ಹೂವಿನ ದರ ಗಗನಕ್ಕೆ : ಬೂದುಗುಂಬಳ ಬೇಡಿಕೆ
-------------------------
ಹುಳಿಯಾರು:ಪಟ್ಟಣದಲ್ಲಿ ಆಯುಧಪೂಜೆಯ ಹಿನ್ನಲೆಯಲ್ಲಿ ಬೂದು ಕುಂಬಳಕಾಯಿ, ಹೂವಿನ, ಬಾಳೆ ಕಂದು, ಅಲಂಕಾರಿಕ ಹೂಗಳ ವ್ಯಾಪಾರ ಜೋರಾಗಿತ್ತು. ಬೆಲೆ ಹೆಚ್ಚಿದರೂ ಅನಿವಾರ್ಯವಾಗಿ ಕೊಳ್ಳುವ ಸ್ಥಿತಿ ಗ್ರಾಹಕನದಾಗಿತ್ತು.ಭಾನುವಾರದಂದು ವಿಶೇಷ ಹಬ್ಬದ ಸಂತೆ ಕೂಡ ನಡೆಯಿತು. ಸಂತೆಗೆ ಆಗಮಿಸಿದ ಪಟ್ಟಣದ ಸುತ್ತಮುತ್ತಲಿನ ಹಳ್ಳಿಗಳ ರೈತರು ಹಬ್ಬಕ್ಕೆ ಬೇಕಾದ ಹೂ,ಹಣ್ಣು ಸೇರಿದಂತೆ ಇನ್ನಿತರ ವಸ್ತುಗಳನ್ನು ಕೊಂಡೊಯ್ಯುತ್ತಿದುದ್ದು ಸಾಮಾನ್ಯವಾಗಿತ್ತು. ಆಯುಧಪೂಜೆ ಪ್ರಯುಕ್ತ ಎಲ್ಲೆಡೆ ರಾಶಿರಾಶಿ ಬೂದುಗುಂಬಳ ಕಂಡುಬಂತು.
ನವರಾತ್ರಿಯಲ್ಲಿ ಆಯುಧಪೂಜೆ, ಅಂಗಡಿಪೂಜೆ ಮತ್ತು ವಾಹನ ಪೂಜೆಗಾಗಿ ಹೆಚ್ಚಿನ ಪ್ರಮಾಣದಲ್ಲಿ ಬೂದು ಕುಂಬಳಕಾಯಿ ಬೇಡಿಕೆಯಿತ್ತು.ಕುಂಬಳಕಾಯಿಬೆಲೆ ಕಳೆದ ಬಾರಿಗಿಂತ ಕಡಿಮೆಯಾಗಿದ್ದು ಸಣ್ಣ ಗಾತ್ರಕ್ಕೆ ೨೦ ರಿಂದ ೩೦ ಇದ್ದರೆ, ಭಾರಿ ಗಾತ್ರದವಕ್ಕೆ ೧೦೦ ರೂ ಇತ್ತು. ಹಬ್ಬಕ್ಕೆ ಎರಡುದಿನ ಮುಂಚಿತವಾಗಿಯೇ ರೈತರು ಕುಂಬಳಕಾಯಿಯನ್ನು ಮಾರಲು ತಂದಿದ್ದರು. ಪಟ್ಟಣದ ಅನೇಕ ಕಡೆ ಕುಂಬಳಕಾಯಿಯ ರಾಶಿರಾಶಿಯೇ ಇದ್ದು ಗ್ರಾಹಕರಿಗಾಗಿ ಕಾದುಕೂರುವಂತೆ ಪರಿಸ್ಥಿತಿ ಮಾರಾಟಗಾರನದಾಗಿತ್ತು.
ಸಂತೆ ಹಾಗೂ ಬಸ್ ನಿಲ್ದಾಣದಲ್ಲಿ ಹೂವಿನ ವ್ಯಾಪಾರ ಜೋರಾಗಿತ್ತು.ಗೌರಿ ಶಾವಂತಿಗೆ,ಮಾರಿಗೋಲ್ಡ್, ಚೆಂಡುಹೂ ಬೆಲೆ ಗಗನಕ್ಕೇರಿತ್ತು.ಶಾವಂತಿಗೆ ಮಾರೊಂದಕ್ಕೆ ೮೦ ಇದ್ದರೆ,ಚೆಂಡು ಹೂ ಮಾರಿಗೆ ೫೦ ಹಾಗೂ ಮಾರಿಗೋಲ್ಡ್ ಕೇಜಿಗೆ ೧೫೦ ರಂತೆ ಮಾರಾಟವಾಯ್ತು.ಹೆಚ್ಚಿನ ಪ್ರಮಾಣದಲ್ಲಿ ಬಾಳೆ ಕಂದು ಬಂದಿದ್ದು ಬಾಳೆಕಂದುಜೋಡಿಗೆ ೨೦ ರೂ,ಮಧ್ಯಮ ಗಾತ್ರದ್ದಕ್ಕೆ ೩೦ರೂ ನಂತೆ ಮಾರಾಟವಾಯ್ತು.ಸೇಬು,ದ್ರಾಕ್ಷಿ,ಮೊಸುಂಬೆ ಸೇರಿದಂತೆ ಇತರೆ ಹಣ್ಣುಗಳ ಬೆಲೆ ಎಂದಿನಂತೆ ಇದ್ದು ಪಚ್ಚಬಾಳೆ ಕೇಜಿಗೆ ೨೦ ರೂ,ನಾಟಿ ಬಾಳೆ ಕೇಜಿಗೆ ೪೦ರೂ ಹಾಗೂ ಪುಟ್ಟಬಾಳೆ ಕೇಜಿಗೆ 60 ರೂಗೆ ಬಿಕರಿಯಾಗುತ್ತಿತ್ತು.
ಮಕ್ಕಳು ಹಾಗೂ ವಾಹನ ಮಾಲೀಕರು ತಮ್ಮ ವಾಹನವನ್ನು ಅಲಂಕರಿಸಲು ಬೇಕಾದ ಮಿಂಚಿನ ಹಾರ, ಟೇಪ್,ಬಲೂನು ಸೇರಿದಂತೆ ಇತರ ಅಲಂಕಾರಿಕ ವಸ್ತುಗಳನ್ನು ಕೊಂಡುಕೊಳ್ಳಲು ಮುಗಿಬಿಳುತ್ತಿದ್ದರೆ, ಗ್ಯಾರೇಜ್, ಮ್ಯಾಕಾನಿಕ್ ಅಂಗಡಿಯವರು, ಲೇತ್ ನವರು, ವೆಲ್ಡಿಂಗ್ ಶಾಪ್ ನವರು ತಮ್ಮ ಅಂಗಡಿಯಲ್ಲಿನ ಹಳೆವಸ್ತುಗಳನ್ನು ಒಂದೆಡೆ ಹಾಕಿ ಅಂಗಡಿಗಳನ್ನು ಸ್ವಚ್ಚ ಮಾಡಿಕೊಳ್ಳುತ್ತಿರುವುದರಲ್ಲಿ ಮಗ್ನರಾಗಿದ್ದರು. ಒಟ್ಟಾರೆ ಪಟ್ಟಣದೆಲ್ಲೆಡೆ ಆಯುಧಪೂಜೆಯ ಸಂಭ್ರಮ ತುಂಬಿತುಳುಕುತ್ತಿತ್ತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ