ಯೋಜನೆಯಿಂದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ೧೯ ಕೆರೆಗಳಿಗೆ ನೀರು: ೭೧ ಹಳ್ಳಿಗೆ ಲಾಭ
----------------------------------
ಹುಳಿಯಾರು: ಭದ್ರಾ ಮೇಲ್ದಂಡೆ ಯೋಜನೆಯ ಉದ್ದೇಶಿತ ೨ನೇ ಹಂತದ ಯೋಜನೆಯಲ್ಲಿ ತಾಲ್ಲೂಕಿನ ಗಡಿಭಾಗದ ಪ್ರದೇಶವಾದ ಹೆಗ್ಗೆರೆ ಗ್ರಾಮದ ಮುಖಾಂತರ ಪ್ರವೇಶಿಸುವ ಭದ್ರಾ ಯೋಜನೆಯ ನೀರಿನಿಂದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ೧೯ ಕೆರೆಗಳಿಗೆ ನೀರು ಹರಿಯಲಿದ್ದು ಒಟ್ಟು ೭೧ ಹಳ್ಳಿಗಳಿಗೆ ಈ ಯೋಜನೆಯಿಂದ ಲಾಭವಾಗಲಿದೆ ಎಂದು ಭದ್ರಾ ಮೇಲ್ದಂಡೆ ಯೋಜನೆಯ ಚೀಫ್ ಇಂಜಿನೀಯರ್ ಆರ್.ಚೆಲುವರಾಜು ತಿಳಿಸಿದರು.
ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ಭದ್ರಾಮೇಲ್ದಂಡೆ ಏತ ನೀರಾವರಿ ಯೋಜನೆ ಕುರಿತಂತೆ ನಡೆದ ಪರಿಸರ ಸಾರ್ವಜನಿಕ ಸಭೆಯಲ್ಲಿ ತುಮಕೂರು ಜಿಲ್ಲಾಧಿಕಾರಿ ಮೋಹನ್ ರಾಜ್ ಮಾತನಾಡಿದರು. |
ಭದ್ರಾಮೇಲ್ದಂಡೆ ಏತ ನೀರಾವರಿ ಯೋಜನೆ ಕುರಿತಂತೆ ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ಬುಧವಾರ ಮಧ್ಯಾಹ್ನ ತುಮಕೂರು ಜಿಲ್ಲಾಧಿಕಾರಿ ಮೋಹನ್ ರಾಜ್ ಅಧ್ಯಕ್ಷತೆಯಲ್ಲಿ ನಡೆದ ಪರಿಸರ ಸಾರ್ವಜನಿಕ ಸಭೆಯಲ್ಲಿ ಅವರು ಮಾಹಿತಿ ನೀಡಿದರು.
.ಸಭೆಯ ಮೊದಲಿಗೆ ಭದ್ರಾಮೇಲ್ದಂಡೆ ಯೋಜನೆಯ ಕರಡು ಪರಿಸರ ಅಘಾತ ಅಂದಾಜೀಕರಣ ವರದಿಯ ಸಾರಂಶವನ್ನು ಮಂಡಿಸಲಾಯಿತು. ಸದರಿ ಯೋಜನೆ ಉದ್ದೇಶ ಹಾಗೂ ಯೋಜನೆಯಿಂದ ತುಂಬಲಿರುವ ಕೆರೆಗಳ ಪಟ್ಟಿ ಹಾಗು ಹಂತ ೨ರ ಕಾಮಗಾರಿಯ ವಿಸ್ತೃತ ವರದಿ ನೀಡಲಾಯಿತು.
ಕುಡಿಯುವ ನೀರಿನ ಬೇಡಿಕೆ ಪೂರೈಸಲು ಹಾಗು ತುಮಕೂರು ಮತ್ತು ದಾವಣಗೆರೆ ಜಿಲ್ಲೆಗೆ ನೀರಾವಾರಿ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಹಾಲಿಯಿರುವ ಯೋಜನೆಯ ೧,೦೭,೨೬೫ ಹೆಕ್ಟೇರ್ ಪ್ರದೇಶದಿಂದ ೨,೨೫,೫೧೫ ಹೆಕ್ಟೇರ್ ಪ್ರದೇಶಕ್ಕೆ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ.ಭದ್ರಾ ಜಲಶಾಯದಿಂದ ೨೯,೯ ಟಿಎಂಸಿ ನೀರನ್ನು ಎತ್ತಿ ಚಿಕ್ಕಮಗಳೂರು, ಚಿತ್ರದುರ್ಗ ,ತುಮಕೂರು ಮತ್ತು ದಾವಣಗೆರೆ ಜಿಲ್ಲೆಯ ೭೮೭ ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹೊಸದುರ್ಗದಿಂದ ಹರಿದುಬರುವ ಭದ್ರಾ ಹೆಗ್ಗೆರೆ ಮೂಲಕ ಚಿಕ್ಕನಾಯಕನಹಳ್ಳಿಗೆ ಪ್ರವೇಶವಾಗಲಿದ್ದು ಅಲ್ಲಿಂದ ಹುಳಿಯಾರು ಹೋಬಳಿಯ ಮೋಟ್ಟಿಹಳ್ಳಿ, ಸಿಂಗಾಪುರ , ಯಳನಾಡು, ಹುಳಿಯಾರು, ಚಿಕ್ಕಬಿದರೆ, ತಿಮ್ಮನಹಳ್ಳಿ, ಗಾಣದಾಳು ಮಾರ್ಗವಾಗಿ ಬೆಳ್ಳಾರ ಮೂಲಕ ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಸೇರಲಿದೆ.
ಹುಳಿಯಾರು ಹೋಬಳಿಯ ಕೆರೆಸೂರಗೊಂಡನಹಳ್ಳಿ, ಹುಳಿಯಾರು, ತಿಮ್ಲಾಪುರ, ಮರೆನಾಡು, ಸಿಂಗಾಪುರ, ಯಳನಾಡು, ಕುರಿಹಟ್ಟಿ, ಕೆಂಕೆರೆ ತೊರೆಸೂರಗೊಂಡಹಳ್ಳಿ, ಬೋರನಕಣಿವೆ, ದಸೂಡಿ, ಗುರುವಾಪುರ, ಚಿಕ್ಕಬಿದರೆ ಕೆರೆಗಳಿಗೆ ನೀರು ಹರಿಯಲ್ಲಿದೆ ಎಂದು ಮಾಹಿತಿ ನೀಡಿದರು.
ನಂತರ ಸಾರ್ವಜನಿಕರ ಪರವಾಗಿ ರೈತಸಂಘದ ತಮ್ಮಡಿಹಳ್ಳಿ ಮಲ್ಲಿಕಣ್ಣ, ದಬ್ಬಗುಂಟೆ ರುದ್ರೇಶ್, ಯಳನಾಡಿನ ಗುರುಪ್ರಸಾದ್, ವೈ.ಆರ್.ಮಲ್ಲಿಕಾರ್ಜುನಯ್ಯ ಮತ್ತು ದಯಾನಂದ್, ಹುಳಿಯಾರು ಎಲ್.ಆರ್.ಚಂದ್ರಶೇಖರ್ ಮತ್ತಿತರರು ಮಾತನಾಡಿ ಯೋಜನೆಯ ಒಟ್ಟು ಕಾಲಾವಧಿ, ಯೋಜನೆಗೆ ಸ್ವಾಧೀನಕ್ಕೆ ಒಳಗಾಗುವ ಭೂಮಿಯ ವಿವರ, ರೈತರಿಗೆ ಸಿಗಲಿರುವ ಪರಿಹಾರದ ಮೊತ್ತ , ವಸತಿಕಳೆದುಕೊಳ್ಳಲಿರುವ ರೈತರಿಗೆ ಪುರ್ನವಸತಿ, ಹಾಗೂ ಕಾಲುವೆ ಹಾದುಹೋಗುವ ಜಾಗದಲ್ಲಿ ಕೆಲವೊಂದು ಗ್ರಾಮಗಳ ಕೆರೆಗಳನ್ನ ಕೈಬಿಟ್ಟಿರುವ ಬಗ್ಗೆ ಚರ್ಚೆ ನಡೆಸಿ ಜಿಲ್ಲಾಧಿಕಾರಿಗಳ ಗಮನ ಸೆಳೆದರು.
ಸಾರ್ವಜನಿಕರ ಅಕ್ಷೇಪಣೆಯನ್ನ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಪಿ.ಮೋಹನ್ ರಾಜ್ ಯೋಜನೆಯು ಇಲ್ಲಿನ ಪರಿಸರಕ್ಕೆ ಪೂರಕವಾಗಿದ್ದು ಯಾವುದೆ ಹಾನಿಯಾಗುವುದಿಲ್ಲ.ಭೂ ಸ್ವಾಧೀನ ಪಡಿಸಿಕೊಳ್ಳುವ ರೈತರಿಗೆ ೨೦೧೩ರ ಹೊಸ ಕಾಯ್ದೆಯಂತೆ ಪರಿಹರ ನೀಡಲಾಗುವುದು.ಕೆಲವೊಂದು ಗ್ರಾಮಗಳ ಕೆರೆಯನ್ನು ತುಂಬಿಸಲು ಅವಕಾಶವಿದ್ದಾಗ್ಯೂ ಕೈಬಿಟ್ಟಿರುವುದನ್ನು ಮತ್ತೆ ಸೇರ್ಪಡೆ ಮಾಡುವಂತೆ ಸಲಹೆ ನೀಡಿದರು. ರೈತರಿಗೆ ಸಮರ್ಪಕವಾದ ಮಾಹಿತಿ ನೀಡುವುದು ನಿಮ್ಮಗಳ ಜವಬ್ದಾರಿಯಾಗಿದ್ದು ಮತ್ತೊಂದು ಸಭೆ ನಡೆಸಿ ಯೋಜನೆಯಿಂದ ಬಾಧಿತವಾಗಲಿರುವ ಗ್ರಾಮಗಳ ಬಗ್ಗೆ ಮಾಹಿತಿ ನೀಡುವಂತೆ ಹಾಗೂ ಭೂಸ್ವಾಧಿನದ ಬಗ್ಗೆ ತಾಲ್ಲೂಕ್ ವ್ಯಾಪ್ತಿಯಲ್ಲಿ ಕಛೇರಿ ತೆರೆಯುವಂತೆ ತಿಳಿಸಿದರು.
ಸಭೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನೀಯರ್ ಆರ್.ಚೆಲುವರಾಜು,ಯೋಜನಾಧಿಕಾರಿ ಎಸ್.ಎಲ್.ಮೋಹನ್ ಕುಮಾರ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ಎಂ.ಕೆ.ಪ್ರಭುದೇವ್, ತುಮಕೂರು ಪ್ರಾದೇಶಿಕ ಅಧಿಕಾರಿ ಭೀಮಸಿಂಗ್ ಗೋಗಿ, ಉಪವಿಭಾಗಾಧಿಕಾರಿ ಪ್ರಜ್ಞಾ ಅಮ್ಮೆಂಬಳ, ತಹಸೀಲ್ದಾರ್ ಗಂಗೇಶ್, ಜಿ.ಪಂ.ಸದಸ್ಯ ಸಿದ್ದರಾಮಣ್ಣ, ಗ್ರಾಪಂ ಅಧ್ಯಕ್ಷೆ ಗೀತಾಪ್ರದೀಪ್, ಉಪಾಧ್ಯಕ್ಷ ಗಣೇಶ್ ಸೇರಿದಂತೆ ಗ್ರಾಪಂ ಸದಸ್ಯರು, ರೈತಸಂಘದ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.
-----------------
ಭದ್ರಾ ಮೇಲ್ದಂಡೆ ಯೋಜನೆಯಿಂದ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಹೋಬಳಿಯಲ್ಲಿಯೇ ಹೆಚ್ಚಿನ ನೀರು ಹರಿಯಲಿದ್ದು. ೧೯ ಕೆರೆಗಳು ನೀರು ತುಂಬಲಿದ್ದು ಒಟ್ಟು ೭೧ ಹಳ್ಳಿಗಳು ಈ ಯೋಜನೆ ಲಾಭವನ್ನು ಪಡೆಯಲಿವೆ.
-------------------
ಹುಳಿಯಾರು ಹೊರತುಪಡಿಸಿದರೆ ಹೋಬಳಿಯ ಇನ್ನಿತರ ೯ ಗ್ರಾಪಂ ವ್ಯಾಪ್ತಿಯ ಯಾವುದೆ ಹಳ್ಳಿಗಳಿಗೆ ಮಾಹಿತಿ ತಿಳಿಸಿಲ್ಲ. ಸದರಿ ಗ್ರಾಮದ ರೈತರುಗಳಿಗೆ ಯೋಜನೆ ಬಗ್ಗೆ ಮತ್ತೊಂದು ಸಭೆ ನಡೆಸಿ ಮಾಹಿತಿ ನೀಡಿ.ಯೋಜನೆ ಹಾದುಹೋಗಲಿರುವ ಗ್ರಾಮಗಳ ನಕ್ಷೆ ನೀಡಿ : ರುದ್ರೇಶ್, ಕೃಷಿ ಮಾರುಕಟ್ಟೆ ನಿದೇರ್ಶಕ .
------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ