ಕಳೆದ ಒಂದು ವಾರದಿಂದ ಹುಳಿಯಾರಿನ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿದ್ದ ರಾಜ್ಯ ಮಟ್ಟದ ಭಜನೆಯ ಅಂತಿಮ ಸ್ಪರ್ಧೆಯಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಶ್ರೀನಿಧಿ ಭಜನಾ ಮಂಡಳಿ ಪ್ರಥಮ ಸ್ಥಾನಕ್ಕೆ ಭಾಜನವಾಗಿದೆ
ಹುಳಿಯಾರಿನಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಚನ್ನರಾಯಪಟ್ಟಣದ ಶ್ರೀನಿಧಿ ಭಜನಾ ಮಂಡಳಿ ತಂಡಕ್ಕೆ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಶ್ರೀ ಪುರುಷೋತ್ತಮನಂದಪುರಿ ಸ್ವಾಮೀಜಿ ಬಹುಮಾನ ವಿತರಿಸಿದರು. |
ಹುಳಿಯಾರಿನ ಶ್ರೀ ಪ್ರಸನ್ನ ಗಣಪತಿ ಸೇವಾ ಛಾರಿಟಬಲ್ ಟ್ರಸ್ಟ್ ಇವರ ಆಶ್ರಯದಲ್ಲಿ ಶ್ರೀ ತಿರುಮಲ-ತಿರುಪತಿ ದಾಸ ಸಾಹಿತ್ಯ ಪ್ರಾಜೆಕ್ಟ್ ಹಾಗೂ ಹುಳಿಯಾರಿನ ಸಮಸ್ತ ಭಜನಾ ಮಂಡಳಿಗಳ ಸಹಕಾರದೊಂದಿಗೆ ಒಂದು ವಾರಗಳ ಕಾಲ ಏರ್ಪಡಿಸಿರುವ ಈ ಸ್ಪರ್ಧೆಗೆ ೭ ಜಿಲ್ಲೆಗಳಿಂದ ಒಟ್ಟು ೨೮ ತಂಡಗಳು ಭಾಗವಹಿಸಿದ್ದವು.
ಕೋಲಾಟದ ಭಜನೆ, ರೂಪಕ ಭಜನೆ, ಗಾಯನ ಭಜನೆ ಹೀಗೆ ಒಂದೊಂದು ತಂಡವೂ ಒಂದೊಂದು ತರಹದ ಕಲಾಪ್ರಕಾರದೊಂದಿಗೆ ವಿಶಿಷ್ಟ ಹಾಗೂ ವಿಭಿನ್ನ ರೀತಿಯಲ್ಲಿ ಪ್ರದರ್ಶನ ನೀಡಿ ನೆರೆದಿದ್ದ ಭಜನಾಸಕ್ತರ ಮನ ಸೂರೆಗೊಂಡಿದ್ದರು.
೨೮ ತಂಡಗಳ ಪೈಕಿ ನಾಗಮಂಗಲದ ಶ್ರೀವಾಸವಿ ಭಜನಾ ಮಂಡಳಿ, ತುಮಕೂರಿನ ತಿರುಮಲಾ ಭಜನಾ ಮಂಡಳಿ, ಚನ್ನರಾಯಪಟ್ಟಣದ ಶ್ರೀನಿಧಿ ಭಜನಾ ಮಂಡಳಿ, ಕಡೂರಿನ ಶ್ರೀವಾರಿ ಭಜನಾ ಮಂಡಳಿ, ಬುಕ್ಕಾಪಟ್ಟಣದ ಶ್ರೀವಾರಿ ಭಜನಾ ಮಂಡಳಿ, ಹಾಸನದ ಶ್ರೀಶೈಲವಲ್ಲಭ ಭಜನಾ ಮಂಡಳಿಗಳ ನಡುವೆ ಪ್ರಥಮ,ದ್ವಿತೀಯ ಹಾಗೂ ತೃತೀಯ ಸ್ಥಾನಕ್ಕೆ ಸ್ಪರ್ಧೆ ಏರ್ಪಾಡಾಗಿತ್ತು.
ಫೈನಲ್ ನಲ್ಲಿ ಮನೋಜ್ಞವಾದ ರೂಪಕಾಭಿನಯ, ಸುಶ್ರಾವ್ಯ ಭಜನಾ ಗಾಯನದ ಮೂಲಕ ನೆರೆದಿದ್ದ ಜನಸಾಗರವನ್ನು ಮಂತ್ರಮುಗ್ದರನ್ನಾಗಿಸಿದ ಚನ್ನರಾಯಪಟ್ಟಣದ ಶ್ರೀನಿಧಿ ಭಜನಾ ಮಂಡಳಿ ಪ್ರಥಮ ಸ್ಥಾನಕ್ಕೆ ಭಾಜನವಾಗಿ ೧೦ ಸಾವಿರ ರೂ. ನಗದು ಹಾಗೂ ಆಕರ್ಷಕ ಟ್ರೋಫಿ ಪಡೆದುಕೊಂಡಿತು. ಬುಕ್ಕಾಪಟ್ಟಣದ ಶ್ರೀವಾರಿ ಭಜನಾ ಮಂಡಳಿ ದ್ವಿತೀಯ ಸ್ವಾನ ಗಳಿಸಿ ೭ ಸಾವಿರ ರೂ. ನಗದು ಹಾಗೂ ಕಡೂರಿನ ಶ್ರೀವಾರಿ ಭಜನಾ ಮಂಡಳಿ ತೃತೀಯ ಸ್ಥಾನ ಪಡೆದು ೫ ಸಾವಿರ ರೂ. ನಗದು ಬಹುಮಾನ ಪಡೆದುಕೊಂಡರು.
ದ್ವಿತೀಯ ಸ್ಥಾನ ಪಡೆದ ಬುಕ್ಕಾಪಟ್ಟಣದ ಶ್ರೀವಾರಿ ಭಜನಾ ಮಂಡಳಿ |
ಉಳಿದಂತೆ ತುಮಕೂರಿನ ತಿರುಮಲಾ ಭಜನಾ ಮಂಡಳಿ, ಹಾಸನದ ಶ್ರೀಶೈಲವಲ್ಲಭ ಭಜನಾ ಮಂಡಳಿ, ನಾಗಮಂಗಲದ ಶ್ರೀವಾಸವಿ ಭಜನಾ ಮಂಡಳಿ ಸಮಾಧಾನಕರ ಬಹುಮಾನವಾಗಿ ೧ ಸಾವಿರ ರೂ. ನಗದು ಬಹುಮಾನ ಪಡೆದುಕೊಂಡರು.
ಹೊಸದುರ್ಗ ಕಾಗೀನೆಲೆ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಹೊಸದುರ್ಗ ಭಗೀರಥ ಪೀಠದ ಶ್ರೀ ಪುರುಷೋತ್ತಮನಂದಪುರಿ ಸ್ವಾಮೀಜಿ ಉಪಸ್ಥಿತಿಯಲ್ಲಿ ಶ್ರೀ ಪ್ರಸನ್ನ ಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಡಿ.ಎಸ್.ಮೋಹನ್‌ಕುಮಾರ್ ಭಜನಾ ಕಲಾವಿದರಾದ ಎಚ್.ಎಸ್.ರಮೇಶ್ ಸ್ವಾಮಿ, ಗಾಯಿತ್ರಿರಮೇಶ್, ಲಕ್ಷ್ಮೀಸುಬ್ರಹ್ಮಣ್ಯ, ಶಾಂತ, ರಾಜಕಮಲ, ಪ್ರತಿಭಾ, ರೇಖಾ, ಮಮತಗೋಪಾಲ್, ಕುಮಾರಿ ಸೌಮ್ಯ ಅವರುಗಳು ವಿಜೇತರಿಗೆ ಬಹುಮಾನ ವಿತರಿಸಿದರು.
ತೀಪುಗಾರರಾಗಿ ಬಿ.ಗೋಪಾಲಸ್ವಾಮಿ, ಶಾಂತಲಾ, ಲಕ್ಷ್ಮೀರಾಮಚಂದ್ರ, ಸಾವಿತ್ರಮ್ಮ, ಲಕ್ಷ್ಮೀಅನಂತರಾಮಣ್ಣ ಅವರುಗಳು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ