ವರಮಹಾಲಕ್ಷ್ಮೀ ಹಬ್ಬಕ್ಕೆ ಸಿದ್ದತೆ ನಡೆದಿದ್ದು ಗಗನಕ್ಕೇರಿರಿರುವ ದರಗಳ ನಡುವೆ ಹಬ್ಬವನ್ನು ಸ್ವಾಗತಿಸುವಂತಾಗಿದೆ. ಹಬ್ಬಕ್ಕಾಗಿ ಇಂದಿನ ಸಂತೆಯಲ್ಲಿ ಹಾಗೂ ಬಸ್ ನಿಲ್ದಾಣದ ಅಂಗಡಿಗಳಲ್ಲಿ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಖರೀದಿಗೆ ಜನಸಂದಣೆ ಕಂಡೂಬಂದರೂ ವ್ಯಾಪಾರಮಾತ್ರ ನಿರಾಶದಾಯಕವಾಗಿತ್ತು.
ಹೂವು : ಕನಕಾಂಬರ ಮಾರೊಂದಕ್ಕೆ 30 ರೂಪಾಯಿದ್ದಿದ್ದು ಇಂದು 60 ರೂ. ದಾಟಿತ್ತು. ಕಾಕಡ 20 ರೂಪಾಯಿಯಿಂದ 60 ರೂಪಾಯಿಗೆ ಜಿಗಿದರೆ ,ಬಟನ್ಸ್ ಮಾರಿಗೆ 100 ರೂಪಾಯಿ,ಮಲ್ಲೆ ಹೂವಿಗೆ 40 ರೂಪಾಯಿ ಮುಟ್ಟಿದರೆ ,ಗುಲಾಬಿ ಒಂದಕ್ಕೆ 5ರೂ ,ಹಾರಗಳು 50 ರಿಂದ 150ರೂಗೆ ಮಾರಾಟವಾಯಿತು. ಲಕ್ಷ್ಮೀ ಹಬ್ಬಕ್ಕೆ ತಾವರೆ ಹಾಗೂ ಕೇದಗೆ ಬೇಕಾಗಿದ್ದು ಬೇರೆಡೆಯಿಂದ ಎಷ್ಟು ಕೊಟ್ಟಾದರೂ ಸರಿ ಬೇಕೆನ್ನುವವರಿದ್ದಾರೆ..ಶಾವಂತಿಗೆ ಬೆಲೆ ಕೈಗೆಟಕದಂತಿದ್ದು, ಮಾರೊಂದಕ್ಕೆ 300 ರೂವರೆಗೆ ಇದ್ದು ತಂದು ಮಾರುವ ಉಸಾಬರಿಯೇ ಬೇಡವಂದು ಕೈಬಿಟ್ಟಿದ್ದಾರೆ.
ಹಣ್ಣು: ಹಣ್ಣುಗಳು ಬೆಲೆ ಸಹ ಏರಿಕೆಯಾಗಿದ್ದು ಸೇಬು ಕೆ.ಜಿ.ಗೆ 120 ರಿಂದ 200ರೂ. ಕಿತ್ತಳೆ 120, ದ್ರಾಕ್ಷಿ 100, ಮೊಸಂಬೆ 80,ಮರಸೇಬು 100 ರೂ ,ವಿಳ್ಯದಎಲೆ ಒಂದುಕಟ್ಟಿಗೆ 40ರೂ, ಪುಟ್ಟ ಬಾಳೆ ಕೆಜಿ. 60ರೂ ದಾಟಿ ಗ್ರಾಹಕರ ಜೇಬಿಗೆ ಭಾರವಾಗಿದೆ.
ತರಕಾರಿ ಬೆಲೆಯಲ್ಲಿ ಮಾತ್ರ ಅಷ್ಟಾಗಿ ಏರಿಕೆ ಕಾಣದಿದ್ದು ಕ್ಯಾರೇಟ್, ಬೀನ್ಸ್ ಕೆಜಿಗೆ 60 ಆದರೆ ಟಮೋಟ 50 ಅಲೂಗೆಡ್ಡೆ 40, ಮೂಲಂಗಿ 30, ಬದನೆಕಾಯಿ 30ರೂಪಾಯಿ ಆಸುಪಾಸಿನಲ್ಲಿತ್ತು.
ವರಮಹಾಲಕ್ಷ್ಮಿ ಹಬ್ಬ ಹೆಣ್ಣುಮಕ್ಕಳ ಹಬ್ಬವಾಗಿದ್ದು ಸಂತೆಯ ತುಂಬಾ ಮಹಿಳೆಯರೆ ಹೆಚ್ಚಾಗಿ ಕಂಡುಬಂದರು. ಬೆಲೆ ಎಷ್ಟಾದರೂ ಸರಿ ಶ್ರಾವಣದ ಎರಡನೇ ಶುಕ್ರವಾರ ಬರುವ ಲಕ್ಷ್ಮಿ ಹಬ್ಬದ ಆಚರಣೆ ಸಂಪ್ರದಾಯವಾಗಿದ್ದು ಬಿಡಲು ಸಾಧ್ಯವಿಲ್ಲದೆ ಆಚರಿಸಲೇಬೇಕೆಂಬ ಮನಸ್ಥಿತಿಯಲ್ಲಿರುವ ಗ್ರಾಹಕರು ಕೊಳ್ಳುವ ಪ್ರಮಾಣದಲ್ಲಿ ಇಳಿಕೆ ಮಾಡಿ ಬೇಕಾದ ಹಣ್ಣುಹೂಗಳನ್ನು ಕೊಂಡೊಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಒಟ್ಟಾರೆ ಹಬ್ಬದ ಪ್ರಯುಕ್ತ ಸಂತೆ ಹಾಗೂ ಬಸ್ ನಿಲ್ದಾಣದಲ್ಲಿ ಜನಸಂದಣಿ ಕಂಡುಬಂತು.ಮುಂದೆ ಹಬ್ಬದ ಸಾಲುಸಾಲೇ ಬರಲಿದ್ದು ಈ ಹಬ್ಬದಲ್ಲೆ ಹೂವಿನ ಬೆಲೆ ವಿಪರೀತ ಏರಿಕೆಯಾಗಿದ್ದು ಮುಂದೇನು ಎನ್ನುವ ಮನೋಭಾವ ಗ್ರಾಹಕರಲ್ಲಿ ಕಂಡುಬಂತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ