ಹುಳಿಯಾರು:ಪಟ್ಟಣದಲ್ಲಿರುವ ಮುಕ್ತಿಧಾಮಕ್ಕೆ ಮೂಲಭೂತ ಸೌಕರ್ಯ,ಅಗತ್ಯ ಚಿತಾಗಾರ ಹಾಗೂ ಶವ ಸಾಗಿಸಲು ವಾಹನ ಸೌಕರ್ಯಕ್ಕೆಂದು ತಾವೀಗಾಗಲೇ ಹದಿನೈದು ಲಕ್ಷ ಅನುದಾನವನ್ನು ಬಿಡುಗಡೆಮಾಡಿದ್ದು ಸಮುದಾಯದವರು ಇದರ ಸಧ್ಬಳಕೆ ಮಾಡಿಕೊಳ್ಳುವಂತೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಟಿ.ಬಿ.ಜಯಚಂದ್ರ ಸೂಚಿಸಿದರು.
ಪಟ್ಟಣದ ಮುಕ್ತಿಧಾಮದ ಸಮಸ್ಯೆ ಬಗ್ಗೆ ಸಮಿತಿಯವರು ಮಾಡಿದ್ದ ಮನವಿ ಮೇರೆಗೆ ಸ್ವತಹ ಮುಕ್ತಿಧಾಮಕ್ಕೆ ಭೇಟಿ ನೀಡಿದ ಸಚಿವರು ಅಲ್ಲಿನ ಸಮಸ್ಯೆಗಳನ್ನು ವೀಕ್ಷಿಸಿದ ತರವಾಯ ಧಾರ್ಮಿಕ ದತ್ತಿ ಇಲಾಖೆಯ ಮೂಲಕ ರುದ್ರಭೂಮಿ ಅಭಿವೃದ್ಧಿಗಾಗಿ ೧೫ ಲಕ್ಷ ರೂಪಾಯಿ ಬಿಡುಗಡೆಗೊಳಿಸಿರುವುದಾಗಿ ಹಾಗೂ ಶೀಘ್ರವೇ ಶವ ಸಾಗಿಸುವ ವಾಹನದ ಸೌಕರ್ಯ ಕೂಡ ಕಲ್ಪಿಸಿಕೊಡುವುದಾಗಿ ತಿಳಿಸಿದರು.
ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸೂಚಿಸಿದ ಅವರು ಇಲ್ಲಿನ ನೀರಿನ ವ್ಯವಸ್ಥೆಗಾಗಿ ಸಿಸ್ಟನ್ ಗೆಂದು ಮತ್ತು ನಿರ್ವಹಣೆಗೆಂದು ೨.೫ ಲಕ್ಷದ ಅನುದಾನ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸ್ಮಶಾನದಲ್ಲಿ ಶವ ಸುಡಲಿರುವ ಚಿತಾಗಾರವನ್ನು ಕಳ್ಳರು ಕದೊಯ್ದಿದ್ದು ಸಿಲಿಕಾನ್ ಚೇಂಬರ್ ವ್ಯವಸ್ಥೆ ಮಾಡಿಕೊಡಬೇಕೆಂಬ ಮನವಿಗೆ ಸ್ಪಂದಿಸಿದ ಅವರು ಪರಿಸರ ಕೂಡ ಹಾಳಾಗದ ರೀತಿ ವಿದ್ಯುತ್ ಚಿತಾಗಾರಕ್ಕೆ ಅವಕಾಶ ಕಲ್ಪಿಸುವುದಾಗಿ ಹೇಳಿದರು.
ಕೆರೆ ತುಂಬಿದ ಸಮಯದಲ್ಲಿ ನೀರಿನ ಜೋಪಿನಿಂದ ಸ್ಮಶಾನವೆಲ್ಲಾ ನೀರಿನಿಂದ ಆವೃತ್ತವಾಗಿ ಸಮಸ್ಯೆ ಎದುರಾಗುತ್ತಿರುವ ಬಗ್ಗೆ ಸ್ಪಂದಿಸಿದ ಅವರು ಎನ್.ಆರ್.ಇ.ಜಿಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ತಿಳಿಸಿದರು.
ಸ್ಮಶಾನ ಸಮುದಾಯಕ್ಕೆ ಸೇರಿದ ಆಸ್ತಿಯಾಗಿದ್ದು ಸ್ಮಶಾನ ಪರಿಸರದಲ್ಲಿ ಸ್ವಚ್ಛತೆ ಹಾಗೂ ನಿರ್ವಹಣೆ ಬಗ್ಗೆ ಪಂಚಾಯ್ತಿಯವರು ಗಮನ ಹರಿಸಲು ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಮುಕ್ತಿಧಾಮ ಸಮಿತಿಯ ಅಧ್ಯಕ್ಷ ನರೇಂದ್ರಬಾಬು, ದುರ್ಗಾ ಪರಮೇಶ್ವರಿ ದೇವಾಲಯದ ಕನ್ವೀನಿಯರ್ ಹು.ಕೃ.ವಿಶ್ವನಾಥ್, ಆರ್ಯವೈಶ್ಯ ಮಂಡಳಿಯ ಕಾರ್ಯದರ್ಶಿ ಚಂದ್ರಶೇಖರ್,ಗ್ರಾಪಂ ಸದಸ್ಯರಾದ ಧನುಷ್ ರಂಗನಾಥ್ ಮತ್ತು ದಯಾನಂದ್ ,ಗೋವಿಂದರಾಜು ,ಬಿ.ವಿ.ಶ್ರೀನಿವಾಸ್ , ರಂಗನಾಥ ಶೆಟ್ರು,ಬಡಗಿ ರಾಮಣ್ಣ,ಸುರೇಶ್,ರಂಗನಕೆರೆ ವಿರೂಪಾಕ್ಷ ಇನ್ನಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ