ಹುಳಿಯಾರು:ಬೆಲೆ ಏರಿಕೆ ನಡುವೆಯೂ ಪಟ್ಟಣದಲ್ಲಿ ಯುಗಾದಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲು ಸಿದ್ದತೆ ನಡೆದಿದ್ದು ಹಬ್ಬದ ಗೌಜು, ಗದ್ದಲದ ಮಧ್ಯೆ ಗುರುವಾರ ನಡೆದ ಹಬ್ಬದ ಸಂತೆಯಲ್ಲಿ ಅಗತ್ಯ ವಸ್ತುಗಳಖರೀದಿ ಭರಾಟೆ ಜೋರಾಗಿ ಸಾಗಿತ್ತು.
ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ ಸಹ ಗುರುವಾರ ಹಬ್ಬದ ಸಂತೆಯಾದ್ದರಿಂದ ಎಲ್ಲಿ ನೋಡಿದರೂ ಜನವೋ ಜನ ಕಂಡುಬಂದರು.ಎಲ್ಲ ಅಂಗಡಿಗಳಲ್ಲಿ ಖರೀದಿ ಜೋರಾಗಿದ್ದು ಜನರನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸ ಪಡುತ್ತಿದ್ದರು..
ಯುಗಾದಿಗೆ ಹೊಸಬಟ್ಟೆ ತರುವ ಪರಿಪಾಠವಿರುವುದರಿಂದ ಬಟ್ಟೆ ಅಂಗಡಿಗಳಲ್ಲಿ ಜನ ಜಂಗುಳಿ ಕಂಡುಬಂತು. ರಸ್ತೆಗಳಲ್ಲಿಯೇ ರಾಶಿ ರಾಶಿ ಬಟ್ಟೆಗಳ ಖರೀದಿಸಹ ಭರ್ಜರಿಯಾಗಿ ನಡೆಯುತ್ತಿತ್ತು. ರಂಗನಾಥಸ್ವಾಮಿ ದೇವಾಲಯ ರಸ್ತೆ,ಬಸ್ ನಿಲ್ದಾಣದಲ್ಲಿ,ಆಸ್ಪತ್ರೆ ರಸ್ತೆಯಲ್ಲಿ ಭರ್ಜರಿ ಬಟ್ಟೆ ವ್ಯಾಪಾರ ನಡೆಯುತ್ತಿದ್ದು ಬಟ್ಟೆ ಖರೀದಿಗೆ ಜನ ಮುಗಿಬಿದ್ದ ದೃಶ್ಯ ಕಂಡುಬಂತು.
ಯುಗಾದಿಯೆಂದರೆ ಒಬ್ಬಟ್ಟಿನ ಹಬ್ಬವಾಗಿದ್ದು ಬೆಲ್ಲ, ಬೇಳೆಗಳ ಬೆಲೆ ದುಪ್ಪಟ್ಟಾಗಿದ್ದರೂ ಹಬ್ಬಕ್ಕೆ ಬೇಕಾದ ಸಾಮಾಗ್ರಿಗಳ ಖರೀದಿ ಜೋರಾಗಿಯೇ ಸಾಗಿದ್ದರೆ ಸಂತೆಯಲ್ಲಿ ಹೂವು ಹಣ್ಣು ತರಕಾರಿ ಖರೀದಿ ಸುಮಾರಿಗಿತ್ತು.
ಮಾರುಕಟ್ಟೆಯಲ್ಲಿ ಈರುಳ್ಳಿ ಮಾತ್ರ ಅಗ್ಗವಾಗಿದ್ದು ಇಪ್ಪತ್ತು ರೂಪಾಯಿಗೆ ಎರಡೂವರೆ ಕೇಜಿಯಂತೆ ಖರೀದಿ ನಡೆದಿತ್ತು.ಆಲೂಗಡ್ಡೆ ಕೆಜಿಗೆ೩೦,ಟೊಮ್ಯಾಟೊ,ಹೀರೆಕಾಯಿ ಕೇಜಿಗೆ ೨೦,ಬೀನ್ಸ್ ಕೇಜಿಗೆ ೮೦,ಮೆಣಸಿನಕಾಯಿ ಕೇಜಿಗೆ ೮೦ ರ ಬೆಲೆಯಿತ್ತು.
ಹಣ್ಣುಗಳ ದುಬಾರಿಯಾಗಿದ್ದು ಸೇಬು ೧೦೦ ರಿಂದ ೧೨೦,ಕಿತ್ತಲೆ ೮೦ ರಿಂದ ೧೨೦,ದ್ರಾಕ್ಷಿ ೮೦,ದಾಳಿಂಬೆ೧೦೦ಸಿದ್ದೋಟಿಹಣ್ಣೂ ಕೇಜಿಗೆ ೪೦ಕಲ್ಲಂಗ್ರಿ ೨೦ ,ಪುಟ್ಟ ಬಾಳೆಹಣ್ಣು ಕೇಜಿಗೆ ೪೫ ರಂತೆ ಮಾರಾಟ ನಡೆದಿತ್ತು.
ಯುಗಾದಿ ಹಬ್ಬಕ್ಕಾಗಿ ಬೆಂಗಳೂರಿನಿಂದ ವಾಪಸ್ಸು ತಮ್ಮ ಗ್ರಾಮಗಳಿಗೆ ಆಗಮಿಸುತ್ತಿರುವ ಪ್ರಯಾಣಿಕರಿಂದ ಬಸ್ ಗಳು ತುಂಬಿತುಳುಕುತ್ತಿದ್ದು ಬಸ್ ನಿಲ್ದಾಣಕ್ಕೆ ಗಿಜಿಗುಡುತ್ತಿತ್ತು.
ಯುಗಾದಿ ಎಂದರೆ ಎಣ್ಣೆ ಸ್ನಾನಮಾಡುವುದು ಸಂಪ್ರದಾಯವಾಗಿದ್ದು ಜನತೆ ನೀರು ಶೇಖರಿಸಲು ಪರದಾಡುತ್ತಿದ್ದರು.
-------------------------------------------------
ಈ ವರ್ಷ ಬಿಸಿಲಿನ ಧಗೆ ಜಾಸ್ತಿಯಾಗಿದ್ದು ಹುಳಿಯಾರಿನಲ್ಲಿ ೪೧ ಡಿಗ್ರಿ ತಾಪಮಾನ ದಾಖಲಾಗಿದ್ದು ಕರೆಂಟೇ ಇಲ್ಲದೆ ರಾತ್ರಿ ಕಳೆಯುವುದು ಹೇಗೆಂಬ ಚಿಂತೆ ಕಾಡುತ್ತಿದೆ.ಹಬ್ಬದ ಸಮಯದಲ್ಲಿ ಎರಡು ದಿನಗಳ ಮಟ್ಟಿಗೆ ಕರಂಟ್ ಸಮಸ್ಯೆ ಕಾಡದಂತೆ ಇಲಾಖೆ ಗಮನಕೊಡಬೇಕಿದೆ :ಸುರೇಶ್,ಮೊಬೈಲ್ ಷಾಪ್ ಮಾಲಿಕ
------------------------------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ