ಹುಳಿಯಾರು ಹೋಬಳಿಯಲ್ಲಿ ರಾಗಿ ಸಾಂಪ್ರದಾಯಿಕ ಬೆಳೆಯಾಗಿದ್ದು , ಬಹುತೇಕ ರೈತರಿಗೆ ಇದೇ ಜೀವನಾಧಾರವಾಗಿದ್ದು ಮಳೆಯ ಅಭಾವದಿಂದಾಗಿ ಶೇ.38 ರಷ್ಟು ಪ್ರದೇಶದಲ್ಲಿ ಮಾತ್ರ ರಾಗಿ ಬಿತ್ತನೆಯಾಗಿರುವುದು ಆತಂಕದ ಸಂಗತಿಯಾಗಿದೆ. ರೈತರಲ್ಲಿ ಬಿತ್ತನೆಯ ಉತ್ಸಾವೂ ಇಲ್ಲದೆ ಮಳೆಗಾಗಿ ಕಾದುಕೂರುವಂತ ಚಿಂತಾಜನಕ ಸ್ಥಿತಿಯಲ್ಲಿ ನೇಗಿಲಯೋಗಿ ಪರಿತಪಿಸುತ್ತಿದ್ದಾನೆ.
ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಹೊಲವೊಂದರಲ್ಲಿ ಸಾಲು ಸಡ್ಡೆ ಮೂಲಕ ರಾಗಿ ಬಿತ್ತನೆಯಲ್ಲಿ ತೊಡಗಿರುವ ರೈತ. |
ಸಹಜವಾಗಿ ಜುಲೈ ತಿಂಗಳಿನಿಂದ ಪ್ರಾರಂಭವಾಗುವ ಹಿಂಗಾರು ಆಗಸ್ಟ್ ಅಂತ್ಯದೊಳಗೆ ಹೆಚ್ಚು ಬಿತ್ತನೆಯಾಗಬೇಕು. ಆದರೆ ಹೋಬಳಿ ವ್ಯಾಪ್ತಿಯಲ್ಲಿ ಸಕಾಲದಲ್ಲಿ ಮಳೆಯಾಗದೆ ಹೋಗಿದ್ದರಿಂದ ಆಗಸ್ಟ್ ಅರ್ಧ ತಿಂಗಳು ಕಳೆದರೂ ಸಹ ಅರ್ಧದಷ್ಟು ಸಹ ರಾಗಿ ಬಿತ್ತನೆಯಾಗಿಲ್ಲ. ಕೆಲ ಭಾಗದಲ್ಲಿ ಚದುರಿದ ತುಂತುರು ಮಳೆಯಾಗಿದ್ದರಿಂದ ಆ ಭಾಗದ ರೈತರು ರಾಗಿ ಬಿತ್ತಿದ್ದರೆ , ಇನ್ನುಳಿದ ಭಾಗದಲ್ಲಿ ಹೊಲ ಹದಮಾಡಿಕೊಂಡು ರಾಗಿ ಬಿತ್ತನೆಗೆ ಕಾಯುತ್ತಿದ್ದಾರೆ.
ಕಳೆದ ಪೂರ್ವಮುಂಗಾರು ಪ್ರಾರಂಭದಲ್ಲಿ ಉತ್ತಮ ಮಳೆಯಾಗಿ ರೈತರಲ್ಲಿ ಉತ್ಸಾಹ ತುಂಬಿದ್ದ ಮಳೆ ನಂತರ ದಿನಗಳಲ್ಲಿ ಕೈಕೊಟ್ಟಿದ್ದರಿಂದ ಕೆಲಭಾಗಗಳಲ್ಲಿ ಮಾತ್ರ ಅಲ್ಪಸ್ವಲ್ಪ ಹೆಸರು ಬೆಳೆಯಾಗಿ ಉಳಿದಂತೆ ಬಿತ್ತಿದ ಬೀಜವೂ ಸಹ ದೊರೆಯದ ಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ನಷ್ಟ ಅನುಭವಿಸಿದ ರೈತ ಮುಂಗಾರು ಕೈಹಿಡಿಯಲಿಲ್ಲವಾದರೂ ಹಿಂಗಾರಾದರೂ ಕೈಹಿಡಿಯುತ್ತದೆ ಎಂಬ ಆಶಾಭಾವನೆಯಿಂದ ರೈತರು ಬಿತ್ತನೆಯಲ್ಲಿ ತೊಡಗಿದ್ದರೂ ಸಹ ಹೆಚ್ಚಿನ ಉತ್ಸಾಹ ಕಂಡುಬರುತ್ತಿಲ್ಲ.
ಬಿತ್ತನೆ : ಹುಳಿಯಾರು,ಕೆಂಕೆರೆ,ಕೋರಗೆರೆ,ಯಳನಡು,ಬರಕನಹಾಳ್, ದೊಡ್ಡಬಿದರೆ, ಗಾಣಧಾಳು, ಹೊಯ್ಸಲಕಟ್ಟೆ, ತಿರುಮಲಾಪುರ,ದಸೂಡಿ ಭಾಗದ ಗ್ರಾಮಗಳು ರಾಗಿ ಬಿತ್ತನೆ ಪ್ರದೇಶಗಳಾಗಿವೆ. ಇದುವರೆಗೆ ತಿಮ್ಲಾಪುರ,ಕೋರಗೆರೆ, ದೊಡ್ಡಬಿದರೆ ವ್ಯಾಪ್ತಿಯಲ್ಲಿ ಈಗಾಗಲೇ ಬಿತ್ತನೆಯಾಗಿದ್ದರೆ, ಯಳನಡು ,ಕೆಂಕೆರೆ ಗ್ರಾ.ಪಂ.ಯ ಹಳ್ಳಿಗಳಲ್ಲಿ ಭಾಗಶಃ ಬಿತ್ತನೆಯಾಗಿದೆ. ಇನ್ನುಳಿದ ಭಾಗಗಳ ರೈತರು ಹೊಲಗಳನ್ನು ಹದಮಾಡಿಕೊಂಡು ಮಳೆ ಎದುರು ನೋಡುತ್ತಿದ್ದಾರೆ.
ಪ್ರಗತಿ : ಹೋಬಳಿ ವ್ಯಾಪ್ತಿಯಲ್ಲಿ ಒಟ್ಟು 9500 ಹೆಕ್ಟೇರ್ ರಾಗಿ ಬಿತ್ತನೆ ಪ್ರದೇಶವಿದ್ದು ಅದರಲ್ಲಿ ರಾಗಿ 3635 ಹೆಕ್ಟೇರ್, ಅವರೆ 140 ಹೆಕ್ಟೇರ್, ಜೋಳ 40 ಹೆಕ್ಟೇರ್, ಹುಚ್ಚೆಳ್ಳು 24 ಹೆಕ್ಟೇರ್, ತೊಗರಿ 135 ಹೆಕ್ಟೇರ್,ಸಾಮೆ 12 ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ ಬಿತ್ತನೆಯಾಗಿದೆ. ಇನ್ನೂ ಅರ್ಧಕ್ಕೂ ಹೆಚ್ಚಿನ ಭಾಗದಲ್ಲಿ ಬಿತ್ತನೆಯಾಗಬೇಕಿದೆ.
ಪ್ರೋತ್ಸಾಹ : ಕೃಷಿ ಇಲಾಖೆ ವತಿಯಿಂದ ಹೋಬಳಿಯ ಕೆಲ ಗ್ರಾಮಗಳಲ್ಲಿ ರಾಗಿ,ನವಣೆ , ಜಿಪ್ಸಂ,ಬೋರೆಕ್ಸ್ ನಂತಹ ಲಘುಪೋಷಕಾಂಷಗಳನ್ನು ಉಚಿತವಾಗಿ ನೀಡುವ ಮೂಲಕ ಬಿತ್ತನೆಗೆ ಪ್ರೋತ್ಸಾಹ ನೀಡಿದ್ದರೂ ಸಹ ಮಳೆಯಾಗದೆ ಪ್ರಯೋಜನವಾಗಲಿಲ್ಲ.
ಕುಂಠಿತ : ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಿತ್ತನೆಯಲ್ಲಿ ಸಾಕಷ್ಟು ಕ್ಷೀಣಿಸಿರುವುದಲ್ಲದೆ, ಸರಿಯಾಗಿ ಮಳೆಯಾಗಿರದ ಕಾರಣ ರಾಗಿ ಕೊಳ್ಳಲು ಸಹ ರೈತರು ಮುಂದಾಗದೆ ಸುಮ್ಮನಿದ್ದಾರೆ. ಹಿಂಗಾರು ಬಿತ್ತನೆ ಸೆಪ್ಟಂಬರ್ ಅಂತ್ಯದವರೆಗೂ ಇರುತ್ತದಾರೂ ರಾಗಿ ಬಿತ್ತನೆಗೆ ಜುಲೈ-ಆಗಸ್ಟ್ ತಿಂಗಳು ಸೂಕ್ತವಾಗಿದ್ದು ಈ ಸಮಯದಲ್ಲಿ ಬಿತ್ತನೆಯಾದರೆ ಮಾತ್ರ ಉತ್ತಮ ಇಳುವರಿ ಸಾಧ್ಯವಾಗುತ್ತದೆ . ಇನ್ನೊಂದು ವಾರದಲ್ಲಿ ಮಳೆಯಾಗದಿದ್ದರೆ ರೈತರು ರಾಗಿ ಬದಲು ಜೋಳ, ಹುರುಳಿ ಬಿತ್ತನೆ ಕಡೆ ವಾಲುತ್ತಾರೆ ಎನ್ನುತ್ತಾರೆ ಸಹಾಯಕ ಕೃಷಿ ಅಧಿಕಾರಿ ನೂರುಲ್ಲಾ.
ನೆನ್ನೆಯಿಂದ ಹೋಬಳಿ ವ್ಯಾಪ್ತಿಯಲ್ಲಿ ಮಳೆಯ ಸೂಚನೆ ಕಾಣುತ್ತಿದ್ದು ಅಲ್ಲಲ್ಲಿ ಬಿದ್ದ ಮಳೆಯಿಂದ ಈಗಾಗಲೇ ಬಿತ್ತಿದ್ದ ರಾಗಿಗೆ ಜೀವಬಂದಂತಾಗಿದ್ದು, ಮೊಳಕೆಗೆ ಸಹಕಾರಿಯಾಗಲಿದೆ. ರಾಗಿ ಬಿತ್ತಿದ್ದ ರೈತರು ಗೊಬ್ಬರ ಹಾಕಲು ಮುಂದಾಗಿದ್ದರೆ , ಇನ್ನೂ ಬಿತ್ತನೆ ಮಾಡದ ರೈತರು ಬಿತ್ತನೆಗೆ ಮುಂದಾಗಿದ್ದು ಕಂಡು ಬಂತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ