ಹುಳಿಯಾರು:ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜಾಗುವ ಘಟಕಕ್ಕೆ ಕಾಯಕಲ್ಪ ನೀಡಲಾಗುತ್ತಿದ್ದು ಇನ್ನು ಮೂರುತಿಂಗಳೊಳಗೆ ಶುದ್ಧ ಕುಡಿಯುವ ನೀರನ್ನು ಸಮರ್ಪಕವಾಗಿ ಒದಗಿಸಲಾಗುವುದೆಂದು ಹುಳಿಯಾರು ಗ್ರಾಮಪಂಚಾಯ್ತಿ ಅಧ್ಯಕ್ಷೆ ಗೀತಾ ಪ್ರದೀಪ್ ತಿಳಿಸಿದರು.
ಹುಳಿಯಾರು ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಬೋರನಕಣಿವೆ ಜಲಾಶಯದ ಬಳಿ ನೀರಿನ ಪೈಪ್ ಲೈನ್ ದುರಸ್ತಿಗೆ ಅಂದಾಜು ತಯಾರಿಸುತ್ತಿರುವ ಎಇಇ ರುದ್ರಮುನಿ ಅವರೊಂದಿಗೆ ಗ್ರಾಮಪಂಚಾಯ್ತಿ ಅಧ್ಯಕ್ಷೆ ಗೀತಾ ಪ್ರದೀಪ್,ಪಿಡಿಓ ಸಿದ್ಧರಾಮಣ್ಣ ಮತ್ತಿತರರು.
ಬೋರನಕಣಿವೆ ಜಲಾಶದಿಂದ ಹುಳಿಯಾರು ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಶುದ್ಧೀಕರಣ ಘಟಕದಲ್ಲಿನ ನಿತ್ಯ ಸಮಸ್ಯೆಯಿಂದಾಗಿ ಪಟ್ಟಣಕ್ಕೆ ನೀರು ಸರಬರಾಜಿನಲ್ಲಿ ಅಡಚಣೆ ಜೊತೆಗೆ ಅಶುದ್ಧ ನೀರು ಪೂರೈಕೆಯಾಗುತ್ತಿರುವ ಬಗ್ಗೆ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿತ್ತು.
ಕಳೆದ ವಾರ ಭದ್ರಾಮೇಲ್ದಂಡೆಯೋಜನೆಯ ಪರಿಸರ ಸಾರ್ವಜನಿಕ ಸಮಾರಂಭಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿಗಳು ಖುದ್ದಾಗಿ ತೆರಳಿ ನೀರು ಪೂರೈಕೆ ಘಟಕ ವೀಕ್ಷಿಸಿದ್ದರು.ಫಿಲ್ಟರ್ ಸಮಸ್ಯೆಯನ್ನುಕಣ್ಣಾರೆ ಕಂಡ ಜಿಲ್ಲಾಧಿಕಾರಿಗಳು ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.ಈ ನಿಟ್ಟಿನಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಕಾಯಕಲ್ಪಕ್ಕೆ ಮುಂದಾಗಿದೆ ಎಂದರು.
ಚಿಕ್ಕನಾಯಕನಹಳ್ಳಿಯ ಎಇಇ ರುದ್ರಮುನಿ ಅವರೊಂದಿಗೆ ತಾವು ಮತ್ತು ಪಿಡಿಓ ತೆರಳಿ ಅಲ್ಲಿನ ಸಮಸ್ಯೆಯನ್ನು ತೋರಿಸಿದ್ದಾಗಿ ಹೇಳಿದರು.
ಪರಿಶೀಲನೆ ನಡೆಸಿದ ಎಇಇ ರುದ್ರಮುನಿ ಅಂದಾಜು ಪಟ್ಟಿ ತಯಾರಿಸಿದ್ದು ಇನ್ನೆರಡು ತಿಂಗಳಿನೊಳಗೆ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಈ ಘಟಕ ಸ್ವಚ್ಛತೆಗೆ ವಾರಗಳ ಕಾಲ ಹಿಡಿಯುವುದಿದ್ದು ಸಾರ್ವಜನಿಕರು ಆ ಸಂದರ್ಭದಲ್ಲಿ ನೀರು ಸರಬರಾಜುನಲ್ಲಾಗುವ ವ್ಯತ್ಯಯಗಳಿಗೆ ಸಹಕರಿಸುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಪಿಡಿಓ ಸಿದ್ಧರಾಮಣ್ಣ,ಸಹಾಯಕ ಎಂಜಿನಿಯರ್ ಕಿರಣ್, ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
-------------
ಹುಳಿಯಾರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಒಟ್ಟು ೮೦ ಲಕ್ಷ ಅನುದಾನ ಬಿಡುಗಡೆಯಾಗಲಿದ್ದು ಮೊದಲ ಹಂತದಲ್ಲಿ ೪೦ ಲಕ್ಷ ಬಿಡುಗಡೆಯಾಗಲಿದೆ.ಈ ಮೊತ್ತದಲ್ಲಿ ಮೊದಲಿಗೆ ಬೋರನಕಣಿವೆ ಪಂಪ್ ಹೌಸ್ ಗೆ ೨೦ ಹೆಚ್.ಪಿಯ ೨ ಮೋಟರ್ ಹಾಗೂ ಬಳ್ಳೆಕಟ್ಟೆ ಪಂಪ್ ಹೌಸ್ ಗೆ ೨ ಹೊಸ ಮೋಟರ್ ಹಾಕಲಿದ್ದು ಜೊತೆಗೆ ಮಾರ್ಗದಲ್ಲಿ ಅಲ್ಲಲ್ಲೆ ಪದೇ ಪದೆ ಒಡೆದುಹೋಗುತ್ತಿರುವ ಪೈಪ್ ಮತ್ತು ಗೇಟ್‌ವಾಲ್ವ್, ನಾನ್ ರಿಟರ್ನ್ ವಾಲ್ವ್ ಗಳನ್ನು ಬದಲಿಸಿ ಸಮರ್ಪಕ ನೀರು ಸರಬರಾಜುವಿಗೆ ಕ್ರಮಕೈಗೊಳ್ಳಲಾಗುವುದು :ರುದ್ರಮುನಿ,ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಂಜಿನೀಯರ್
-------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ