ಜನರಿಗೆ ಉಪಟಳ ನೀಡುತ್ತಿದ್ದ ಕರಡಿಯನ್ನು ಹಿಡಿಯಲು ಆರಣ್ಯ ಇಲಾಖೆಯವರು ಒಡ್ಡಿದ್ದ ಬೋನಿಗೆ ತಾಯಿಕರಡಿ ಬದಲು ಮರಿಕರಡಿ ಬಿದ್ದ ಘಟನೆ ಕೆಂಕೆರೆ ಸಮೀಪದ ಅಡಾಣಿಕಲ್ಲು ತೋಟದಲ್ಲಿ ಮಂಗಳವಾರ ಮುಂಜಾನೆ ಬೆಳಕಿಗೆ ಬಂದಿದೆ.
ಹುಳಿಯಾರು ಹೋಬಳಿ ಕೆಂಕೆರೆ ಸಮೀಪದ ಅಡಾಣಿಕಲ್ಲು ತೋಟದಲ್ಲಿ ಆರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿರುವ ಮರಿಕರಡಿ |
ಕೆಂಕೆರೆ ಗ್ರಾ.ಪಂ. ವ್ಯಾಪ್ತಿಯ ಹೊನ್ನಯ್ಯನ ಪಾಳ್ಯ, ಬರದಲೇಪಾಳ್ಯ,ಅಡಾಣಿಕಲ್ಲು ಸುತ್ತಮುತ್ತ ಗ್ರಾಮಗಳಲ್ಲಿ ಕರಡಿ ಹಾವಳಿ ಹೆಚ್ಚಾಗಿ ರೈತರು ತಮ್ಮ ಹೊಲಗದ್ದೆಗಳಿಗೆ ಹೋಗಲು ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿತ್ತು. ಕಳೆದ ವಾರದ ಹಿಂದಷ್ಟೆ ವ್ಯಕ್ತಿಯೊಬ್ಬನನ್ನು ಪರಚಿ ಗಾಯಗೊಳಿಸಿದ ಕರಡಿ ಬಗ್ಗೆ ಭಯಭೀತರಾದ ಜನ ಇದನ್ನು ಹಿಡಿದು ಬೇರೆಡೆಗೆ ಸಾಗಿಸುವಂತೆ ಆರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಕಾರ್ಯಾಚರಣೆ ಕೈಗೊಂಡ ಬುಕ್ಕಾಪಟ್ಟಣ ವಲಯದ ಆರಣ್ಯ ಸಿಬ್ಬಂದಿ ಕರಡಿ ಅಡ್ಡಾಡಿದ ಜಾಗಕ್ಕೆ ಬೋನನ್ನು ತಂದು ಇಟ್ಟಿದ್ದರು. ಬೋನಲ್ಲಿ ಇಟ್ಟಿದ್ದ ಹಲಸಿನಹಣ್ಣು ತಿನ್ನುವ ಆಸೆಗೆ ಕರಡಿ ಬರುವ ನಿರೀಕ್ಷೆಯಲ್ಲಿದ್ದ ಸಿಬ್ಬಂದಿಗೆ ಮಂಗಳಾವಾರ ಮುಂಜಾನೆ ತಾಯಿಕರಡಿ ಬದಲಿಗೆ ಮರಿಕರಡಿ ಬೋನಿಗೆ ಬಿದಿದ್ದು ಕಂಡುಬಂತು. ಬೋನಿಗೆ ಬಿದ್ದ ಮರಿಕರಡಿಯನ್ನು ಇಲಾಖೆ ಅಧಿಕಾರಿಗಳು ಗಾಣಧಾಳು ಪಶು ಚಿಕಿತ್ಸಾಕೇಂದ್ರದಲ್ಲಿ ಚಿಕಿತ್ಸೆ ನೀಡಿ ಸಮೀಪದ ರಾಮಪ್ಪನಕೆರೆ ಭಾಗದ ಅರಣ್ಯಕ್ಕೆ ಬಿಟ್ಟಿದ್ದು ತಾಯಿಕರಡಿ ಹಿಡಿಯಲು ಯೋಜನೆ ರೂಪಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ