ಹುಳಿಯಾರು: ಹೋಬಳಿಯ ಯಳನಡು ಗ್ರಾ.ಪಂ.ಯಿಂದ ಪ್ರಸಕ್ತ ಸಾಲಿನಲ್ಲಿ ಫಲಾನುಭವಿಗಳ ಆಯ್ಕೆಯಲ್ಲಿ ಲೋಪವಾಗಿದ್ದು ಅನರ್ಹರಿಗೆ ಮನೆ ಗ್ರಾಂಟ್ ಹಂಚಲಾಗಿದೆ ಎಂದು ಆರೋಪಿಸಿ ಗ್ರಾಪಂ ಕಛೇರಿ ಮುಂದೆ ಗಾಂಧೀಜಿ ಪೋಟೋ ಇಟ್ಟು ಕೆಲವು ಸಮಯ ಪ್ರತಿಭಟನೆ ಮಾಡಿದ ಘಟನೆ ನಡೆದಿದೆ.
ಯಳನಡು ಗ್ರಾ.ಪಂ.ನಿಂದ ತಮ್ಮಡಿಹಳ್ಳಿ ಗ್ರಾಮಕ್ಕೆ ೧೧ ಜನರಲ್ ಮನೆಗಳು ಮಂಜೂರಾಗಿದ್ದು ಇವುಗಳ ಫಲಾನುಭವಿಗಳ ಆಯ್ಕೆಗೆ ವಾರ್ಡ್ ಸಭೆ ಮತ್ತು ಗ್ರಾಮ ಸಭೆ ನೆಡೆಸಲಾಯಿತು. ಆದರೆ ಸಭೆಯಲ್ಲಿ ಪ್ರಭಾವಿಗಳ ಹಾಗೂ ಹಣವಂತರ ಒತ್ತಡಕ್ಕೆ ಮಣಿದು ೩ ಅರ್ಹ ಫಲಾನುಭವಿಗಳಿಗೆ ಮನೆ ಕೊಡದೆ ಅನರ್ಹರನ್ನು ಆಯ್ಕೆ ಮಾಡಿದ್ದಾರೆ ಎಂದು ತಾಲ್ಲೂಕ್ ರೈತ ಸಂಘದ ಉಪಾಧ್ಯಕ್ಷ ತಮ್ಮಡಿಹಳ್ಳಿ ಮಲ್ಲಿಕಾರ್ಜುನಯ್ಯ ಆರೋಪಿಸಿದರು.
ತಮ್ಮಡಿಳ್ಳಿ ಕಲ್ಪನಾ ನಂಜಾಮರಿ ಎಂಬುವವರಿಗೆ ೨೦೧೧ ರ ಪ್ರಧಾನಮಂತ್ರಿ ರೋಜ್‌ಗಾರ್ ಯೋಜನೆಯಡಿಯಲ್ಲಿ ಮನೆ ನೀಡುವಂತೆ ಪಟ್ಟಿಯಾಗಿ ಬಂದಿದೆ. ಇನ್ನು ಕಮಲಮ್ಮರವೀಶ್ ಹಾಗೂ ಜಯಮ್ಮ ವೆಂಕಟೇಶ್ ಎಂಬುವವರ ವಸತಿ ರಹಿತರಾಗಿದ್ದು ಸಭೆಯಲ್ಲಿ ಕಾಡಿಬೇಡಿದರೂ ಮನೆ ನೀಡದೆ ನಿರ್ಲಕ್ಷಿಸಿದರು. ಹಾಗಾಗಿ ಮೇಲಾಧಿಕಾರಿಗಳು ತಮ್ಮಡಿಹಳ್ಳಿ ಗ್ರಾಮಕ್ಕೆ ಖುದ್ದು ಭೇಟಿ ನೀಡಿ ವಾಸ್ತವತೆ ಅರಿತು ಮನೆ ಗ್ರ್ಯಾಂಟ್ ನೀಡಬೇಕು. ಇಲ್ಲವಾದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ವಿಷಯ ತಿಳಿದ ತಾಪಂ ಸದಸ್ಯ ಯತೀಶ್ ಅವರು ಸ್ಥಳಕ್ಕೆ ಆಗಮಿಸಿ ಧರಣಿ ನಿರತರ ಅಹವಾಲು ಆಲಿಸಿದರಲ್ಲದೆ ರಾಜ್ಯ ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಕೆಂಕೆರೆ ಸತೀಶ್ ಅವರ ಜೊತೆ ಖುದ್ದು ತಮ್ಮಡಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಕಲ್ಪನ, ಕಮಲಮ್ಮ, ಜಯಮ್ಮ ಎಂಬುವವರು ಅರ್ಹ ಫಲಾನುಭವಿಗಳಾಗಿದ್ದು ತುರ್ತಾಗಿ ಮನೆ ನೀಡಬೇಕಿದೆ ಎಂಬ ನಿಲುವಿಗೆ ಬಂದು ತಾಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ವಿಷಯ ತಿಳಿಸಿದರು. ಆಗ ಮುಂದಿನ ಗ್ರಾಮ ಸಭೆಯಲ್ಲಿ ಇವರನ್ನು ಆಯ್ಕೆ ಮಾಡುವುದಾಗಿ ಇಓ ಭರವಸೆ ಪಡೆದು ಧರಣಿ ಹಿಂಪಡೆಯುವಂತೆ ಮಾಡಿದರು.
ರೈತ ಸಂಘದ ಕಾಡಿನರಾಜನಾಗರಾಜು, ಓಂಕಾರಮೂರ್ತಿ, ಪಂಚಾಕ್ಷರಿ, ನಂಜಾಮರಿ, ಗ್ರಾಪಂ ಸದಸ್ಯೆ ಪುಷ್ಪವತಿ,ಪ್ರಮೀಳ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ