ಹುಳಿಯಾರು;ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯ ಪ್ರಾಂಗಣದಲ್ಲಿ ಸೋಮವಾರ ರಾತ್ರಿ ಸರಣಿಕಳ್ಳತನ ನಡೆದಿದ್ದು ನಾಲ್ಕು ಅಂಗಡಿಗಳ ರೋಲಿಂಗ್ ಶೆಟರ್ ಮೀಟಿದ್ದು ಅದರಲ್ಲಿ ಒಂದು ಅಂಗಡಿಯಲ್ಲಿ ಮಾತ್ರ ನಗದು ದೋಚಿರುವುದು ಬಿಟ್ಟರೆ ಹೆಚ್ಚಿನದೇನು ಕಳುವಾಗಿಲ್ಲ.
ಎಲ್ಲಾ ನಾಲ್ಕು ಅಂಗಡಿಗಳನ್ನು ಷಟರ್ ಮೀಟಿ ಒಳನುಗ್ಗಿರುವ ಕಳ್ಳರು ಕೇವಲ ಹಣಕ್ಕಾಗಿ ಬೀರುಗಳನ್ನು,ಕ್ಯಾಶ್ ಟೇಬಲ್ ಗಳನ್ನು ಜಾಲಾಡಿದ್ದು ಇನ್ಯಾವುದೇ ವಸ್ತು ಮುಟ್ಟಿಲ್ಲ.ಮೊದಲು ಮೂರು ಅಂಗಡಿಗಳಲ್ಲಿ ನಗದು ಸಿಕ್ಕದೆ ಕಡೆಯದಾಗಿ ಭಾರಿ ವಹಿವಾಟು ನಡೆಸುವ ಕೊಬ್ಬರಿ ವರ್ತಕರ ಅಂಗಡಿಗೆ ಬಾಗಿಲು ಮುರಿದು ಹೊಕ್ಕಿರುವ ಕಳ್ಳರು ಅಲ್ಲಿ ಸಿಕ್ಕ ೨೩,೫೦೦ ರೂಪಾಯಿಯನ್ನು ದೋಚಿ ಪರಾರಿಯಾಗಿದ್ದಾರೆ.
ಕಳ್ಳತನಕ್ಕೆ ಮಾರುಕಟ್ಟೆಯಲ್ಲಿಯೇ ನಿಂತಿದ್ದ ಲಾರಿಯ ಜಾಕ್ ಹಾಗೂ ಜಾಕ್ ಲಿವರ್ ಮತ್ತು ಅಂಗಡಿ ಮುಂದೆ ಕೊಬ್ಬರಿ ಸುಲಿಯಲಿಟ್ಟಿದ್ದ ಹಾರೆಯನ್ನು ಬಳಸಿಕೊಂಡಿದ್ದು ಪ್ರಕರಣ ಗಮನಿಸಿದಲ್ಲಿ ಸ್ಥಳಿಯರ ಕೈವಾಡದ ಶಂಕೆಯಿದೆ ಎನ್ನಲಾಗಿದೆ.
ರಾತ್ರಿ ನಡೆದಿರುವ ಘಟನೆ ಮುಂಜಾನೆ ೫ ರ ಸುಮಾರಿಗೆ ಬೆಳಕಿಗೆ ಬಂದಿದ್ದು ಸ್ಥಳಕ್ಕೆ ಎಪಿಎಂಸಿ ಅಧ್ಯಕ್ಷ ಸಿದ್ದರಾಮಯ್ಯ ಆಗಮಿಸಿದ್ದನ್ನು ಹೊರತುಪಡಿಸಿದರೆ ಬೆಳಿಗ್ಗೆ ೧೦ಗಂಟೆಯಾದರೂ ಕಾರ್ಯದರ್ಶಿಯಾಗಲಿ ,ಭದ್ರತಾ ಸಿಬ್ಬಂದಿಯ ಏಜೆನ್ಸಿಯವರಾಗಲಿ ಬಾರದಿದ್ದಿದ್ದು ವ್ಯಾಪಾರಸ್ಥರನ್ನು ಕೆರಳುವಂತೆ ಮಾಡಿತು.
ಪ್ರಕರಣ ಹುಳಿಯಾರು ಠಾಣೆಯಲ್ಲಿ ದಾಖಲಾಗಿದ್ದು ಘಟನಾ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿದ್ದು ಪಿಎಸೈ ಪ್ರವೀಣ್ ಕುಮಾರ್ ತನಿಖೆ ಕೈಗೊಂಡಿದ್ದಾರೆ.
--------------------
ಜಿಲ್ಲೆಯಲ್ಲಿಯೇ ವಾರ್ಷಿಕ ೭೦-೮೦ ಕೋಟಿ ರೂಪಾಯಿ ವಹಿವಾಟು ನಡೆಸುವ ಮೂಲಕ ಹೆಸರಾಗಿರುವ ಹುಳಿಯಾರು ಎಪಿಎಂಸಿಯಲ್ಲಿ ಸೂಕ್ತ ಭದ್ರತಾ ಸಿಬ್ಬಂದಿಯಿಲ್ಲದಿರುವುದು ಇಂದಿನ ಪ್ರಕರಣದಲ್ಲಿ ಕಣ್ಣಿಗೆ ರಾಚುತ್ತಿದೆ.೩೦ ಕ್ಕೂ ಮೀರಿ ಭಾರಿ ಅಂಗಡಿದಾರರಿರುವ ಎಪಿಎಂಸಿಯಲ್ಲಿ ಆವರಣದೊಳಗೆ ನುಗ್ಗಿ ರಾಜಾರೋಷವಾಗಿ ಕಳ್ಳತನ ಮಾಡಿರುವುದರಿಂದ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.ರಾತ್ರಿ ಸಮಯದಲ್ಲಿ ಹಾಲಿ ಇರುವ ಕೇವಲ ಒಬ್ಬನೇಒಬ್ಬ ಸೆಕ್ಯೂರಿಟಿಯ ಬದಲು ಮೂರ್ನಾಲ್ಕು ಜನರನ್ನು ನೇಮಿಸುವ ಮೂಲಕ ಎಲ್ಲರ ಅಂಗಡಿಗಳಿಗೆ ಕಾಯಲು ಸೂಕ್ತ ಭದ್ರತೆ ನೀಡಬೇಕು. ರಾತ್ರಿ ಗಸ್ತು ಹೆಚ್ಚಿಸಬೇಕು ಎಂದು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.
-------------------
ಇಂದಿನ ಪ್ರಕರಣದಲ್ಲಿ ಭದ್ರತಾ ವೈಫಲ್ಯ ಎದ್ದುಕಾಣುತ್ತಿದ್ದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಕಳ್ಳತನ ಪ್ರಕರಣಗಳು ಮರುಕಳಿಸದ ರಿತಿಯಲ್ಲಿ ಮಾರುಕಟ್ತೆಯ ಆಡಳಿತ ಮಂಡಳಿಯು ಎಪಿಎಂಸಿ ಪ್ರವೇಶಿಸುವ ಮುಖ್ಯದ್ವಾರದಲ್ಲಿ ಹಾಗೂ ಆಯ್ದ ಸ್ಥಳಗಳಲ್ಲಿ ಹಾಗೂ ಸಿಸಿ ಕ್ಯಾಮರಾ ಅಳವಡಿಸಲು ಮುಂದಾಗಬೇಕಿದೆ:ಬಾಲಾಜಿ,ಎಪಿಎಂಸಿಯ ರವಾನೆದಾರರು
------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ