ಹುಳಿಯಾರು: ಬೋರನಕಣಿವೆಯಿಂದ ಹುಳಿಯಾರು ಪಟ್ಟಣಕ್ಕೆ ಸರಬರಾಜಾಗುವ ಶುದ್ಧ ನೀರು ಘಟಕದ ಸಮಸ್ಯೆ ಬಗೆಹರಿಸಿ ಜನತೆಗೆ ಶುದ್ಧೀಕರಿಸಿದ ನೀರು ಪೂರೈಕೆ ಮಾಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳು ವುದಾಗಿ ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ತಿಳಿಸಿದರು.
ಹುಳಿಯಾರಿನಲ್ಲಿ ನಡೆದ ಭದ್ರಾ ಮೇಲ್ದಂಡೆ ಏತ ನೀರಾವರಿ ಯೋಜನೆ ಹಂತ-೨ರ ಸಾರ್ವಜನಿಕ ಪರಿಸರ ಸಭೆಯ ನಂತರ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು ಹುಳಿಯಾರಿಗೆ ಸರಬರಾಜಾಗುವ ಕಾರೇಹಳ್ಳಿ ಬಳಿಯಿರುವ ಕುಡಿಯುವ ನೀರಿನ ಘಟಕವನ್ನ ನವೀಕರಿಸುವ ಕುರಿತಂತೆ ಮಾಡಿದ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಸದಸ್ಯರೊಂದಿಗೆ ನೀರು ಪೂರೈಕೆಯಾಗುವ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಇಲ್ಲಿನ ಸಮಸ್ಯೆ ಬಗ್ಗೆ ಗ್ರಾಪಂ ಅಧ್ಯಕ್ಷರು ಹಾಗು ಪಿಡಿಓ ಮತ್ತು ಸದಸ್ಯರು ಸಮಸ್ಯೆ ಬಗ್ಗೆ ಗಮನ ಸೆಳೆದರು. ಬೋರನಕಣಿವೆಯಿಂದ ಹುಳಿಯಾರಿಗೆ ಕುಡಿಯುವ ನೀರಿಗಾಗಿ ಮಾಡಲಾಗಿರುವ ಪೈಪ್ ಲೈನ್ ಐದು ವರ್ಷಗಳಷ್ಟು ಹಳೆಯದಾಗಿದ್ದು ಸಾಕಷ್ಟು ಕಡೆ ಪೈಪ್ ಹೊಡೆದು ನೀರು ಪೋಲಾಗುತ್ತಿದೆ. ಅಲ್ಲದೆ ನೀರುಎತ್ತಲು ಬಳಸುವ ಮೋಟಾರ್ ಪದೆ ಪದೇ ಸುಟ್ಟು ಕೆಟ್ಟು ಹೋಗುತ್ತಿರುವುದರಿಂದ ನೀರು ಸರಬರಾಜಿಗೆ ತೊಂದರೆಯಾಗುತ್ತಿದೆ.
ಶುದ್ಧಿಕರಣ ಘಟಕ ಕೂಡ ಹಳೆಯದಾಗಿದ್ದು ಇದನ್ನು ಮಾರ್ಪಡಿಸುವ ಅಗತ್ಯವಿದೆ ಎಂದು ಅಧ್ಯಕ್ಷೆ ಗೀತಾಪ್ರದೀಪ್ ಒತ್ತಾಯಿಸಿದರು.
ಸ್ವತಹ ಘಟಕವನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ನೀರು ಶುದ್ಧಿಕರಣವಾಗದೆ ಹುಳಿಯಾರು ಪಟ್ಟಣಕ್ಕೆ ಪೂರೈಕೆಯಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿ ಈ ನೀರು ಯೋಗ್ಯವಲ್ಲವಾದ್ದರಿಂದ ಕುಡಿಯುವುದಕ್ಕೆ ಬಳಕೆಯಾಗದೆ ಕೇವಲ ಗೃಹಪಯೋಗಿ ಕೆಲಸಗಳಿಗೆ ಮಾತ್ರ ಜನರು ಬಳಸುತ್ತಿದ್ದಾರೆ. ಕೂಡಲೆ ಶುದ್ಧ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಡಾ.ಪ್ರಜ್ಞಾ ಅಮ್ಮೆಂಬಳ, ತಹಸೀಲ್ದಾರ್ ಗಂಗೇಶ್, ಉಪತಹಸೀಲ್ದಾರ್ ಸತ್ಯನಾರಾಯಣ್, ಜಿಪಂ ಸದಸ್ಯ ಸಿದ್ಧರಾಮಣ್ಣ, ಪಿಡಿಓ ಸಿದ್ದರಾಮಣ್ಣ, ಸದಸ್ಯರಾದ ದಯಾನಂದ್, ಸಿದ್ಧಗಂಗಮ್ಮ, ಎಲ್.ಆರ್.ಚಂದ್ರಶೇಖರ್, ಡಿಶ್ ಬಾಬು, ವೆಂಕಟೇಶ್. ಶ್ರೀನಿವಾಸ್, ಮತ್ತಿತರರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ