ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿ ನಾಡಿಗೆ ದೊಡ್ಡದು ಎಂಬ ಪ್ರತೀತಿಯಿದ್ದು ಶುಕ್ರವಾರದಂದು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ನಾಗರ ಪಂಚಮಿಯು ನಾಗದೇವತೆಗಳನ್ನು ಅಂದರೆ ಹಾವುಗಳನ್ನು ಆರಾಧಿಸುವ ಸಾಂಪ್ರದಾಯಿಕ ಹಬ್ಬವಾಗಿದ್ದು,ಶ್ರಾವಣ ಮಾಸದ ಶುಕ್ಲಪಕ್ಷದಲ್ಲಿ ಬರುವ ಐದನೇ ದಿನದಂದು ಪಂಚಮಿಹಬ್ಬವಾಗಿ ಆಚರಿಸಲಾಗುತ್ತದೆ.
ಹುಳಿಯಾರಿನಲ್ಲಿ ನಾಗರಪಂಚಮಿ ಹಬ್ಬದ ಅಂಗವಾಗಿ ನಾಗರಕಲ್ಲಿಗೆ ಪೂಜೆಸಲ್ಲಿಸುತ್ತಿರುವ ನಾಗಪ್ಪನ ಭಕ್ತರು. |
ನಾಗರಪಂಚಮಿ ದಿನದಂದು ಆಶ್ವಥಕಟ್ಟೆಯ ಬಳಿಯಿರುವ ನಾಗರಕಲ್ಲಿಗೆ ಅಥವಾ ಹಾವಿನಹುತ್ತಕ್ಕೆ ಇಲ್ಲವೇ ಹುತ್ತದಮಣ್ಣನ್ನು ಮನೆಗೇ ತಂದು ಬೆಳ್ಳಿಯ ನಾಗರಮೂರ್ತಿಯನ್ನು ಇಟ್ಟು ಹಾಲೆರೆಯುವ ಸಂಪ್ರದಾಯ ಇಂದಿಗೂ ಚಾಲ್ತಿಯಲ್ಲಿದೆ. ನಾಗರಪಂಚಮಿ ಆಚರಣೆಗೆ ಪೌರಾಣಿಕ ಹಾಗೂ ಜಾನಪದ ಹಿನ್ನಲೆಯಿದ್ದು ಶ್ರಾವಣ ಮಾಸದ ಹಬ್ಬಗಳಿಗೆ ಮುನ್ನುಡಿಯಾದ ನಾಗರಪಂಚಮಿಯನ್ನು ರಾಜ್ಯದ ಹಲವು ಕಡೆ ತಪ್ಪದೇ ಆಚರಿಸಲಾಗುತ್ತದೆ. ನಾಗರಪಂಚಮಿಯನ್ನು ಬಹಳ ನಿಯಮನಿಷ್ಠೆಯಿಂದ ಆಚರಿಸುವುದಿದ್ದು, ನಾಗಪ್ಪ ಮೂರ್ತಿಗೆ ಹಾಲು ಬಿಟ್ಟು ಪೂಜೆಸಲ್ಲಿಸುವುದಲ್ಲದೆ, ಸಿಹಿಕಡುಬು, ಚಿಗಳಿ-ತಂಬಿಟ್ಟು, ನೆನೆಸಿದ ಕಡ್ಲೆಕಾಳನ್ನು ನೈವೇದ್ಯವಾಗಿ ಸಮರ್ಪಿಸುತ್ತಾರೆ. ಸಹೋದರಸಹೋದರಿಯರು ಒಬ್ಬರಿಗೊಬ್ಬರು ತನಿಎರೆಯುವ ಮೂಲಕ ಒಡವುಟ್ಟಿದವರೆಲ್ಲರೂ ಸುಖವಾಗಿರಲಿ ಎಂದು ಹಾರೈಸುತ್ತಾರೆ. ಈದಿನ ನಾಗಪೂಜೆ ಮಾಡಿದರೆ ನಾಗದೋಷಕ್ಕೆ ಪರಿಹಾರಸಿಗಲಿದೆ ಎಂಬ ನಂಬಿಕೆಯಿದೆ.
ಹುಳಿಯಾರಿನಲ್ಲಿ ನಾಗಪಂಚಮಿಯ ಅಂಗವಾಗಿ ಕೆಲವರು ಮನೆಗಳಲ್ಲಿ ಹಾಗೂ ರಂಗನಾಥಸ್ವಾಮಿ ದೇವಾಲಯದ ಬಳಿಯ ಅಶ್ವಥಕಟ್ಟೆ,ಹುಳಿಯಾರಮ್ಮ ದೇವಾಲಯದ ಮೂಲಸ್ಥಾನದಲ್ಲಿ ಪ್ರತಿಷ್ಠಾಪಿಸಿರುವ ನಾಗರಕಲ್ಲಿಗೆ ಹಾಗೂ ಕೆರೆಏರಿಮೇಲಿರುವ ಹುತ್ತಗಳಿಗೆ ತೆರಳಿ ಪೂಜೆಸಲ್ಲಿಸುವ ಮುಖಾಂತರ ನಾಗರಪಂಚಮಿ ಆಚರಣೆ ನಡೆಯಿತು.ಗ್ರಾಮದೇವತೆ ದುರ್ಗಮ್ಮದೇವಸ್ಥಾನದಲ್ಲಿ ಈ ನಿಮಿತ್ತ ದೇವಿಯ ಸುತ್ತ ಹುತ್ತವನ್ನೇ ನಿರ್ಮಿಸಿ ನಾಗದೇವತೆ ಅಲಂಕಾರ ಮಾಡಲಾಗಿತ್ತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ