ದಾಖಲೆ ಸಲ್ಲಿಸಲು ಪಂಚಾಯ್ತಿ ನಿರ್ಲಕ್ಷ್ಯ:ಪಟ್ಟಣ ಪಂಚಾಯ್ತಿ ಭಾಗ್ಯಕ್ಕೆ ಹಿನ್ನಡೆ
ವರದಿ: ಡಿ.ಆರ್.ನರೇಂದ್ರಬಾಬು
ಹುಳಿಯಾರು: ಬರೋಬ್ಬರಿ ೩೯ ಸದಸ್ಯರನ್ನೊಳಗೊಂಡು ಜಿಲ್ಲೆಯಲ್ಲಿಯಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಅತಿ ದೊಡ್ಡ ಪಂಚಾಯ್ತಿಯೆಂಬ ಹೆಗ್ಗಳಿಕೆಯ ಹುಳಿಯಾರು ಗ್ರಾಮಪಂಚಾಯ್ತಿಯನ್ನು ಪಟ್ಟಣ ಪಂಚಾಯ್ತಿಯನ್ನಾಗಿ ಮೇಲ್ದರ್ಜೆಗೇರಿಸುವ ಕುರಿತ ಪ್ರಸ್ತಾಪ ಸರ್ಕಾರದ ಮುಂದಿದ್ದು ,ಕಳೆದ ಮೂರ್ನಾಲು ವರ್ಷಗಳಿಂದ ಅಗತ್ಯ ದಾಖಲೆಗಳನ್ನು ಕೋರಿ ಪತ್ರ ವ್ಯವಹಾರ ನಡೆಯುತ್ತಿದ್ದರು ಸಹ ದಾಖಲೆಗಳನ್ನು ಕಳುಹಿಸುವಲ್ಲಿ ಪಂಚಾಯ್ತಿ ಅನಗತ್ಯ ವಿಳಂಬ ತೋರುತ್ತಿರುವ ಪರಿಣಾಮ ನೆನೆಗುದಿಗೆ ಬೀಳಲು ಕಾರಣವಾಗಿದೆ.
ಪುರಸಭೆ ಅಧಿನಿಯಮದ ಪ್ರಕಾರ ಪಟ್ಟಣ ಪಂಚಾಯ್ತಿಯನ್ನಾಗಿ ಮೇಲ್ದರ್ಜೆಗೇರಿಸಲು ಗ್ರಾ.ಪಂ. ಜನಸಂಖ್ಯೆ 10,000ಕ್ಕೆ ಕಡಿಮೆಯಿಲ್ಲದಂತೆ ಹಾಗೂ 20,000ಕ್ಕೆ ಹೆಚ್ಚಿಲ್ಲದಂತೆ ಇರಬೇಕು. ಜನಸಾಂದ್ರತೆ ಆ ಪ್ರದೇಶದ ಒಂದು ಚ.ಕಿ.ಮೀ ವೀಸ್ತೀರ್ಣಕ್ಕೆ 400ಕ್ಕಿಂತ ಕಡಿಮೆ ಇಲ್ಲದಿರುವುದು ಹಾಗೂ ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗಾವಕಾಶಗಳ ಶೇಕಡವಾರು ಪ್ರಮಾಣ ಒಟ್ಟು ಉದ್ಯೋಗದ ಪ್ರಮಾಣದ ಶೇ.50ಕ್ಕಿಂತ ಕಡಿಮೆ ಇಲ್ಲದಂತೆ ಇರಬೇಕು. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಅಂದಾಜು ಇಪ್ಪತ್ತು ಸಾವಿರ ದಾಟಿರುವ ಜನ ಸಂಖ್ಯೆ ಹೊಂದಿರುವ ಹುಳಿಯಾರು ಎಂದೋ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದರು ಸಹ ಗ್ರಾಮಪಂಚಾಯ್ತಿಯಾಗಿಯೇ ಮುಂದುವರಿದಿರುವುದು ಸೋಜಿಗವಾಗಿದೆ.
ಪ್ರಸ್ತಾವನೆ: ಜಿಲ್ಲೆಯ ಹುಳಿಯಾರು ಪಪಂ ಆಗಿ ಮೇಲ್ದರ್ಜೆಗೇರಿಸುವ ಕುರಿತಂತೆ ಕೆಲವು ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಪೌರಾಡಳಿತ ನಿರ್ದೇಶನಾಲಯ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಅ.೨ರಂದು ಸುತ್ತೋಲೆ ಕಳಿಸಿದೆ.ಈ ರೀತಿಯ ಸುತ್ತೋಲೆ ಬರುತ್ತಿರುವುದು ಇದೇ ಮೊದಲಲ್ಲ.ಕಳೆದ ಮೂರು ವರ್ಷಗಳಿಂದ ಅಗತ್ಯ ಮಾಹಿತಿ ನೀಡುವಂತೆ ಕೋರಿ ಬರೆದಿರುವ ಪತ್ರಗಳು ಅದೆಷ್ಟೊ.ಮತ್ತೆ ಬಂದಿರುವ ಪತ್ರ ದಲ್ಲಿ ಜನಸಾಂದ್ರತೆ,ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗಾವಕಾಶಗಳ ಶೇಕಡವಾರು ಪ್ರಮಾಣ ಹಾಗೂ ಆಯಾವರ್ಷದಲ್ಲಿನ ಜನಸಂಖ್ಯಾ ವಿವರ ಕೋರಿದ್ದು ತುರ್ತಾಗಿ ಮಾಹಿತಿ ಪೂರೈಸುವಂತೆ ಕೋರಿದ್ದಾರೆ.
ಗ್ರಾಪಂ ಸಾಮಾನ್ಯ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿ ಹುಳಿಯಾರನ್ನು ಪಟ್ಟಣ ಪಂಚಾಯ್ತಿಯನ್ನಾಗಿ ಮಾಡಲು ಸರ್ಕಾರ ಮುಂದಾಗಿದ್ದರು ಸಹ ಇಲ್ಲಿನ ಆಡಳಿತಯಂತ್ರ ಮಾಹಿತಿ ಸಲ್ಲಿಸಲು ನಿರಾಸಕ್ತಿವಹಿಸಿದೆ ಎಂದು ಗಂಭೀರ ಆರೋಪ ಕೇಳಿಬಂದಿದೆ.ನಮ್ಮಲ್ಲಿನ ಸದಸ್ಯರು ಒಟ್ಟಾಗಿ ಹೋಗುವುದರ ಬದಲು ಅವರವರದ್ದೆ ಗುಂಪು ಮಾಡಿಕೊಂಡು ತಮಗೆ ಬೇಕಾದ ಮಂತ್ರಿಮಾನ್ಯರನ್ನು ಭೇಟಿ ಮಾಡಿ ಹುಳಿಯಾರನ್ನು ಪಟ್ಟಣ ಪಂಚಾಯ್ತಿಯನ್ನಾಗಿ ಮಾಡಿ ಎಂದು ಅಹವಾಲು ಸಲ್ಲಿಸುತ್ತಿರುವುದು ಸರಿಯಲ್ಲ.ಅವರಿವರ ಬಳಿ ತೆರಳಿ ಅರ್ಜಿ ಸಲ್ಲಿಸುವ ಬದಲು ಸರ್ಕಾರ ಕೇಳಿರುವ ಮಾಹಿತಿಯನ್ನು ಆವಾಗಲೇ ಪೂರೈಸಿದ್ದರೆ ಇಷ್ಟರಲ್ಲಾಗಲೆ ಪಟ್ಟಣ ಪಂಚಾಯ್ತಿಯಾಗಿರುತ್ತಿತ್ತು ಎಂಬ ಅಭಿಪ್ರಾಯ ಕೆಲ ಸದಸ್ಯರಿಂದ ವ್ಯಕ್ತವಾಗಿದೆ.
ಸಂಸದ ಮುದ್ದಹನುಮೇಗೌಡರು ಹೇಳಿದಂತೆ ಎಲ್ಲಾ ಸದಸ್ಯರು ರಾಜೀನಾಮೆ ಸಲ್ಲಿಸಿದರೆ ಪಟ್ಟಣ ಪಂಚಾಯ್ತಿಯಾಗುವುದಿಲ್ಲ ಸಂಸದರು,ಸಚಿವರು,ಜಿಲ್ಲಾಧಿಕಾರಿಗಳು ಹೀಗೆ ಯಾರೇ ಹುಳಿಯಾರಿಗೆ ಬಂದಾಗಲೂ ಪ್ರತ್ಯೇಕ ಮನವಿಪತ್ರ ಸಲ್ಲಿಸುವ ಬದಲು ಮೊದಲು ಸರ್ಕಾರಕ್ಕೆ ಪೂರಕ ಮಾಹಿತಿ ಸಲ್ಲಿಸಿದಲ್ಲಿ ಒಳಿತಾಗುವುದು ಎಂಬ ಮಾತು ಸದಸ್ಯರಲ್ಲೆ ಕೇಳಿಬರುತ್ತಿದೆ.
ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ಕಲಂ 3, 9ಮತ್ತು 349ರ ಪ್ರಕಾರ ಅನುಸರಿಸಬೇಕಾದ ಮಾನದಂಡಗಳ ಪ್ರಕಾರ ಎಲ್ಲಾ ಲಕ್ಷಣಗಳನ್ನು ಹೊಂದಿರುವ ಹುಳಿಯಾರು ಗ್ರಾ.ಪಂ. ಪಟ್ಟಣ ಪಂಚಾಯ್ತಿಯಾಗಲೇಬೇಕಿದೆ.ಸದ್ಯ ಸರ್ಕಾರ ಕೋರಿರುವ ಮಾಹಿತಿ ಸಲ್ಲಿಕೆಯಾದ ನಂತರ ಜನಪ್ರತಿನಿಧಿಗಳು ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ತಂದು ಶೀಘ್ರ ಅನುಮೋದನೆ ದೊರೆಕಿಸಿಕೊಟ್ಟಲ್ಲಿ ಹುಳಿಯಾರು ಪಟ್ಟಣ ಮತ್ತಷ್ಟು ಅಭಿವೃದ್ಧಿಯಾಗುವ ಸಾಧ್ಯತೆ ಹೆಚ್ಚಾಗಿವೆ.
-----------------------------------------------
ಹುಳಿಯಾರನ್ನು ಪಟ್ಟಣ ಪಂಚಾಯ್ತಿಯನ್ನಾಗಿಸುವ ಬಗ್ಗೆ ಸರಕಾರ ಕೇಳಿರುವ ಸಂಪೂರ್ಣ ಮಾಹಿತಿ ಕಳಿಸಲು ಗ್ರಾಪಂ ಅಧಿಕಾರಿಗಳು ಕಳುಹಿಸದೆ ನಿರ್ಲಕ್ಷಮಾಡುತ್ತಿರುವುದರಿಂದ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರುವ ಭಾಗ್ಯ ವಿಳಂಬವಾಗಲು ಕಾರನವಾಗಿದೆ :ಹೆಚ್.ಎನ್.ರಾಘವೇಂದ್ರ ,ಗ್ರಾಪಂ ಸದಸ್ಯ
-------------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ