ಚಿಕ್ಕನಾಯಕನಹಳ್ಳಿ ತಾಲ್ಲೂಕ್ ದಸೂಡಿಯ ಬಳ್ಳಪ್ಪನಹಟ್ಟಿಯ ಸಮೀಪದ ಬಿಡಾರದಲ್ಲಿ ಶನಿವಾರ ಹಾಗೂ ಭಾನುವಾರ ರಾತ್ರಿ ದಿಢೀರ್ ಸಾವನ್ನಪ್ಪಿದ ಕುರಿಗಳಿಗೆ ಅಂತ್ರಾಕ್ಸ್ ರೋಗ ಕಾರಣವಲ್ಲ, ಬದಲಿಗೆವಿಷಪೂರಿತ ಗಿಡಗಳನ್ನು ಸೇವಿಸಿದ್ದೆ ಕುರಿಗಳ ಸಾವಿಗೆ ಕಾರಣವಾಗಿದೆ ಎಂದು ಪಶುರೋಗ ತನಿಖಾ ಪ್ರಯೋಗಾಲಯ ವಿಜ್ಞಾನಿಗಳು ದೃಢಪಡಿಸಿದ್ದಾರೆಂದು ಚಿಕ್ಕನಾಯಕನಹಳ್ಳಿ ಸಹಾಯಕ ನಿರ್ದೇಶಕ ಡಾ.ಬಿ.ಕೆ.ನಾಗರಾಜು ತಿಳಿಸಿದ್ದಾರೆ.
ಈ ಮೊದಲು ಕುರಿಗಳ ಸಾವಿಗೆ ಅಂತ್ರಾಕ್ಸ್ ಕಾರಣವಿರಬಹುದೆಂಬ ಶಂಕೆ ವ್ಯಕ್ತವಾಗಿದ್ದರೂ ಮೇವಿನ ,ನೀರಿನ,ಕುರಿಯ ಅಂಗಾಂಗಗಳ ಸ್ಯಾಂಪಲ್ ರಿಪೋರ್ಟ್ ಹಾಗೂ ಮರಣೋತ್ತರಪರೀಕ್ಷೆಯ ವರದಿ ಆಧಾರದ ಮೇಲೆ ಕುರಿಗಳು ವಿಷಪೂರಿತ ಗಿಡಗಳನ್ನು ತಿಂದಿದ್ದರಿಂದಲೇ ಮರಣಹೊಂದಿದೆ ಎಂದರು
ವಿವರ :ಹಿರಿಯೂರು ತಾಲ್ಲೂಕು ಬಾಲದೇವರಹಟ್ಟಿಯ ಕುಂಟಪ್ಪ ಅವರ ಬಳಿ ೨೫೦ ಕುರಿಗಳಿದ್ದು, ಇವರು ವಲಸೆ ಬಂದು ರಾಮಪ್ಪನ ಕೆರೆಗೆ ಕುರಿಗಳನ್ನು ಮೇಯಿಸಲು ಬಿಟ್ಟಿದ್ದಾರೆ. ಆಗ ಕುರಿಗಳು ಕೆರೆ ದಡದಲ್ಲಿ ಬೆಳೆದಿದ್ದ ವಿಷಪೂರಿತ ಗಿಡಗಳನ್ನು ತಿಂದಿರುತ್ತವೆ. ಪರಿಣಾಮ ಏ.೨೪ ರಂದು ೩೫ ಕುರಿಗಳು ಮರಣಹೊಂದಿರುತ್ತವೆ. ಒಟ್ಟು ೪೬ ಕುರಿಗಳು ವಿಷಪೂರಿತ ಸೇವನೆಯಿಂದ ಮರಣ ಹೊಂದಿದ್ದು, ಆಂತ್ರಾಕ್ಸ್ ರೋಗ ಇದಕ್ಕೆ ಕಾರಣವಲ್ಲ. ೪೨ ಕುರಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಕುರಿಗಾಹಿ ಸುರಕ್ಷಾ ಯೋಜನೆಯಡಿಯಲ್ಲಿ ಪ್ರತಿ ಕುರಿಗೆ ೫ ಸಾವಿರ ರೂಗಳಂತೆ ಪರಿಹಾರ ನೀಡಲು ಕ್ರಮಕೈಗೊಳ್ಳಲಾಗಿದೆ. ವಾತಾವರಣದಲ್ಲಿ ಉಷ್ಣತೆಯ ಪ್ರಮಾಣ ಅಧಿಕವಾಗುತ್ತಿದ್ದು ಕುರಿ, ಮೇಕೆಗಳಿಗೆ ದಿನಕ್ಕೆ ೨ ಬಾರಿ ಶುದ್ಧ ನೀರು ಕುಡಿಸಲು ಹಾಗೂ ಕೆರೆ ಕಟ್ಟೆ ಗಳ ಬಳಿ ಬೆಳೆದಿರುವ ಜಂಡು, ಹಲಬು ಇತರೆ ಸಸ್ಯಗಳನ್ನು ಮೇಯಲು ಬಿಡಬಾರದೆಂದು ಅವರು ಮನವಿ ಮಾಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ