ಕುರಿ ಮೈತೊಳೆಯಲು ಹೋಗಿದ್ದ ಸಹೋದರರು ಹಾಗೂ ಚಿಕ್ಕಪ್ಪ ಸೇರಿ ಮೂರು ಮಂದಿಯೂ ನೀರುಪಾಲಾದ ದುರ್ಘಟನೆ ಸಮೀಪದ ದೊಡ್ಡಎಣ್ಣೆಗೆರೆಯಲ್ಲಿ ಸೋಮವಾರ ಬೆಳಿಗ್ಗೆ ಘಟಿಸಿದೆ.
ಹುಳಿಯಾರು ಸಮೀಪದ ದೊಡ್ಡಎಣ್ಣೆಗೆರೆಯ ಗೌಡನಕಟ್ಟೆಯಲ್ಲಿ ಮುಳುಗಿ ಸಾವನಪ್ಪಿದ ನಾಗರಾಜು, ಪರಮೇಶ, ಮಲ್ಲೇಶ್ . |
ದುರ್ಘಟನೆ ನಡೆದ ಸ್ಥಳದಲ್ಲಿ ಸೇರಿರುವ ಮೃತರ ಕುಟುಂಬದವರು ಹಾಗೂ ಗ್ರಾಮಸ್ಥರು. |
ಮಲ್ಲೇಶ್ (16) ಪರಮೇಶ (17), ದೊಡ್ಡಎಣ್ಣೆಗೆರೆಯ ನಾಗರಾಜು(40), ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಮಲ್ಲೇಶ್ ಹಾಗೂ ಪರಮೇಶ್ ಅಣ್ಣತಮ್ಮಂದಿರಾಗಿದ್ದು ಎಂದಿನಂತೆ ಬೆಳಗಿನಜಾವ ಊರಿನ ಪಕ್ಕದ ಗೌಡನಕಟ್ಟೆಯ ಗುಂಡಿಯೊಂದರಲ್ಲಿ ಕುರಿಗಳ ಮೈತೊಳೆಯಲೆಂದು ತಮ್ಮ 30ಕುರಿಗಳ ಹಿಂಡನ್ನು ಹೊಡೆದುಕೊಂಡು ಹೋಗಿದ್ದಾರೆ. ಕಟ್ಟೆಯಲ್ಲಿ ಇಳಿದು ಕುರಿಗಳ ಮೈತೊಳೆಯುವಾಗ ಮುಂದಕ್ಕೆ ಹೋದ ಕುರಿಯನ್ನು ಹಿಡಿಯಲು ಹೋಗಿ ಮೊದಲು ಮಲ್ಲೇಶ ಕೆಸರಿನಲ್ಲಿ ಸಿಕ್ಕಿಕೊಂಡಿದ್ದಾನೆ. ಅವನನ್ನು ಬಚಾವ್ ಮಾಡಲು ಹೋದ ಅಣ್ಣ ಪರಮೇಶ ನಂತರ ನಾಗರಾಜು ಕೂಡ ನೀರಿನಲ್ಲಿ ಸಿಕ್ಕಿಕೊಂಡಿದ್ದಾರೆ ಕೆಸರಿನ ನೀರಿನಿಂದ ಹೊರಬರಲಾಗದೆ ಮೂವರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ದುರಾದೃಷ್ಟವೆಂಬಂತೆ ಹತ್ತಿರದಲ್ಲಿ ಯಾರೊಬ್ಬರೂ ಇಲ್ಲದಿದ್ದಿದ್ದು ಹಾಗೂ ಈ ಮೂವರಲ್ಲಿ ಯಾರೊಬ್ಬರಿಗೂ ಈಜು ಬಾರದೆಯಿದ್ದಿದ್ದು ಈ ಅವಗಡಕ್ಕೆ ಕಾರಣವಾಗಿದೆ ಎನ್ನಲಾಗಿದೆ. ನಾಗರಾಜು ಎಂಬಾತನಿಗೆ ಹೆಂಡತಿ ಹಾಗೂ ಇಬ್ಬರು ಗಂಡುಮಕ್ಕಳಿದ್ದು ದುರ್ಘಟನೆ ಕಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.
ವಿಚಾರ ತಿಳಿದು ಗ್ರಾಮಸ್ಥರು ಸ್ಥಳಕ್ಕೆ ಬರುವಷ್ಟರಲ್ಲೇ ಆ ಮೂವರು ಮುಳುಗಿದ್ದರು. ಹುಡುಕಾಟ ನಡೆಸಿ ಒಂದು ಶವವನ್ನು ಹೊರತೆಗೆದರೆ ಉಳಿದ ಎರಡು ಶವಗಳನ್ನು ಅಗ್ನಿಶಾಮಕದಳದವರ ಸಹಾಯದಿಂದ ಮೇಲೆತ್ತಲಾಯಿತು. ವೃತ್ತ ನೀರೀಕ್ಷಕ ಜಯ ಕುಮಾರ್, ಹಂದನಕೆರೆ ಪಿಎಸೈ ಸುನಿಲ್ ಕುಮಾರ್ ಸ್ಥಳದಲ್ಲಿದ್ದು , ಶವಮೇಲೆತ್ತಲು ನೆರವು ನೀಡಿದ್ದರು. ಹಂದನಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ