ನಾಗಪ್ಪನಿಗೆ ಕಿಚುಡಿ, ಹುಳ್ಸೊಪ್ಪು ಸಾರು ನೈವೇದ್ಯ
-------------------
ಯಾರೊಬ್ಬರು ತಪ್ಪಿಸದ ನಾಗರು ಆಚರಣೆ
--------
ಗ್ರಾಮೀಣ ಭಾಗದಲ್ಲಿ ವರ್ಷವಿಡಿ ಅನೇಕ ರೀತಿಯ ಹಬ್ಬಗಳ ಆಚರಣೆ ರೂಢಿಯಲಿದ್ದು ಇಲ್ಲಿ ಯಾವುದೇ ಹಬ್ಬವನ್ನು ಆಚರಿಸದಿದ್ದರೂ ಸಹ ನಾಗರು ಪೂಜೆಯನ್ನು ಕಡ್ಡಾಯವಾಗಿ ಆಚರಿಸುವುದು ರೂಢಿಯಲ್ಲಿದೆ. ಅಂದು ಕುಟುಂಬದವರು ಎಲ್ಲೆ ಇದ್ದರೂ ಸಹ ತಮ್ಮ ಸ್ವಸ್ಥಳಗಳಿಗೆ ಆಗಮಿಸಿ ಕುಟುಂಬದವರೆಲ್ಲಾ ಒಟ್ಟಾಗಿ ಗಣೇಶ ಚತುರ್ಥಿಯಂದು ನಾಗರು ಹಬ್ಬವನ್ನು ತಲೆತಲಾಂತರದಿಂದ ಆಚರಿಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ.
ಗಣೇಶನ ಹಬ್ಬದಂದು ವಿನಾಯಕ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಪೂಜಿಸುವುದರ ಜೊತೆಜೊತೆಗೆ ಮಡಿಯಲ್ಲಿ ನಾಗಪ್ಪ ಅಂದರೆ ನಾಗರಕಲ್ಲಿಗೆ ಹಾಲನ್ನೆರೆದು ಪೂಜಿಸುವುದು ಹುಳಿಯಾರು ಪಟ್ಟಣ ಸೇರಿದಂತೆ ಸುತ್ತಮುತ್ತಲ್ಲ ಹಳ್ಳಿಗಳಲ್ಲಿ ತಲೆತಲಾಂತರದಿಂದ ನಡೆದುಕೊಂಡು ಬಂದಿದೆ.
ನಾಗಪ್ಪನ ಪೂಜೆ : ನಾಗಪ್ಪ ಎಂದರೆ ಎಲ್ಲರಲ್ಲೂ ಭಯ, ಭಕ್ತಿ ಹೆಚ್ಚಿದ್ದು ಮಡಿಯಿಂದ ನಾಗಪ್ಪನ ಪೂಜೆ ಮಾಡುವುದು ಇಂದಿಗೂ ನಡೆದುಕೊಂಡು ಬರುತ್ತಿದೆ. ನಾಗಪ್ಪನ ಪೂಜೆಯಲ್ಲಿ ಹಲವು ಬಗೆಬಳಿದ್ದು ಕೆಲವರು ಚೌತಿ ನಾಗರು ಎಂದು ಪೂಜಿಸಿದರೆ, ಮತ್ತೆಕೆಲವರು ಕೂಳೆ ನಾಗರು ಎಂದು ಪೂಜಿಸುತ್ತಾರೆ. ಅಲ್ಲದೆ ಗೌರಿಹಬ್ಬದಲ್ಲಿ ಪೂಜಿಸುವ ನಾಗಪ್ಪ ಹೆಚ್ಚು ವಿಶೇಷವಾಗಿದ್ದು ಹೆಚ್ಚು ಜನ ಈ ಸಮಯದಲ್ಲೇ ನಾಗಪ್ಪನ ಪೂಜೆ ಮಾಡುತ್ತಾರೆ. ಕೆಲವರು ಚಿಗಳಿ,ತಮಟ, ಸೌತೆಕಾಯಿ ನೈವೇದ್ಯ ವಿಟ್ಟು ಪೂಜಿಸಿದರೆ, ಕೆಲವರು ಕಿಚಡಿ,ಹಳ್ಸೋಪ್ಪಿನ ಸಾರನ್ನು ನೈವೇದ್ಯವಿಟ್ಟರೆ, ಮತ್ತೆಕೆಲವರು ರಾಗಿ ಹಿಟ್ಟಿನ ಸೀಕನ್ನು ನೈವೇದ್ಯವಾಗಿಟ್ಟು ಶ್ರದ್ದಾಭಕ್ತಿಯಿಂದ ಆಚರಿಸಿಕೊಂಡು ಬರುತ್ತಿದ್ದಾರೆ.
ಕೆಂಕೆರೆಯಲ್ಲಿ ಆಚರಣೆ : ಕೆಂಕೆರೆ ಗ್ರಾಮದ ಮಲ್ಲೇಶಪ್ಪನ ವಂಶಸ್ಥರು,ಉಪ್ಪರಿಗೈಯ್ಯನ ವಂಶಸ್ಥರು ಹಾಗೂ ವೀರಭ್ರಜ್ಜನ ಕುಟುಂಬದವರು ಸೇರಿದಂತೆ ಒಟ್ಟು ಇಪ್ಪತೈದರಿಂದ ಮೂವತ್ತು ಕುಟುಂಬದವರೆಲ್ಲಾ ಒಂದೆಡೆ ಸೇರಿ ನಾಗಪ್ಪನಿಗೆ ಪೂಜೆ ಸಲ್ಲಿಸಿದರು. ಹಿಂದಿನಿಂದ ನಡೆದು ಕೊಂಡು ಬಂದ ಪ್ರತೀತಿಯಂತೆ ನಾಗಪ್ಪನಿಗೆ ಕಿಚುಡಿ, ಹುಳ್ಸೋಪ್ಪಿನ ಸಾರನ್ನು ನೈವೇದ್ಯವಾಗಿ ಇಟ್ಟು ನಾಗರಕಲ್ಲಿಗೆ ಹಾಲನ್ನೆರೆಯುವ ಮೂಲಕ ನಾಗರು ಆಚರಿಸಿದರು.
ಗ್ರಾಮದ ಸಿಹಿನೀರು ಬಾವಿ ಸಮೀಪದ ತೋಟವೊಂದರಲ್ಲಿ ಪೂರ್ವಿಕರು ಸ್ಥಾಪಿಸಿದ ನಾಗರಕಲ್ಲಿದ್ದು ಅಲ್ಲಿಗೆ ಈ ಕುಟುಂಬದವರು ಮಡಿಯಿಂದ ಮನೆಯಲ್ಲೇ ಕಿಚುಡಿ,ಹುಳ್ಸೋಪ್ಪು ಸಾರು ಸಿದ್ದ ಮಾಡಿಕೊಂಡು ಬಂದು ಸೇರುತ್ತಾರೆ. ಕುಟುಂಬದ ಎಲ್ಲರೂ ಬಂದು ಸೇರಿದ ನಂತರ ತಾವು ತಂದಿದ್ದ ಕಿಚುಡಿ , ಹುಳ್ಸೋಪ್ಪಿನ ಸಾರನ್ನು ಒಂದು ದೊಡ್ಡ ಪಾತ್ರೆಯಲ್ಲಿ ಹಾಕಿ ಮಿಶ್ರಣ ಮಾಡಿ ನಾಗಪ್ಪನಿಗೆ ಎಡೆಯಾಗಿಟ್ಟು ಪೂಜೆ ಸಲ್ಲಿಸಿ ಹಾಲುತುಪ್ಪವನ್ನೆರೆಯುತ್ತಾರೆ. ಬಂದಿದ್ದ ಮುತ್ತೈದೆಯರಿಗೆ ಮಡಿಲು ತುಂಬುವ ಕಾರ್ಯ ಮಾಡಿ ನಂತರ ಅಲ್ಲೇ ಎಲ್ಲರೂ ಒಟ್ಟಾಗಿ ಕೂತು ಕಿಚುಡಿ ಊಟ ಮಾಡಿ ನಂತರ ತಮ್ಮ ಮನೆಗಳಿಗೆ ತೆರಳುತ್ತಾರೆ. ಪೂಜೆಯಲ್ಲಿ ಪುರೋಹಿತ ಚನ್ನಬಸವಯ್ಯ,ಸದಾಶಿವಣ್ಣ, ಕುಮಾರಣ್ಣ, ಚನ್ನಬಸವಯ್ಯ,
ಮಲ್ಲಿಕಣ್ಣ,ಪ್ರಭುಸ್ವಾಮಿ,ಚೇತನ್, ಗಂಗಾಧರ್. ಮಧು ಸೇರಿದಂತೆ ಸುಮಾರು ಇನ್ನೂರಕ್ಕೂ ಹೆಚ್ಚು ಮಂದಿ ಸೇರಿ ಪ್ರಸಾದ ಸ್ವೀಕರಿಸಿದರು.
ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಕುಟುಂಬದವರು ನಾಗಪ್ಪನಿಗೆ ಕಿಚುಡಿ ನೈವೇದ್ಯವಿಟ್ಟು ಪೂಜಿಸಿದರು. |
ಹಬ್ಬದ ಕಡ್ಡಾಯ ಆಚರಣೆ ನೆಪದಲ್ಲಿ ಎಲ್ಲೆಲ್ಲೋ ಇರುವ ಕುಟುಂಬದವರನ್ನೆಲ್ಲಾ ಒಗ್ಗೂಡಿಸುವುದೆ ಈ ಹಬ್ಬದ ವಿಶೇಷ ಎನ್ನಬಹುದಾಗಿದೆ.
-----------------------------------------------------------
ನಮ್ಮ ತಾತಂದಿರೂ ಸಹ ಇದೇ ರೀತಿ ನಾಗಪ್ಪನಿಗೆ ಕಿಚುಡಿ ಎಡೆ ಇಟ್ಟು ಪೂಜೆ ಮಾಡಿಕೊಂಡು ಬರುತ್ತಿದ್ದರು ಅದನ್ನೇ ತಾವೂ ಸಹ ಈಗ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಇದನ್ನೇನಾದರೂ ಬಿಟ್ಟರೆ ನಮಗೆ ನಾಗರುಹಾಕಿಕೊಂಡು ತೊಂದರೆ ಅನುಭವಿಸಸಬೇಕಾಗುತ್ತದೆ : ಸದಾಶಿವಣ್ಣ , ಕುಟುಂಬದ ಹಿರಿಯ.
--------------------------
ನಾಗಪ್ಪನ ಪೂಜೆ ನಂತರ ಕುಟುಂಬ ಸದಸ್ಯರೆಲ್ಲಾ ಸೇರಿ ಕಿಚಡಿ, ಹುಳ್ಸೊಪ್ಪು ಸಾರಿನ ಊಟ ಸವಿಯುತ್ತಿರುವುದು. |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ