ಹುಳಿಯಾರು: ಭಗೀರಥ ಸಮಾಜದವರು ಆರ್ಥಿಕವಾಗಿ ಹಿಂದುಳಿದಿರುವ ತಮ್ಮ ಜನಾಂಗದ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಹ ನೀಡಲು ವಿದ್ಯಾನಿಧಿಯನ್ನು ಸ್ಥಾಪಿಸಿರುವುದು ಅನುಕರಣೀಯ ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ಶ್ಲಾಘಿಸಿದರು.
ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ನಡೆದ ತಾಲ್ಲೂಕು ಭಗೀರಥ ನೌಕರರ ಸಮಾವೇಶ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಾಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ನಡೆದ ತಾಲ್ಲೂಕು ಭಗೀರಥ ನೌಕರರ ಸಮಾವೇಶದಲ್ಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿದರು. |
ಭಗೀರಥ ಸಮಾಜಬಾಂಧವರನ್ನು ಸಂಘಟಿಸಿ ಅವಶ್ಯವಿರುವವರಿಗೆ ನೆರವು ನೀಡಲು ಮಾಡಲು ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದ ಅವರು ನನ್ನ ಅಧಿಕಾರದ ಅವಧಿಯಲ್ಲಿ ನನ್ನಿಂದಾಗುವ ಎಲ್ಲಾ ರೀತಿಯ ಅನುಕೂಲವನ್ನ ನೀಡುತ್ತಿದ್ದು ಸರಕಾರವು ಸಹ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಅಡಕೆ ಮತ್ತು ಕೊಬ್ಬರಿಗೆ ಬೆಂಬಲ ಬೆಲೆಯನ್ನು ನೀಡುವ ಕಾರ್ಯವನ್ನ ಕೇಂದ್ರಸರ್ಕಾರ ನಡೆಸಬೇಕಿದೆ. ಈ ಬಗ್ಗೆ ಈಗಾಗಲೇ ಸಂಸತ್ತಿನ ಅಧಿವೇಶನದಲ್ಲಿ ನಾನು ಪ್ರಸ್ತಾವಿಸಿದ್ದು ರೈತರ ಸಂಕಷ್ಟಕ್ಕೆ ಸ್ಪಂದಿಸುವಂತೆ ಪ್ರಧಾನ ಮಂತ್ರಿಗಳಿಗೆ ಒತ್ತಾಯಿಸಿದ್ದೇನೆ ಎಂದರು. ನೀರಾ ಆರೋಗ್ಯಕರ ಪೇಯವಾಗಿದ್ದು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ.ನೀರಾನೀತಿ ರೂಪಿಸಿ ಯೋಜನೆಯನ್ನು ಜಾರಿಗೆ ತರುವುದರಿಂದ ಸಂಕಷ್ಟದಲ್ಲಿರುವ ರೈತರಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರಸರ್ಕಾರದೊಂದಿಗೆ ಚರ್ಚಿಸಿ ರೈತರಿಗೆ ಅನುಕೂಲ ಕಲ್ಪಿಸುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿದ್ದ ಹೊಸದುರ್ಗ ಭಗೀರಥ ಪೀಠದ ಚಿನ್ಮೂಲಾದ್ರಿ ಶಿಲಾಪುರಿ ಮಹಾ ಸಂಸ್ಥಾನದ ಶ್ರೀಪುರುಷೋತ್ತಮಾನಂದಪುರಿ ಸ್ವಾಮಿ ಮಾತನಾಡಿ ಇಂದಿನ ಭ್ರಷ್ಟ ವ್ಯವಸ್ಥೆಯಲ್ಲಿ ಶಿಕ್ಷಣ ಪಡೆದವರಿಗೆಲ್ಲಾ ಸರ್ಕಾರಿ ನೌಕರಿ ಸಿಗೋದು ಕನಸಿನ ಮಾತು. ಹಾಗಾಗಿ ಸರ್ಕಾರಿ ಉದ್ಯೋಗಕ್ಕೆ ಕಾಯುತ್ತ ಕಾಲಹರಣ ಮಾಡುವುದನ್ನು ಬಿಟ್ಟು ಖಾಸಗಿ ಕಂಪನಿಗಳಲ್ಲಿ ಅಥವಾ ಸ್ವಯಂ ಉದ್ಯೋಗ ಮಾಡುವುದನ್ನ ರೂಡಿಸಿಕೊಳ್ಳುವಂತೆ ತಿಳಿಸಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರಕಾರಿ ಉದ್ಯೋಗದ ನೇಮಕಾತಿಯಲ್ಲಿ ಕೆಲವೊಂದು ಮಾನದಂಡಗಳಿದ್ದು ಇದರಲ್ಲಿ ಭ್ರಷ್ಟಚಾರಕ್ಕೆ ಅವಕಾಶವಾಗದೆ ಅರ್ಹರಿಗೆ ಉದ್ಯೋಗದೊರೆಯುವಂತೆ ಸರ್ಕಾರ ಎಚ್ಚರವಹಿಸಬೇಕಿದೆ ಎಂದರು.
ಶಿಕ್ಷಣ ಕೊಡಿಸುವಲ್ಲಿ ಹೆಣ್ಣು-ಗಂಡು ಎಂಬ ತಾರತಮ್ಯ ತೋರದೆ ಉನ್ನತ ಶಿಕ್ಷಣದಲ್ಲಿಯೂ ಸಹಾ ಹೆಣ್ಣುಮಕ್ಕಳ ಅಭಿರುಚಿಗೆ ತಕ್ಕಂತೆ ಶಿಕ್ಷಣ ನೀಡುವ ಮೂಲಕ ಹೆಚ್ಚಿನ ಪ್ರೋತ್ಸಾಹವನ್ನ ನೀಡಿ ಎಲ್ಲಾ ಕ್ಷೇತ್ರದಲ್ಲಿಯೂ ಆದರ್ಶ ಮಹಿಳೆಯಾಗಿ ಬೆಳೆಯಲು ಅವಕಾಶ ಕಲ್ಪಿಸಿಕೊಡುವ ಕಾರ್ಯವನ್ನು ಪ್ರತಿಯೊಬ್ಬ ಪೋಷಕರು ನಿರ್ವಾಹಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣದಲ್ಲಿ ಹೆಚ್ಚು ಅಂಕ ಪಡೆದ ಹಾಗೂ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ, ನಿವೃತ್ತ ಶಿಕ್ಷಕರಿಗೆ ಹಾಗೂ ವಿದ್ಯಾನಿಧಿಗೆ ಧನ ಸಹಾಯ ನೀಡಿದ ಗಣ್ಯರನ್ನು ಸನ್ಮಾನಿಸಲಾಯಿತು.
ಈ ವೇಳೆ ರಾಜ್ಯ ಉಪ್ಪಾರ ಸಂಘದ ಪ್ರಧಾನ ಕಾರ್ಯದರ್ಶಿ ಯು.ವೆಂಕೋಬಾ, ಶೆಟ್ಟಿಕೆರೆ ಜಿ.ಪಂ.ಸದಸ್ಯ ಕಲ್ಲೇಶ್, ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಪ್ರಭಾಕರಖೇಣಿ, ತಾಲ್ಲೂಕು ಭಗೀರಥ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ನಾಗೇಂದ್ರಪ್ಪ, ಸದಸ್ಯರಾದ ಯಲ್ಲಪ್ಪ, ನಾರಾಯಣಸ್ವಾಮಿ, ರವೀಂದ್ರನಾಥ್, ಶಿವಯ್ಯ ಹಾಗೂ ಮುಖಂಡರಾದ ಹನುಮಂತಪ್ಪ, ವೆಂಕಟಚಲಪತಿ ಶೆಟ್ರು, ನಂದಿಹಳ್ಳಿ ಶಿವಣ್ಣ ನಿವೃತ್ತ ಉಪನ್ಯಾಸಕ ಸಿದ್ಧಬಸವಯ್ಯ ಮತ್ತಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ