ಜಿಲ್ಲೆಯಲ್ಲಿ ಹುಳಿಯಾರು ಎಪಿಎಂಸಿ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾಗಿದ್ದು ಇದರ ಮುನ್ನೆಡೆಗೆ ಈ ಮಾರುಕಟ್ಟೆಯ ಕಾರ್ಯದರ್ಶಿಯಾಗಿದ್ದ ಜಯರಾಂ ಅವರ ಪರಿಶ್ರಮವೂ ಕಾರಣವಾಗಿದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಳ್ಳಿ ರಾಜ್ ಕುಮಾರ್ ಶ್ಲಾಘಿಸಿದರು.
ಪಟ್ಟಣದ ಕೃಷಿಉತ್ಪನ್ನ ಮಾರುಕಟ್ಟೆಯಲ್ಲಿ ಆರೂವರೆ ವರ್ಷಗಳ ಕಾಲ ಕಾರ್ಯದರ್ಶಿಯಾಗಿ ದಕ್ಷತೆಯಿಂದ ಸೇವೆ ಸಲ್ಲಿಸಿ, ತುಮಕೂರು ಎಪಿಎಂಸಿಗೆ ಜಯರಾಂ ವರ್ಗಾವಣೆಗೊಂಡಿರುವ ಹಿನ್ನಲೆಯಲ್ಲಿ ಗುರುವಾರದಂದು ಎಪಿಎಂಸಿ ಕಾರ್ಯಕಾರಿ ಮಂಡಳಿ ಹಾಗೂ ವರ್ತಕಸಂಘದವತಿಯಿಂದ ಹಮ್ಮಿಕೊಳ್ಳಲಾಗಿದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಹುಳಿಯಾರು ಎಪಿಎಂಸಿಯ ಕಾರ್ಯದರ್ಶಿಯಾದ ಜಯರಾಂ ಅವರು ವರ್ಗಾವಣೆಯಾದ ಹಿನ್ನಲೆಯಲ್ಲಿ ಕಾರ್ಯಕಾರಿಮಂಡಳಿ ಹಾಗೂ ವರ್ತಕರ ಸಂಘದವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. |
ಮಾರುಕಟ್ಟೆಯಲ್ಲಿ ಚಿರಪರಿಚಿತರಾಗಿದ್ದ ಜಯರಾಂ ಅವರು ತಮ್ಮ ಅವಧಿಯಲ್ಲಿ ಇಲ್ಲಿನ ರೈತರು ಹಾಗೂ ವರ್ತಕರೊಂದಿಗೆ ಉತ್ತಮ ಭಾಂದವ್ಯಹೊಂದಿ ದಕ್ಷತೆಯಿಂದ ಸೇವೆ ನೀಡಿದ್ದು, ಮುಂದೆಯೂ ಸಹ ಜಿಲ್ಲಾ ಎಪಿಎಂಸಿಯಲ್ಲಿ ಇದೇರೀತಿ ಉತ್ತಮ ಸೇವೆ ನೀಡಿ ಮಾರುಕಟ್ಟೆಯನ್ನು ಮುನ್ನಡೆಸಲಿ ಎಂದರು.
ಎಪಿಎಂಸಿ ಅಧ್ಯಕ್ಷ ಬಿ.ಸಣ್ಣಯ್ಯ ಮಾತನಾಡಿ, ಜಯರಾಂ ಅವರು ಮಾರುಕಟ್ಟೆಯಲ್ಲಿ ಎದುರಾಗುತ್ತಿದ್ದ ಸಮಸ್ಯೆಗಳ ಬಗ್ಗೆ ಹಾಗೂ ಯಾವ ರೀತಿ ಬಗೆಹರಿಸಬಹುದು ಎಂಬುದರ ಬಗ್ಗೆ ಕಾರ್ಯಕಾರಿ ಮಂಡಳಿಯವರಿಂದ ಚರ್ಚಿಸುತ್ತಿದ್ದರಲ್ಲದೆ, ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಅವರು ಈ ಎಪಿಎಂಸಿ ತೊರೆದು ಹೋಗುತ್ತಿರುವುದು ನಮ್ಮೆಲ್ಲರಿಗೂ ಒಂದು ರೀತಿ ನಷ್ಟವಾದಂತಾಗಿದೆ ಎಂದರು.
ಸನ್ಮಾನ ಸ್ವೀಕರಿಸಿದ ಕಾರ್ಯದರ್ಶಿ ಜಯರಾಂ ಮಾತನಾಡಿ, ನಾನು ಈ ಮಾರುಕಟ್ಟೆಗೆ ಬರುವ ಮೊದಲು ಭಯಪಟ್ಟಿದ್ದೆ ಆದರೆ ಇಲ್ಲಿಗೆ ಬಂದ ನಂತರ ಕಾರ್ಯಕಾರಿ ಮಂಡಳಿಯವರು, ಈ ಕ್ಷೇತ್ರದ ಶಾಸಕರುಗಳು, ವರ್ತಕರು,ರೈತರು ತಮ್ಮೊಂದಿಗೆ ಸಹಕಾರಯುತವಾಗಿ ನಡೆದುಕೊಂಡಿದ್ದು ಅವರೆಲ್ಲರಿಗೂ ತಾವು ಚಿರಋಣಿ ಎಂದರು. ನಬಾರ್ಡ್ ನಲ್ಲಿ ನಾಲ್ಕು ಕೌಂಟರ್ ತೆರೆಯುವ ಮೂಲಕ ಜಿಲ್ಲೆಯಲ್ಲೇ ಹೆಚ್ಚು ಕೊಬ್ಬರಿ ಖರೀದಿ ನಡೆಸಿರುವ ಹೆಗ್ಗಳಿಕೆ ಹುಳಿಯಾರು ಮಾರುಕಟ್ಟೆಗಿದ್ದು, ಅದು ತಮ್ಮ ಅವಧಿಯಲ್ಲಿ ಆಗಿರುವುದಕ್ಕೆ ತಮಗೆ ಹೆಮ್ಮೆಯಿದೆ ಎಂದರು.
. ಈ ಸಂದರ್ಭದಲ್ಲಿ ಎಪಿಎಂಸಿ ಉಪಾಧ್ಯಕ್ಷ ವೈ.ಸಿ.ಸಿದ್ರಾಮಯ್ಯ,ಮಾಜಿಅಧ್ಯಕ್ಷ ಶಿವರಾಜ್, ನಿರ್ದೇಶಕರಾದ ಸಣ್ಣಕರಿಯಪ್ಪ,ರುದ್ರೇಶ್, ಸೋಮಶೇಖರಯ್ಯ, ಬಸವರಾಜು, ಈಶ್ವರಮೂರ್ತಿ , ವರ್ತರ ಸಂಘದ ಶಾಂತಣ್ಣ,ಎಲ್.ಆರ್.ಬಾಲಾಜಿ, ಎಂ.ಎಸ್.ಆರ್ ನಟರಾಜ್, ಸಹಕಾರ್ಯದರ್ಶಿ ನಾಗೇಂದ್ರಪ್ಪ ಸೇರಿದಂತೆ ಎಪಿಎಂಸಿ ನಿರ್ದೇಶಕರು,ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ