ಹುಳಿಯಾರು ಪಟ್ಟಣದ ಗ್ರಾಮದೇವತೆ ಶ್ರೀ ದುರ್ಗಾಪರಮೇಶ್ವರಿ ದೇವಿಯ ೪೬ನೇ ವರ್ಷ ಬ್ರಹ್ಮ ರಥೋತ್ಸವ ಶುಕ್ರವಾರ ಮಧ್ಯಾಹ್ನ ಅಪಾರ ಸಂಖ್ಯೆಯ ಭಕ್ತಾಧಿಗಳ ಹರ್ಷೋದ್ಗಾರದಲ್ಲಿ ವೈಭವಯುತವಾಗಿ ಜರುಗಿತು.
ರಥೋತ್ಸವದ ಅಂಗವಾಗಿ ಶುಕ್ರವಾರ ಮುಂಜಾನೆ ರಥಕ್ಕೆ ಪುಣ್ಯಾಹ,ದಿಗ್ಬಲಿ ಸೇರಿದಂತೆ ವಿವಿಧ ಪೂಜೆಗಳು ನಡೆಯಿತು. ನಂತರ ರಥವನ್ನು ವಿವಿಧ ಹೂ,ಹಾರ,ಬಣ್ಣಬಣ್ಣದ ಬಾವುಟದಿಂದ ಅಲಂಕರಿಸಲಾಯಿತು. ಬೆಳಿಗ್ಗೆ ೧೧ರ ವೇಳೆಗೆ ಸೋಮನ್ನೊಂದಿಗೆ ಬೀರದೇವರಗುಡಿಯಲ್ಲಿಗೆ ಹೋಗಿ ಪೂಜೆ ಮಾಡಿಸಿಕೊಂಡು ಪಾನಕದ ಗಾಡಿಯನ್ನು ಸೋಮನಕುಣಿತದೊಂದಿಗೆ ಕರೆತಂದು ಸೋಮನನ್ನು ಗದ್ದುಗೆ ಮಾಡಲಾಯಿತು .
ಹುಳಿಯಾರಿನ ಗ್ರಾಮದೇವತೆ ಶ್ರೀ ದುರ್ಗಾಪರಮೇಶ್ವರಿ ದೇವಿಯ ಬ್ರಹ್ಮ ರಥೋತ್ಸವ ಶುಕ್ರವಾರ ಮಧ್ಯಾಹ್ನ ಅಪಾರ ಸಂಖ್ಯೆಯ ಭಕ್ತಾಧಿಗಳ ಹರ್ಷೋದ್ಗಾರದಲ್ಲಿ ವೈಭವಯುತವಾಗಿ ಜರುಗಿತು. |
ದೇವಾಲಯದಲ್ಲಿ ದುರ್ಗಮ್ಮನಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಿದ ನಂತರ ಸರ್ವಾಲಂಕೃತ ದುರ್ಗಮ್ಮದೇವಿಯನ್ನು ಹುಳಿಯಾರಮ್ಮ, ತಿರುಮಲಾಪುರ ಹಾಗೂ ಹೊಸಹಳ್ಳಿಯ ಕೊಲ್ಲಾಪುರದಮ್ಮ, ಹೊಸಹಳ್ಳಿಪಾಳ್ಯದ ಅಂತರಘಟ್ಟೆಅಮ್ಮ ದೇವರುಗಳೊಂದಿಗೆ ಹೊರಡಿಸಿ ದೇವಾಲಯವನ್ನು ಪ್ರದಕ್ಷಿಣೆ ಹಾಕಿ,ಪಾನಕದ ಗಾಡಿಗಳಿಗೆ ಫೂಜೆಸಲ್ಲಿಸಲಾಯಿತು. ರಥದ ಬಳಿ ಆಗಮಿಸಿ ರಥಕ್ಕೆ ಪೂಜೆ ಸಲ್ಲಿಸಿ ಸಾವಿರಾರು ಭಕ್ತರ ಜೈಕಾರದೊಂದಿಗೆ ದುರ್ಗಮ್ಮದೇವಿಯನ್ನು ಸಜ್ಜುಗೊಂಡಿದ್ದ ರಥದಲ್ಲಿ ಕುಳ್ಳಿರಿಸಿ ತೇರನ್ನು ಎಳೆಯಲಾಯಿತು.
ಸುಡುಬಿಸಿಲನ್ನು ಲೆಕ್ಕಿಸದೆ ಭಕ್ತರು ತೇರನ್ನೆಳೆದು ಸಂಭ್ರಮಿಸಿದರು. ಆಗಮಿಸಿದ್ದ ಕೆಲಭಕ್ತರು ತೇರಿನತ್ತ ಬಾಳೆಹಣ್ಣು ತೂರಿದರೆ ಮತ್ತೆಕೆಲವರು ಕಳಸದ ನೆತ್ತಿಯಲ್ಲಿದ್ದ ನಿಂಬೆಹಣ್ಣಿಗೆ ಗುರಿಯಿಟ್ಟಿದ್ದರು. ರಥೋತ್ಸವದ ನಂತರ ಮಹಿಳೆಯರು ರಥದ ಮೇಲಿದ್ದ ದೇವಿಗೆ ಹಣ್ಣುಕಾಯಿ ಮಾಡಿಸಲು ಮುಗಿಬಿದ್ದರು.
ದೇವಾಲಯ ಸಮಿತಿ ವತಿಯಿಂದ ದೇವಾಲಯದ ಆವರಣದಲ್ಲಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸೇವಾಕರ್ತರಿಂದ ಭಕ್ತರಿಗೆ ಪಾನಕ ಪನಿವಾರ ವಿತರಣೆ ಮಾಡಲಾಯಿತು. ರಥೋತ್ಸವ ನೋಡಲು ಹುಳಿಯಾರು ಸೇರಿದಂತೆ ಸುತ್ತಮುತ್ತಲ ಹಳ್ಳಿಯವರು ಆಗಮಿಸಿದ್ದು ದೇವಾಲಯದ ಆವರಣದಲ್ಲಿ ಎತ್ತಕಣ್ಣುಹಾಯಿ ಸಿದರೂ ಜನವೇ ತುಂಬಿದ್ದರು. ಈ ವೇಳೆ ಕಮಿಟಿಯ ಧರ್ಮದರ್ಶಿ ಹೆಚ್.ಶಿವಕುಮಾರ್,ಕನ್ವಿನರ್ ಹೆಚ್.ಕೆ.ವಿಶ್ವನಾಥ್ ಸೇರಿದಂತೆ ಗುಂಚಿ ಗೌಡರುಗಳು ಹಾಜರಿದ್ದರು.
ದುರ್ಗಮ್ಮನ ಸಿಡಿ : ಶನಿವಾರದಂದು ಹುಳಿಯಾರಮ್ಮ, ಕೊಲ್ಲಾಪುರದಮ್ಮ,ಕೆಂಚಮ್ಮ,ಅಂತಘಟ್ಟೆ ಅಮ್ಮ ನವರುಗಳ ಸಮ್ಮುಖದಲ್ಲಿ ಸಿಡಿ ಹಾಗೂ ಓಕಳಿ ಸೇವೆ ನಡೆಯಲಿದೆ.ಕಂಕಣ ವಿಸರ್ಜನೆ ನಂತರ ಮಡ್ಲಕ್ಕಿ ಸೇವೆಯೊಂದಿಗೆ ಜಾತ್ರೆ ಕೊನೆಗೊಳ್ಳಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ