ಹುಳಿಯಾರು:ಹುಳಿಯಾರು ಸಮೀಪದ ಲಿಂಗಪ್ಪನಪಾಳ್ಯದಲ್ಲಿ ರಾಮನವಮಿ ಬಂತೆಂದರೆ ಅದೇನೋ ಸಂಭ್ರಮ.ಕುರುಬ ಸಮುದಾಯದವರೇ ಅಧಿಕ ಸಂಖ್ಯೆಯಲ್ಲಿರುವ ಈ ಪುಟ್ಟ ಗ್ರಾಮದಲ್ಲಿ ರಾಮನವಮಿ ಕೇವಲ ಪಾನಕ ಕೋಸುಂಬರಿ ವಿತರಿಸುವುದರೊಂದಿಗೆ ಕೊನೆಗೊಳ್ಳುವುದಿಲ್ಲ. ಇಲ್ಲಿ ಬರೋಬ್ಬರಿ ಒಂಬತ್ತು ದಿನಗಳ ಕಾಲ ನಡೆಯೋ ಆಚರಣೆಯನ್ನು ವಸಂತ ನವರಾತ್ರಿ ಎನ್ನುತ್ತಾರೆ. ಶ್ರೀರಾಮಚಂದ್ರ ಹುಟ್ಟಿದ ದಿನವಾದ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಬರುವ ರಾಮನವಮಿಯನ್ನು ಊರಿನ ಮಂದಿಯೆಲ್ಲಾ ಒಟ್ಟಾಗಿ ಶ್ರದ್ಧಾಭಕ್ತಿಯಿಂದ ಆಚರಿಸುವ ಮೂಲಕ ಈ 9 ದಿನಗಳ ಕಾಲದ ಆಚರಣೆಗೆ ತೆರೆಬೀಳಲಿದೆ.
ಸಾಮಾನ್ಯವಾಗಿ ಶರನ್ನವರಾತ್ರಿ ದುರ್ಗಾಪೂಜೆಗೆ ಮೀಸಲಾದರೆ ಇಲ್ಲಿ ಆಚರಣೆಯಲ್ಲಿರುವ ವಸಂತ ನವರಾತ್ರಿ ಶ್ರೀರಾಮನಿಗೆ ಮೀಸಲು. ಹೊಸ ಸಂವತ್ಸರದ ಅಂದರೆ ಯುಗಾದಿಯ ಮೊದಲ ದಿನದಿಂದ ಪ್ರಾರಂಭಿಸಿ ರಾಮನು ಹುಟ್ಟಿದ ದಿನವಾದ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ರಾಮನ ಪೂಜೆ ಸಲ್ಲಿಸಿದ ನಂತರ ಅಂತ್ಯಗೊಳ್ಳುತ್ತದೆ.
ಯುಗಾದಿಯಿಂದ ಒಂಬತ್ತನೆ ದಿನ ಬರುವುದೇ ಶ್ರೀ ರಾಮ ನವಮಿ.2೦೦ ಮನೆಗಳ ಗ್ರಾಮವಾದ ಲಿಂಗಪ್ಪನಪಾಳ್ಯದಲ್ಲಿ ಎಲ್ಲ ಹಬ್ಬಗಳನ್ನು ಆಚರಿಸುತ್ತಾರಾದರೂ ರಾಮನವಮಿ ಮಾತ್ರ ವಿಶೇಷವಾಗಿ ಆಚರಿಸುತ್ತಾರೆ. ಇಡೀ ಗ್ರಾಮದ ಮಂದಿಯೆಲ್ಲ ಶ್ರೀರಾಮನ ಭಕ್ತರಾಗಿದ್ದು ಶ್ರೀರಾಮನ ಆರಾಧನೆಗಾಗಿ ರಾಮಮಂದಿರ ಕೂಡ ನಿರ್ಮಿಸಿಕೊಂಡಿದ್ದಾರೆ..ಹೊಸ ಸಂವತ್ಸರದ ಮೊದಲ ಹಬ್ಬವಾದ ಯುಗಾದಿಯಿಂದ ರಾಮ ನವಮಿಯವರೆಗೆ ಗ್ರಾಮದಲ್ಲಿ ಎಲ್ಲರೂ ಮಡಿಯಾಗಿರುತ್ತಾರೆ. ಗ್ರಾಮದಲ್ಲಿ ಈ 9 ದಿನ ಮಾಂಸಹಾರ ಕಡ್ಡಾಯ ನಿಷಿದ್ಧ.ಹಾಗೆಯೇ ೯ ದಿನವೂ ನಿತ್ಯ ರಾಮಭಜನೆಯೂ ಕಡ್ಡಾಯ.
ಗ್ರಾಮದಲ್ಲಿ ಶ್ರೀರಾಮನವಮಿ ಆಚರಣೆಯ ಹಿಂದೆ ಒಂದು ಕಥೆಯಿದೆ.ಗ್ರಾಮದಲ್ಲಿ 60 ವರ್ಷಗಳ ಹಿಂದೆ ಯಾವುದೇ ದೇವಾಲಯ ಇರಲಿಲ್ಲ ಆ ಸಮಯದಲ್ಲಿ ಹುಳಿಯಾರಿನ ರಾಮಭಕ್ತರೊಬ್ಬರು ಗ್ರಾಮದಲ್ಲಿ ರಾಮನವಮಿಯಂದು ಊರ ಮಧ್ಯೆ ಚಪ್ಪರ ಹಾಕಿಸಿ ಶ್ರೀರಾಮ ಪೋಟೊ ಇಟ್ಟು ಭಜನೆ ಮಾಡಿಸುವಲ್ಲಿ ಸಫಲರಾದರು.ಅಂದಿನಿಂದ ಗ್ರಾಮದ ಸಮಸ್ಯೆಗಳು ಮಂಜಿನಂತೆ ಕರಗಿದಲ್ಲದೆ ಊರು ಸುಭಿಕ್ಷವಾಯಿತು. ಸೋಮಸಂದ್ರದ ಬಾಲಪ್ಪನವರು ಹೇಳಿಕೊಟ್ಟ ರಾಮ ಭಜನೆಯಿಂದ ಗ್ರಾಮಕ್ಕೆ ಒಳಿತಾಯಿತೆಂದು ಬಗೆದ ಜನ ಅಂದಿನಿಂದ ರಾಮನವಮಿಯನ್ನು ಕಟ್ಟು ನಿಟ್ಟಿನಿಂದ, ಭಯಭಕ್ತಿಯಿಂದ ಆಚರಿಸುವುದನ್ನು ರೂಢಿಸಿಕೊಂಡರು.
ಶ್ರೀರಾಮನವಮಿಯಂದು ಗ್ರಾಮಸ್ಥೆರೆಲ್ಲಾ ಸೇರಿ ಹಿಂದಿನ ದಿನದಿಂದಲೆ ಚಪ್ಪರ ಹಾಕಿ ಮಾವಿನ ತೋರಣ ಕಟ್ಟುವ ಮೂಲಕ ಹಬ್ಬದ ಆಚರಣೆಗೆ ಮುಂದಾಗುತ್ತಾರೆ. ಗ್ರಾಮದ ಮನೆ ಮನೆಗಳು ತಳಿರು ತೋರಣ ಹಾಗೂ ಬಣ್ಣದ ರಂಗೋಲಿಯಿಂದ ಸಿಂಗರಿಸಲ್ಪಡುತ್ತದೆ. ಹಬ್ಬಕ್ಕಾಗಿ ದೂರದೂರುಗಳಿಂದ ನೆಂಟರಿಷ್ಟರನ್ನು ಕರೆಸಿಕೊಂಡು ಎಲ್ಲರೂ ಒಟ್ಟಾಗಿ ಹಬ್ಬ ಆಚರಿಸಿ ಒಬ್ಬಟ್ಟಿನ ಊಟ ಮಾಡುತ್ತಾರೆ
ಉಪವಾಸ: ರಾಮನವಮಿಯಂದು ರಾಮನ ಉತ್ಸವ ಮೂರ್ತಿಯ ಪಲ್ಲಕ್ಕಿಯನ್ನು ಹೊತ್ತುಕೊಂಡು ಗ್ರಾಮ ದೇವತೆಗಳೊಂದಿಗೆ ಭಜನೆ ಮಾಡುತ್ತ ಹುಳಿಯಾರಿನ ಆಂಜನೇಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ವಾಪಸ್ಸು ಗ್ರಾಮಕ್ಕೆ ಮರಳಿ ಬಂದು ಗ್ರಾಮದಲ್ಲಿನ ಎಲ್ಲಮ್ಮ,ಹೊಸೂರಮ್ಮ,ಗರುಡನಗುಡಿ, ಬಸವನ ಗುಡ್ಡೆ, ಮಾರುತಿ ಗುಡ್ಡೆಗಳಿಗೆ ಪೂಜೆ ಸಲ್ಲಿಸಿ ನಂತರ ಶ್ರೀಸ್ವಾಮಿಯವರ ಮೂಲಗುಡಿಗೆ ತೆರಳುವವರೆಗೂ ಎಲ್ಲರೂ ಉಪವಾಸವಿರುತ್ತಾರೆ.ಸಂಜೆ ಮಹಾಮಂಗಳಾರತಿ ನಡೆದು ಪಾನಕ ವಿತರಿಸಿದಾಗಲಷ್ಟೆ ಎಲ್ಲರ ಮನೆಯಲ್ಲೂ ಊಟದ ಕಾರ್ಯಕ್ರಮ.
ಸಂಜೆ ನೂರೊಂದು ಎಡೆ ಸೇವೆ,ಬಿಲ್ಲುಗೂಡು ಸೇವೆ ಸಲ್ಲಿಸುವ ಮೂಲಕ ದಾಸಯ್ಯಗಳಿಗೆ ಎಡೆ ಇಟ್ಟು ಎಲ್ಲರು ಒಟ್ಟಾಗಿ ರಾಮಭಜನೆ ಮಾಡುವುದರೊಂದಿಗೆ ಒಂಬತ್ತುದಿನಗಳ ಕಾಲದ ಆಚರಣೆ ಕೊನೆಗೊಳ್ಳುತ್ತದೆ.
ಒಟ್ಟಾರೆ ಲಿಂಗಪ್ಪನಪಾಳ್ಯದ ಗ್ರಾಮಸ್ಥರು ಹಲವು ಹಬ್ಬಗಳ ಜೊತೆ ರಾಮನವಮಿಯನ್ನು ವಿಶಿಷ್ಟವಾಗಿ ಆಚರಿಸುತ್ತ ಬಂದಿರುವುದು ಈ ಭಾಗದ ವಿಶೇಷ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ