ಗಲಾಟೆಯಲ್ಲಿ ಮಾತನಾಡಲು ಅವಕಾಶವಾಗದೆ ಸಭೆಯಿಂದ ಹೊರನಡೆದ ಮಹಿಳಾ ಸದಸ್ಯರು
----------------------------
ಹುಳಿಯಾರು : ಗ್ರಾ.ಪಂ.ಗೆ ಅಂಟಿದ ಶಾಪವೇನೋ ಎಂಬಂತೆ ಇಲ್ಲಿ ನಡೆಯುವ ಯಾವುದೇ ಸಭೆಗಳು ಎಂದೂ ಶಾಂತ ರೀತಿಯಲ್ಲಿ ನಡೆಯುವುದಿಲ್ಲ. ಅದೇ ರೀತಿ ಬುಧವಾದಂದು ಗೀತಾ ಪ್ರದೀಪ್ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಭೆಯೂ ಇದಕ್ಕೆ ಹೊರತಾಗದೆ ಸಭೆಯ ಪ್ರಾರಂಭದಿಂದಲೂ ಅಂತ್ಯದವರೆಗೂ ಗಲಾಟೆ,ಗದ್ದಲ ಮಾತಿನ ಚಕಮಕಿಯಲ್ಲೇ ನಡೆದು ಕಡೆಗೆ ಗಲಾಟೆಯಲ್ಲಿ ಮಾತನಾಡಲು ಅವಕಾಶವಾಗದೆ ಸಭೆಯಿಂದ ಮಹಿಳಾ ಸದಸ್ಯರು ನಿರ್ಗಮಿಸಿದ್ದು ಇದಕ್ಕೆ ಇಂಬು ಕೊಡುವಂತಿತ್ತು.
ಜಮಾಖರ್ಚಿನ ವಿವರ ಸೇರಿದಂತೆ ಕುಡಿಯುವ ನೀರಿನ ಸಮಸ್ಯೆ,ಬೋರನಕಣಿವೆ ಪೈಪ್ ಲೈನ ದುರಸ್ತಿ ,ವಿವಿಧ ವಾರ್ಡುಗಳಲ್ಲಿನ ಕೈಪಂಪು ರಿಪೇರಿ,ಬಡಾವಣೆಗಳಲ್ಲಿನ ಕಸ ವಿಲೇವಾರಿ,೧೪ ನೇ ಹಣಕಾಸು ಯೋಜನೆ ಕಾಮಗಾರಿಗಳ ಬಗ್ಗೆ ಚರ್ಚಿಸಲು ಬುಧವಾರದಂದು ಗ್ರಾಪಂ ಅಧ್ಯಕ್ಷೆ ಗೀತಾ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿತ್ತು.
ಸಭೆಯಲ್ಲಿ ಕೈಗೊಂಡ ನಿರ್ಣಯಗಳು:ನಾಯಿ ಹಾಗೂ ಹಂದಿ ಕಾಟ ವಿಪರೀತವಾಗಿದ್ದು ಓಡಾಡಲು ಭಯ ಪಡುವ ಸ್ಥಿತಿಯಿದ್ದು ನಾಯಿಗಳನ್ನು ಹಿಡಿಸಲು ಮಿತಿಮೀರಿರುವ ಹಂದಿಗಳನ್ನು ಊರಾಚೆ ಸಾಗಿಸುವಂತೆ ಸೂಚಿಸಲು ತೀರ್ಮಾನಿಸಲಾಯಿತು.
ಚರಂಡಿ ಸ್ವಚ್ಚಗೊಳಿಸಲು ಹಾಗೂ ಬೀದಿಬದಿಯಲ್ಲಿನ ಕಸ ಸಾಗಿಸಲು ಟ್ರಾಕ್ಟರ್ ಬಳಸಿಕೊಂಡು ಊರಾಚೆ ಕಸ ಸಾಗಿಸಲು ಒಪ್ಪಲಾಯಿತು.
ರಾಂಗೋಪಾಲ್ ಸರ್ಕಲ್ ಹಾಗೂ ಪೆಟ್ರೋಲ್ ಬಂಕ್ ಬಳಿಯಿರುವ ಹೈಮಾಸ್ಟ್ ದೀಪವನ್ನು ಸರಿಪಡಿಸಲು ಸೂಚಿಸಲಾಯಿತು.ಕರವಸೂಲಿಗಾರರನ್ನು ಕರೆಸಿ ಕರವಸೂಲಿಮಾಡಲು ಟಾರ್ಗೆಟ್ ಫಿಕ್ಸ್ ಮಾಡಲಾಯಿತು. ಸಿಬ್ಬಂದಿಗಳ ವೇತನ ಹಾಗೂ ಸದಸ್ಯರ ಗೌರವಧನ ವಿತರಣೆ ಮಾಡಲು ಒಪ್ಪಲಾಯಿತು.
ಪಂಚಾಯ್ತಿ ಸಿಬ್ಬಂದಿಯಲ್ಲಿನ ಸಾಧಿಕ್,ಬಿಲ್ ಕಲೆಕ್ಟರ್ ಆನಂದ್ ಮತ್ತು ಮಂಜುಳಾ ಎಂಬುವವರು ಸರಿಯಾಗಿ ಕರ್ತವ್ಯ ನಿರ್ವಹಿಸದ ಹಿನ್ನಲೆಯಲ್ಲಿ ಸಂಬಳ ತಡೆಹಿಡಿಯುವಂತೆ ಆದೇಶಿಸಲಾಯಿತು.ಕಳೆದ ಕೆಲ ತಿಂಗಳ ಹಿಂದೆ ಸಾವನ್ನಪ್ಪಿದ್ದ ಪೌರಕಾರ್ಮಿಕ ಮರಿರಂಗಯ್ಯನ ಕುಟುಂಬಕ್ಕೆ ಅನುಕಂಪದ ಆಧಾರದ ಮೇಲೆ ಅದೇ ಕೆಲಸ ಕೊಡಲು ಒಪ್ಪಿಗೆ ಪಡೆಯಲಾಯಿತು.
ನಡೆದ ಚರ್ಚೆ: ವಾಸವಿ ಶಾಲೆಯ ಬಳಿಯಿರುವ ಮಾರ್ಚುರಿ ಜಾಗವು ಪಂಚಾಯ್ತಿ ಸ್ವತ್ತಾಗಿದ್ದು ಇದನ್ನು ಕುರುಬ ಸಮಾಜಕ್ಕೆ ನೀಡಿರುವದಕ್ಕೆ ದಾಖಲೆಗಳನ್ನು ನೀಡುವಂತೆ ಸದಸ್ಯ ಕೋಳಿ ಶ್ರೀನಿವಾಸ್ ಕೇಳಿದರು.ಹದಿನೈದು ವರ್ಷಗಳ ಹಿಂದೆ ನೀಡಲಾಗಿದ್ದು ಎನ್ನಲಾಗಿರುವ ಜಾಗವನ್ನು ಈ ಹಿಂದೆ ಅಧ್ಯಕ್ಷರಾಗಿದ್ದವರು ಅಂಗನವಾಡಿಗೆ ನೀಡಿ ನಿರ್ಣಯ ಮಾಡಿದ್ದು ಸದರಿ ಜಾಗದ ಬಗ್ಗೆ ವಿವರವಾದ ದಾಖಲೆಗಳು ಬೇಕೆಂದರು.
ಬಸ್ ನಿಲ್ದಾಣದಲ್ಲಿನ ಕೋಳಿಅಂಗಡಿಗಳವರು ಹಾಗೂ ಆಸ್ಪತ್ರೆ ಮತ್ತು ಕ್ಲಿನಿಕ್ ತ್ಯಾಜ್ಯವನ್ನು ಕೆರೆಅಂಗಳಕ್ಕೆ ತಂದು ಬಿಸಾಡುತ್ತಿದ್ದು ಈ ಬಗ್ಗೆ ಅವರಿಗೆ ಹಲವಾರು ಬಾರಿ ತಿಳಿಹೇಳಿದರೂ ಸಹ ಪುನರಾವರ್ತನೆ ಮಾಡುತ್ತಿರುವ ಕಾರಣ ಅವರಿಗೆ ನೋಟೀಸ್ ನೀಡುವಂತೆ ಸದಸ್ಯ ಹೇಮಂತ್ ಒತ್ತಾಯಿಸಿದರು.
ಒಟ್ಟಾರೆ ಕೆಲವೊಂದು ನಿರ್ಣಯಗಳನ್ನು ಕೈಗೊಳ್ಳಲಾಯಿತಾದರೂ ಆರಂಭದಿಂದಲೂ ನಡೆದ ಗದ್ದಲಕ್ಕೆ ಬೇಸತ್ತ ಮಹಿಳಾ ಸದಸ್ಯರು ನಮಗೆ ಮಾತಾಡಲಿಕ್ಕೆ ಅವಕಾಶ ನೀಡದೆ ಗಲಾಟೆ ಮಾಡುತ್ತಿರುವುದು ಸರಿಯಲ್ಲವೆಂದು ಕಡೆಯ ಕ್ಷಣದಲ್ಲಿ ಸಭೆಯಿಂದ ಹೊರನಡೆದರು.
ಉಪಾಧ್ಯಕ್ಷ ಗಣೇಶ್,ಪಿಡಿಓ ಸಿದ್ಧರಾಮಯ್ಯ,ಕಾರ್ಯದರ್ಶಿ ಉಮಾಮಹೇಶ್ ಸೇರಿದಂತೆ ಸರ್ವ ಸದಸ್ಯರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ