ಹುಳಿಯಾರು:ಹಿಂದುಳಿದಿರುವ ಪ್ರದೇಶವೆಂಬ ಹಣೆಪಟ್ಟಿಯಿರುವ ಹುಳಿಯಾರಿನ ಅಭಿವೃದ್ಧಿಗೆ ತಾನು ಕಟ್ಟಿಬದ್ಧನಾಗಿದ್ದು ಆ ನಿಟ್ಟಿನಲ್ಲಿ ಹುಳಿಯಾರು ಗ್ರಾಪಂ ಯನ್ನ ಪಟ್ಟಣಪಂಚಾಯ್ತಿಮಾಡುವುದು ನನ್ನ ಆದ್ಯ ಕರ್ತವ್ಯವೆಂದು ಸಂಸದ ಮುದ್ದ ಹನುಮೇಗೌಡ ತಿಳಿಸಿದರು.
ಹುಳಿಯಾರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಶಂಕುಸ್ಥಾಪನೆ ಹಾಗೂ ವಿಜಯನಗರ ಬಡವಣೆಯಲ್ಲಿ ಅಂಗನವಾಡಿ ಶಂಕುಸ್ಥಾಪನೆ ನೇರವೆರಿಸಿ ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಹುಳಿಯಾರು ಪಟ್ಟಣ ಪಂಚಾಯ್ತಿಯಾಗುವ ಬಗ್ಗೆ ತಾವು ಮುಖ್ಯಮಂತ್ರಿಗಳೊಂದಿಗೆ ಹಾಗೂ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಒಪ್ಪಿಗೆ ಪಡೆದಿದ್ದು ಸಚಿವ ಸಂಪೂಟದ ಅನುಮೋದನೆಯಷ್ಟೆ ಬಾಕಿ ಉಳಿದಿದೆ ಎಂದರು.
ಸಂಸದರ ನಡೆ ಹಳ್ಳಿಗಳ ಕಡೆ ಎಂಬ ಪರಿಕಲ್ಪನೆಯಡಿಯಲ್ಲಿ ಜನರ ಸಮಸ್ಯೆಗಳನ್ನ ಖುದ್ದಾಗಿ ಆಲಿಸಿ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ನಾನೇ ನೇರವಾಗಿ ಜನರ ಬಳಿಗೆ ಹೋಗುತ್ತಿದ್ದು , ಕ್ಷೇತ್ರ ವ್ಯಾಪ್ತಿಯ ಎಲ್ಲಾ ಹಳ್ಳಿಗೆ ಪಕ್ಷದ ಮುಖಂಡರು, ಸದಸ್ಯರೊಂದಿಗೆ ತೆರಳಿ ಅಹವಾಲು ಸ್ವೀಕರಿಸುತ್ತಿರುವುದಾಗಿ ತಿಳಿಸಿದರು.
ಇಂದು ನನ್ನ ಅನುದಾನದಲಿ ಚಿಕ್ಕನಾಯಕನಹಳ್ಳಿ ವಿಧಾನ ಸಭಾ ವ್ಯಾಪ್ತಿಯಲ್ಲಿ ೧೭ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೇರವೇರಿಸಿದ್ದು ಬಹುತೇಕ ಕಡೆ ಶುದ್ಧ ನೀರಿನ ಘಟಕಕ್ಕೆ ಅದ್ಯತೆ ನೀಡಲಾಗಿದೆ. ಹುಳಿಯಾರಿನಲ್ಲಿನ ನೀರಿನ ಸಮಸ್ಯೆ ತಿಳಿದಿದ್ದು ಮುಂದಿನ ದಿನದಲ್ಲಿ ಈ ಭಾಗದಲ್ಲಿ ಇನ್ನಷ್ಟು ಶುದ್ಧನೀರಿನ ಘಟಕ ಸ್ಥಾಪಿಸಲು ಮುಂದಾಗುವುದಾಗಿ ತಿಳಿಸಿದರು. ಹುಳಿಯಾರಿನ ಅಂಛೇಕಛೇರಿಗೆ ಸ್ವಂತ ಕಟ್ಟಡಕ್ಕೆ ಅನುದಾನ,ಹುಳಿಯಾರು ಮತ್ತು ನಿರುವಗಲ್ ನಲ್ಲಿ ಅಂಗನವಾಡಿ, ಕಂದಿಕೆರೆ ಹೋಬಳಿಯಲ್ಲಿ ಪೋಸ್ಟ್ ಆಫಿಸ್ ಮತ್ತು ಹಾಲು ಉತ್ಪಾದಕರ ಸಂಘದ ಕಟ್ಟಡಕ್ಕೆ ಹಾಗೂ ಉಳಿದೆಡೆ ಶುದ್ಧನೀರಿನ ಘಟಕದ ಶಂಕುಸ್ಥಾಪನೆ ನೆರವೇರಿಸಿರುವುದಾಗಿ ತಿಳಿಸಿದರು.ಪಶುವೈದ್ಯಕೀಯ ಇಲಾಖೆಯಿಂದ ಲೋಕಸಭಾ ಕ್ಷೇತ್ರಕ್ಕೆ ದೊರೆಯಲ್ಲಿರುವ ಸಂಚಾರಿ ಪಶು ಚಿಕಿತ್ಸಾ ಸೌಲಭ್ಯವನ್ನು ಹಂದನಕೆರೆಗೆ ದೊರಕಿಸಿಕೊಡುವುದಾಗಿ ತಿಳಿಸಿದರು.
ಹೇಮಾವತಿ ಯೋಜನೆಯ ಮೂಲಕ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸುವ ಕೆಲಸ ಚುರುಕಾಗಬೇಕಿದೆ ಎಂದ ಅವರು ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕೂಡ ಈ ಭಾಗದ ಕೆರೆಗಳಿಗೆ ನೀರು ಹರಿಯುವುದರಿಂದ ಈ ಭಾಗದ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದರು.ಹುಳಿಯಾರಿನ ಬೀರಲಿಂಗೇಶ್ವರ ಸ್ವಾಮಿಯ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡುವುದಲ್ಲದೆ ರಾಜ್ಯ ಸರ್ಕಾರದಿಂದ ದೊರೆಯುವ ಸೌಲಭ್ಯ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.
ರಾಷ್ಟಿಯ ಹೆದ್ದಾರಿ ೨೩೪ ಹುಳಿಯಾರಿನಿಂದ ಶಿರಾದವರೆಗೆ ೨೫೫ ಕೋಟಿ ರೂಗಳಿಗೆ ಟಂಡರ್ ಆಗಿದ್ದು ೨೦೦ ಕೋಟಿ ರಸ್ತೆ ನಿರ್ಮಾಣಕ್ಕೆ ಹಾಗೂ ೫೫ ಕೋಟಿ ಭೂಸ್ವಾಧೀನದ ಪರಿಹಾರಕ್ಕೆ ಮೀಸಲಿಟ್ಟಿರುವುದಗಿ ತಿಳಿಸಿದರು.ಹುಳಿಯಾರು, ಹೊಯ್ಸಳಕಟ್ಟೆ ಹೊನ್ನೇನಹಳ್ಳಿಗಳಲ್ಲಿ ೪ ಪಥದ ರಸ್ತೆಗಳು ನಿರ್ಮಾಣಗೊಳಲಿದ್ದು ಉಳಿದೆಡೆ ೨ ಪಥದ ರಸ್ತೆಗಳಾಗಲಿದೆ ಎಂದರು.ಬರುವ ನವೆಂಬರ್ ತಿಂಗಳಿನಲ್ಲಿ ಹೆದ್ದಾರಿ ಕಾಮಗಾರಿಯ ಶಂಕುಸ್ಥಾಪನೆ ನೆರವೇರಲಿದ್ದು ಕೇಂದ್ರ ಭೂ ಸಾರಿಗೆ ಸಚಿವರು ಹಾಗೂ ರಾಜ್ಯಸಚಿವರನ್ನು ಆಹ್ವಾನಿಸುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಸಾಸಲು ಸತೀಶ್, ಜಿಪಂ ಸದಸ್ಯ ಸಿದ್ದರಾಮಣ್ಣ, ಬಗರ್ ಹುಕ್ಕುಂ ಸಮಿತಿಯ ಸದಸ್ಯ ಹೊಸಳ್ಳಿ ಅಶೋಕ್, ಜಾಫರ್ ಸಾಬ್, ಗ್ರಾಪಂ ಅಧ್ಯಕ್ಷೆ ಗೀತಾಪ್ರದೀಪ್, ಸದಸ್ಯರುಗಳಾದ ದಯಾನಂದ್, ಸಿದ್ದಗಂಗಮ್ಮ, ಜಬೀಉಲ್ಲಾ,ದಬ್ಬಗುಂಟೆ ರುದ್ರೇಶ್, ಸೀಗೆಬಾಗಿ ಶಂಕರ್, ಲ.ಪು ಕರಿಯಪ್ಪ ಹೊಯ್ಸಳಕಟ್ಟೆ ಗಿರೀಶ್ ಮತ್ತಿತರರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ