ಹುಳಿಯಾರು: ಹುಳಿಯಾರಿನಲ್ಲಿ ದಸರಾ ಅಂಗವಾಗಿ ಕೆರೆ ಏರಿಯ ಮೇಲಿನ ಬನ್ನಿ ಮಂಟಪದ ಬಳಿ ಸಂಭ್ರಮದಿಂದ ಅಂಬಿನೋತ್ಸವ ನಡೆಯಿತು. ಅಂಬಿನೋತ್ಸವಕ್ಕೆ ಮೊದಲು ಪಟ್ಟಣದ ಶ್ರೀಬೀರಪ್ಪ ದೇವರು, ಗ್ರಾಮದೇವತೆ ಶ್ರೀ ದುರ್ಗಮ್ಮ, ಶ್ರೀ ಹುಳಿಯಾರಮ್ಮ ದೇವರುಗಳನ್ನು ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಬಳಿಗೆ ಕರೆ ತಂದು ವಿಶೇಷ ಪೂಜೆ ಸಲ್ಲಿಸಲಾಯಿತು.
ನಂತರ ಎಲ್ಲಾ ದೇವರುಗಳು ರಾಜ ಬೀದಿಯಲ್ಲಿ ಮೆರವಣಿಗೆಯಲ್ಲಿ ಹುಳಿಯಾರು ಕೆರೆ ಏರಿಯ ಮೇಲಿರುವ ಬನ್ನಿ ಮಂಟಪದ ಬಳಿಗೆ ಆಗಮಿಸಿದವು. ನಂತರ ಎಲ್ಲಾ ದೇವರುಗಳನ್ನು ಹಸಿರು ಚಪ್ಪರದಡಿ ಕೂರಿಸಿ ಅಂಬಿನೋತ್ಸವದ ಪೂಜ ಕೈಂಕರ್ಯಗಳನ್ನು ನಡೆಸಲಾಯಿತು. ಬನ್ನಿ ಮರದ ಬಳಿ ಬಾಳೆಕಂದನ್ನು ನೆಟ್ಟು ವಿಶೇಷ ಪೂಜೆ ನೆರವೇರಿಸಲಾಯಿತು.
ನಂತರ ಮೈಸೂರು ಪೇಟ, ಜರಿಪಂಚೆಯ ಸಾಂಪ್ರದಾಯಿಕ ಉಡುಗೆ ತೊಟ್ಟು ಬಂದ ಶಾನಬೋಗ ಕುಟುಂಬದ ಲಕ್ಷ್ಮೀನಾರಾಯಣ್ ಅವರನ್ನು ಬನ್ನಿ ಮಂಟಕ್ಕೆ ಸಕಲ ಶಿಷ್ಟಾಚಾರದೊಂದಿಗೆ ಕರೆತರಲಾಯಿತು. ಅರ್ಚಕರುಗಳಾದ ಗುಂಡಣ್ಣ, ಶೇಷಣ್ಣ, ಮಧು ಹಾಗೂ ತಳವಾರ ನಾಯಕರ ಸಮ್ಮುಖದಲ್ಲಿ ಬನ್ನಿ ಮರಕ್ಕೆ ಅಂಬನ್ನು ಹೊಡೆಸಲಾಯಿತು. ನೆರೆದಿದ್ದ ಸಾವಿರಾರು ಭಕ್ತರು ಹರ್ಷೋದ್ಘಾರದೊಂದಿಗೆ ಬನ್ನಿಯನ್ನು ಪರಸ್ಪರ ವಿನಿಮಯ ಮಾಡಿಕೊಂಡು ಬನ್ನಿ ಮರಕ್ಕೆ ಹಾಗೂ ಆಗಮಿಸಿದ್ದ ದೇವರುಗಳಿಗೆ ಪೂಜೆ ಹಾಗೂ ಹಣ್ಣುಕಾಯಿ ಮಾಡಿಸಿಕೊಂಡರು. ಶ್ರೀ ಬೀರದೇವರ ವೀರ ಮಕ್ಕಳ ಸೇವೆ ನಡೆಸಿ ಪೂಜೆ ಸಲ್ಲಿಸಿ ತೆರಳಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ