇಲ್ಲವಾಗಿರುವುದು ದೇಶ ಹಿಂದುಳಿಯಲು ಕಾರಣಾವಾಗಿದೆ ಧಾರ್ಮಿಕ ಸಂಸ್ಕಾರದ ಹಿನ್ನಲೆಯಲ್ಲಿ ವೈಜ್ಞಾನಿಕ ಬೆಳವಣಿಗೆಯಾಗಬೇಕು. ಧಾರ್ಮಿಕ ಸಂಸ್ಕಾರದ ಮೂಲಕ ಸಮಾನತೆ , ಸದಾಚಾರ, ಮಾನವೀಯತೆ ಬೆಳೆಸಿಕೊಳ್ಳಿ ಎಂದು ಹೇಳಿದರು. ಪ್ರಸ್ತುತದಲ್ಲಿ ದೇಶವ್ಯಾಪಿ ಅನೇಕ ಜ್ವಲಂತಸಮಸ್ಯೆಗಳಿದ್ದು ಅವುಗಳ ನಿರ್ಮೂಲನೆಯಾಗದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲವೆಂದರು. ಇಂತಹ ಸಮಸ್ಯೆಗಳ ನಿರ್ಮೂಲನೆಗಾಗಿ ದೇಶದ ಪ್ರತಿಯೊಬ್ಬ ಪ್ರಜೆಯೂ ಪಣತೊಡಬೇಕಿದೆ ಎಂದರು.
ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ವೆಂಕಟಾಛಲಪತಿ ಶೆಟ್ರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದು, ಧರ್ಮಸ್ಥಳ ಸಂಘದ ರೋಹಿತಾಕ್ಷ, ಹಸಿರುಸೇನೆಯ ಕೆಂಕೆರೆ ಸತೀಶ್, ರೈತಸಂಘದ ಮಲ್ಲಿಕಣ್ಣ, ಗಂಗಣ್ಣ, ಬಸ್ ಏಜೆಂಟರ್ ಸಂಘದ ಲೋಕೇಶಣ್ಣ, ಮುಖಂಡರಾದ ನಂದಿಹಳ್ಳಿ ಶಿವಣ್ಣ, ಜಲಾಲ್ ಸಾಬ್, ಬಡಗಿರಾಮಣ್ಣ, ಗ್ರಾ.ಪಂ.ಸದಸ್ಯ ಗಂಗಣ್ಣ , ಇಮ್ರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಈ ಸುದ್ದಿಗೆ ಸಂಬಂಧಿಸಿದ ಮತ್ತೊಷ್ಟು ಪೋಟೋ ಗಳು ಕೆಳಗಿವೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ