ಹುಳಿಯಾರುಹೋಬಳಿ ಕೆಂಕೆರೆ ಗ್ರಾಮದ ಹೊನ್ನಯ್ಯನಪಾಳ್ಯದ ಉಮಾಶಂಕರ್ ಕರಡಿ ದಾಳಿಗೆ ಬಲಿಯಾಗುವುದಕ್ಕೆ ಆರಣ್ಯ ಇಲಾಖೆಯವರ ನಿರ್ಲಕ್ಷವೇ ಕಾರಣವೆಂದು ಸ್ಥಳಿಯರು ದೂರಿದ್ದಾರೆ.
ಕಳೆದ ತಿಂಗಳು ಹೊನ್ನಯ್ಯನ ಪಾಳ್ಯದ ತೋಟವೊಂದರ ಪಂಪ್ ಹೌಸ್ ಗುಂಡಿಗೆ ಕರಡಿ ಹಾಗೂ ಎರಡು ಕರಡಿ ಮರಿ ಬಿದಿದ್ದು , ಅವುಗಳನ್ನು ಹಿಡಿದು ಆರಣ್ಯಕ್ಕೆ ಬಿಡುವಂತೆ ಆರಣ್ಯ ಇಲಾಖೆಯವರಿಗೆ ತಿಳಿಸಿದ್ದರೂ ಸಹ ಅವುಗಳನ್ನು ಹಿಡಿಯದೆ ಗುಂಡಿಯಿಂದ ಹೊರಗಡೆ ಓಡಿಸಿದ್ದರು ಅಷ್ಟೆ. ಅದಾದ ಒಂದು ವಾರದೊಳಗಾಗಿ ಅವೇ ಕರಡಿಗಳು ಇದೇ ಊರಿನ ಸ್ವಾಮಿ ಎಂಬಾತನನ್ನು ಪರಚಿ ಗಾಯಗೊಳಿಸಿದ್ದವು. ಆಗ ಇಲಾಖೆಯವರಿಗೆ ತಿಳಿಸಿದಾಗ ಕರಡಿಯನ್ನು ಹಿಡಿಯುವುದಾಗಿ ತಿಳಿಸಿ ಒಂದು ಬೋನ್ ತಂದಿಟ್ಟಿದ್ದರು. ಅದರಲ್ಲಿ ದೊಡ್ಡ ಕರಡಿ ಬೀಳುವ ಬದಲು ಮರಿಕರಡಿ ಬಿದ್ದಿತ್ತು. ಆದರೆ ತಾಯಿ ಕರಡಿ ಮಾತ್ರ ಬಿದ್ದಿರಲಿಲ್ಲ. ಬೋನಿಗೆ ಬಿದ್ದಿದ್ದ ಮರಿಕರಡಿಯನ್ನು ಇಲ್ಲಿಂದ ತೆಗೆದುಕೊಂಡು ಹೋಗಿದ್ದನ್ನು ಬಿಟ್ಟರೆ ಮತ್ತೆ ಇದುವರೆಗೂ ಬೋನು ತಂದಿಟ್ಟಿಲ್ಲ. ತಾಯಿ ಕರಡಿ ಮರಿಯನ್ನು ಕಳೆದು ಕೊಂಡು ಗಾಸಿಯಾಗಿದ್ದು ಸಿಕ್ಕಿದವರ ಮೇಲೆ ದಾಳಿ ಮಾಡುತ್ತಿದೆ ಇದಕ್ಕೆಲ್ಲಾ ಆರಣ್ಯ ಇಲಾಕೆಯವರ ನಿರ್ಲಕ್ಷವೇ ಕಾರಣವೆಂದು ಚಿದಾನಂದ್ ಆರೋಪಿಸಿದರು.
ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಹೊನ್ನಯ್ಯನ ಪಾಳ್ಯದ ತೋಟದಲ್ಲಿ ಕರಡಿ ದಾಳಿ ಬಲಿಯಾದ ಉಮಾಶಂಕರ್ ಪತ್ನಿ ಬಸಮ್ಮ ಅವರಿಗೆ ಸರ್ಕಾದವತಿಯಿಂದ ಶಾಸಕ ಸಿ.ಬಿ.ಸುರೇಶ್ ಬಾಬು 2 ಲಕ್ಷ್ಯ ಮೊತ್ತದ ಚೆಕ್ ವಿತರಿಸಿದರು. |
ಹೊನ್ನಯ್ಯನಪಾಳ್ಯದದಿಂದ ಸ್ಪಲ್ಪದೂರದಲ್ಲೇ ಗುಡ್ಡವಿದ್ದು ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯ ಗಡಿ ಭಾಗವೂ ಸಹ ಆಗಿದೆ. ಚಿತ್ರದುರ್ಗದ ಕಡೆಯಗುಡ್ಡದಲ್ಲಿ ಕರಡಿಗಳಿದ್ದು ಅವು ನಮ್ಮಕಡೆ ಬಂದು ಈರೀತಿ ದಾಳಿ ಮಾಡುತ್ತಿವೆ. ಈ ಘಟನೆ ನಡೆದ ಕೂಡಲೇ ಗಾರ್ಡ್ ಗೆ ತಿಳಿಸಿದರೆ ಆತ ತನಗೂ ಇದಕ್ಕೆ ಸಂಬಂಧವಿಲ್ಲ ಬುಕ್ಕಾಪಟ್ಟಣದವರಿಗೆ ತಿಳಿಸಿ ಎಂದು ಹೇಳಿದ್ದಾರೆ. ಆದರೆ ಅದೇ ಗಾರ್ಡ್ ರೈತರು ತಮ್ಮ ಕೃಷಿ ಕಾರ್ಯಕ್ಕೆ ಸೌದೆ, ಗುಜ್ಜುಗಳನ್ನೇನಾದರೂ ಆರಣ್ಯದಿಂದ ತಂದರೆ ರೈತರ ಗಾಡಿಗಳನ್ನು ಹಿಡಿದು ಹಣವಸೂಲಿ ಮಾಡುತ್ತಾನೆ ಎಂದು ಶಿವುಮೂರ್ತಿ ದೂರಿದರು.ಅಲ್ಲದೆ ಕರಡಿಯನ್ನು ಹಿಡಿಯುವಂತೆ ಹೇಳಿದರೂ ಆ ಬಗ್ಗೆ ಸೂಕ್ತ ಗಮನಗೊಡದ ಹಾಗೂ ರೈತರಿಂದ ಹಣವಸೂಲಿ ಮಾಡುವ ಗಾರ್ಡ್ ಮೇಲೆ ಶಿಸ್ತುಕ್ರಮ ಜರುಗಿಸುವಂತೆ ಡಿಎಫ್ ಓ ಅವರನ್ನು ಕೇಳಿಕೊಂಡರು.
ಘಟನಾ ವಿಷಯ ತಿಳಿದು ಆಗಮಿಸಿದ್ದ ಶಾಸಕ ಸಿ.ಬಿ.ಸುರೇಶ್ ಬಾಬು, ಇಂತಹ ಘಟನೆಗೆ ಇಲಾಖೆಯಿಂದ 5 ಲಕ್ಷ್ಯ ಪರಿಹಾರವಿದ್ದು , ಈಗ 2 ಲಕ್ಷದ ಚೆಕ್ ನೀಡಲಿದ್ದು ಉಳಿಕೆ ಹಣವನ್ನು ಶೀಘ್ರವೇ ಕುಟುಂಬದವರಿಗೆ ತಲುಪಿಸುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದರಲ್ಲದೆ, ಆ ಕರಡಿಯನ್ನು ಹಿಡಿಯಲು ಬೇಕಾದ ವ್ಯವಸ್ಥೆಯನ್ನು ಮಾಡಿಕೊಂಡು ಕರಡಿ ಹಿಡಿಯಲು ಮುಂದಾಗುವಂತೆ ಹಾಗೂ ಹಿಡಿದ ಕರಡಿಯನ್ನು ಮತ್ತೆ ಇಲ್ಲೆಲ್ಲೂ ಬಿಡದೆ ಕರಡಿಧಾಮಕ್ಕೆ ಕಳುಹಿಸುವಂತೆ ಡಿಎಫ್.ಓ ಅವರಿಗೆ ತಿಳಿಸಿದರು.
ಕರಡಿ ಹಿಡಿಯುವ ಕಾರ್ಯವನ್ನು ಕೂಡಲೇ ಕೈಗೊಳ್ಳದಿದ್ದರೆ ಶವವನ್ನು ಇಲ್ಲಿಂದ ತೆಗೆಯುವುದಿಲ್ಲ ಎಂದು ಸ್ಥಳೀಯರು ಪಟ್ಟುಹಿಡಿದಾಗ ಡಿಎಫ್ ಓ ಅಮರ್ ನಾಥ ಪ್ರತಿಕ್ರಿಯಿಸಿ ಈಗ ಬೋನ್ ಹಾಗೂ ಬಲೆಯ ವ್ಯವಸ್ಥೆಯನ್ನು ಮಾಡಿರುವುದಾಗಿ ಹಾಗೂ ತಮ್ಮ ಸಿಬ್ಬಂದಿಯನ್ನು ಇಲ್ಲಿಯೇ ಗಸ್ತಿಗೆ ಹಾಕುವುದಾಗಿ ತಿಳಿಸಿದರು. ಇಲಾಖೆಯಿಂದ ಮೃತರ ಕುಟುಂಬದವರಿಗೆ ಸಿಗಬೇಕಾದ ಪರಿಹಾದ ಹಣವನ್ನು ಶೀಗ್ರದಲ್ಲೇ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.
ಅರಣ್ಯ ಇಲಾಖೆಯವರು ಬಂದು ಕರಡಿ ಹಿಡಿಯುವ ಕಾರ್ಯಕ್ಕೆ ಮುಂದಾಗುವವರೆಗೂ ಇಲ್ಲಿಂದ ಕದಲುವುದಿಲ್ಲ ಹಾಗೂ ಶವವನ್ನು ತೆಗೆಯುವುದಿಲ್ಲವೆಂದು ಬೆಳಿಗ್ಗೆಯಿಂದಲೂ ಕೆಂಕೆರೆ ಸೇರಿದಂತೆ ಸುತ್ತಮುತ್ತಲ ಹೆಚ್ಚು ಜನ ಪಟ್ಟುಹಿಡಿದು ಪ್ರತಿಭಟಿಸಿದ್ದರು. ಮಧ್ಯಾಹ್ನದ ನಂತರ ಅರಣ್ಯ ಇಲಾಖೆಯ ಡಿಎಫ್.ಓ ಬಂದು ಕರಡಿ ಹಿಡಿಯುವ ಭರವಸೆಯಿತ್ತ ಮೇಲೆ ತಮ್ಮಪಟ್ಟು ಕೈಬಿಟ್ಟರಲ್ಲದೆ ಕರಡಿಯನ್ನು ಹಿಡಿಯದಿದ್ದರೆ ತಾವೇ ಕರಡಿಗೆ ಏನು ಮಾಡಬೇಕು ಅದನ್ನು ಮಾಡುತ್ತೇವೆ ಆ ಬಗ್ಗೆ ತಾವು ಪ್ರಶ್ನಿಸಬಾರದೆಂದು ಎಚ್ಚರಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ