ಹುಳಿಯಾರು:ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಹಿಂದುಳಿದಿರುವ ಮಡಿವಾಳ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು.ಈ ನಿಟ್ಟಿನಲ್ಲಿ ಮಡಿವಾಳ ಜನಾಂಗದ ಸರ್ವಾಂಗೀಣ ಅಭಿವೃದ್ಧಿಗಾಗಿ ಡಾ.ಅನ್ನಪೂರ್ಣ ನೀಡಿರುವ ವರದಿ ಜಾರಿಗೆ ಪರಿಶೀಲಿಸಿ ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜಯಚಂದ್ರ ತಿಳಿಸಿದರು.
ಹಂದನಕೆರೆ ಹೋಬಳಿಯ ದೊಡ್ಡೆಣ್ಣೆಗೆರೆಯಲ್ಲಿ ಹಮ್ಮಿಕೊಂಡಿದ್ದ ಮಡಿವಾಳ ಜನಾಂಗದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ಸಂಘಟನೆ ಕೊರತೆಯಿಂದ ಸಮುದಾಯ ಯಾವುದೇ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ,ಮಡಿವಾಳ ಸಮಾಜವನ್ನು ಉತ್ತಮ ಸ್ಥಾನಕ್ಕೆ ತರುವುದಕ್ಕೆ ಶ್ರಮಿಸುವೆ ಎಂದ ಅವರು ಡಾ.ಅನ್ನಪೂರ್ಣ ವರದಿಯನ್ನು ಇಲಾಖೆ ಒಪ್ಪಿಕೊಂಡಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುತ್ತೇನೆ.ನಂತರ ಇಲಾಖೆ ಸಚಿವರು,ಅಧಿಕಾರಿಗಳು ಹಾಗೂ ಡಾ.ಅನ್ನಪೂರ್ಣ ಅವರೊಂದಿಗೂ ಚರ್ಚಿಸಿ ಸಾಧಕ ಬಾಧಕಗಳನ್ನು ಮುಖ್ಯ ಮಂತ್ರಿಗಳ ಗಮನಕ್ಕೆ ತಂದು ಮಡಿವಾಳ ಸಮಾಜದ ಏಳಿಗೆಗೆ ಅಗತ್ಯ ಅಂಶಗಳನ್ನೊಳಗೊಂಡಿರುವ ವರದಿ ಜಾರಿಗೆ ಶಿಫಾರಸ್ಸು ಮಾಡಲಾಗುವುದೆಂದರು.
ಶಾಸಕ ಸಿ,ಬಿ.ಸುರೇಶ್ ಬಾಬು ಮಾತನಾಡಿ ಸರ್ಕಾರದಿಂದ ಮಡಿವಾಳ ಸಮಾಜಕ್ಕೆ ಸಿಗಬೇಕಾದ ಸವಲತ್ತು ಸಿಗುತ್ತಿಲ್ಲ. ಧ್ವನಿ ಇಲ್ಲದ ಸಮುದಾಯದ ರಕ್ಷಣೆಗೆ ನಾವೂ ಸಹ ಕಟಿಬದ್ದರಾಗಿದ್ದು ಸಮಾಜ ಬಾಂಧವರು ಆರ್ಥಿಕ,ಶೈಕ್ಷಣಿಕ,ಸಾಮಾಜಿಕವಾಗಿ ಮುಂದೆಬರಬೇಕು ಎಂದರು.
ಸಂಸದ ಮುದ್ದಹನುಮೇಗೌಡ ಮಾತನಾಡಿ ಮಡಿವಾಳ ಜನಾಂಗದ ಅಭಿವೃದ್ಧಿಗಾಗಿ ನ್ಯಾಯ ಒದಗಿಸಿಕೊಡುವುದಾಗಿಯೂ ಹಾಗೂ ಬಸವಣ್ಣನವರ ಅನುಭವ ಮಂಟಪದ ಹಾಗೆ ಸುಮಾರು ೮ ಎಕರೆ ಜಾಗದಲ್ಲಿ ಸಮುದಾಯ ಭವನ ಕಟ್ಟಿಸಿಕೊಡುವುದಾಗಿಯೂ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಡಿವಾಳ ಮಾಚಿದೇವರ ಕುರಿತ ಪುಸ್ತಕವನ್ನು ಗಣ್ಯರು ಲೋಕಾರ್ಪಣೆಗೊಳಿಸಿದರು.
ಚಿತ್ರದುರ್ಗದ ಮಡಿವಾಳ ಮಠದ ಬಸವ ಮಾಚಿದೇವ ಸ್ವಾಮೀಜಿ,ಜಿಲ್ಲಾಧ್ಯಕ್ಷ ತಿಮ್ಮಯ್ಯ,ತಾಲ್ಲೂಕ್ ಅಧ್ಯಕ್ಷ ಸಿ.ಎಸ್.ನಟರಾಜು,ಮೈಸೂರು ಮಡಿವಾಳ ಸಂಘದ ಸದಸ್ಯ ಎಂ.ಎನ್.ರಾಜೇಶ್ ,ಪತ್ರಕರ್ತ ಚಿ.ನಿ.ಪುರುಷೋತ್ತಮ್ ಮುಂತಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ